ADVERTISEMENT

ಅಂತರ ಜಿಲ್ಲಾ ವರ್ಗಾವಣೆ: ಒಂದೂವರೆ ವರ್ಷವಾದರೂ ಆರಂಭವಾಗದ ಪ್ರಕ್ರಿಯೆ

ಆದಿತ್ಯ ಕೆ.ಎ
Published 8 ಜೂನ್ 2024, 23:51 IST
Last Updated 8 ಜೂನ್ 2024, 23:51 IST
<div class="paragraphs"><p>ಪಾತ್ರಿನಿಧಿಕ ಚಿತ್ರ</p></div>

ಪಾತ್ರಿನಿಧಿಕ ಚಿತ್ರ

   

ಬೆಂಗಳೂರು: ಅಂತರ ಜಿಲ್ಲಾ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿ ಒಂದೂವರೆ ವರ್ಷ ಕಳೆದಿದ್ದರೂ ಪೊಲೀಸ್ ಕಾನ್‌ಸ್ಟೆಬಲ್‌ ಗಳಿಗೆ ವರ್ಗಾವಣೆ ಭಾಗ್ಯ ದೊರೆತಿಲ್ಲ.

ವಯಸ್ಸಾದ ಪೋಷಕರ ಯೋಗಕ್ಷೇಮ ನೋಡಿಕೊಂಡು ಸ್ವಂತ ಊರುಗಳಲ್ಲಿಯೇ ಕೆಲಸ ಮಾಡಲು ಬಯಸಿ ಅರ್ಜಿ ಸಲ್ಲಿಸಿದ್ದ ನೂರಾರು ಕಾನ್‌ಸ್ಟೆಬಲ್‌ಗಳು (ಪಿ.ಸಿ ಸಾಮಾನ್ಯ) ವರ್ಗಾವಣೆಗಾಗಿ ಕಾದಿದ್ದಾರೆ. ಪೊಲೀಸ್‌ ಇಲಾಖೆ ಆರಂಭಿಸಿದ ಆನ್‌ಲೈನ್‌ ಪೋರ್ಟಲ್‌ನಲ್ಲಿ ರಾಜ್ಯದ 3,286 ಮಂದಿ ಪರಸ್ಪರ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಯಾರಿಗೂ ವರ್ಗಾವಣೆ ಪತ್ರ ಕೈಸೇರಿಲ್ಲ.

ADVERTISEMENT

‘ಅರ್ಜಿಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕಳೆದ ಮೇ 31ರಂದು ಪೊಲೀಸ್‌ ಮಹಾನಿರ್ದೇಶಕ ರಿಗೆ ಗೃಹ ಸಚಿವ ಜಿ.ಪರಮೇಶ್ವರ ಅವರು ಪತ್ರ ಬರೆದಿದ್ದರು. ಆದರೂ, ಯಾವುದೇ ಪ್ರಕ್ರಿಯೆ ಆರಂಭವಾಗಿಲ್ಲ’ ಎಂದು ಸಿಬ್ಬಂದಿಯೊಬ್ಬರು ಹೇಳಿದರು.

‘ಪತಿ– ಪತ್ನಿ ಪ್ರಕರಣದಲ್ಲಿ ಮೂರು ತಿಂಗಳ ಹಿಂದೆಯೇ ರಾಜ್ಯದ 87 ಮಂದಿ ಪರಸ್ಪರ ವರ್ಗಾವಣೆ ಆಗಿದ್ದಾರೆ. ಸಾಮಾನ್ಯ ಕಾನ್‌ಸ್ಟೆಬಲ್‌ ಮಾತ್ರ ವೇದನೆ ಅನುಭವಿಸುವಂತಾಗಿದೆ’ ಎಂದು ಅಳಲು ತೋಡಿಕೊಂಡಿದ್ಧಾರೆ.

ರದ್ದುಗೊಂಡಿದ್ದ ಅಂತರ ಜಿಲ್ಲಾ ವರ್ಗಾವಣೆಗೆ 2022ರಲ್ಲಿ ಮತ್ತೆ ಸರ್ಕಾರ ಅವಕಾಶ ನೀಡಿತ್ತು. ಹಿಂದಿನ ಪೊಲೀಸ್‌ ಮಹಾನಿರ್ದೇಶಕರು (2023ರ ಮಾರ್ಚ್‌ 3) ಕೆಎಸ್‌ಪಿ ಪೋರ್ಟಲ್‌ ತೆರೆದು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದರು. 7 ವರ್ಷ ಪೂರೈಸಿದ ಸಾಮಾನ್ಯ ವರ್ಗದ ಸಿಬ್ಬಂದಿ ಹಾಗೂ 3 ವರ್ಷ ಪೂರೈಸಿದ ಮಾಜಿ ಸೈನಿಕ ಪೊಲೀಸ್‌ ಸಿಬ್ಬಂದಿ ಅರ್ಜಿ ಸಲ್ಲಿಸಿದ್ದರು. ಮೂರು ತಿಂಗಳಿಗೊಮ್ಮೆ, ಮೊದಲು ಅರ್ಜಿ
ಸಲ್ಲಿಸಿದವರಿಗೆ ಅವಕಾಶ ನೀಡಲಾಗುವುದು ಎಂದು ಷರತ್ತು ವಿಧಿಸಲಾಗಿತ್ತು. ಆದರೆ, ಯಾವುದೇ ಪ್ರಕ್ರಿಯೆ ನಡೆದಿಲ್ಲ ಎಂದು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.

‘ರಜೆಯೂ ಸಿಗುತ್ತಿಲ್ಲ’: ‘ಬೇರೆ ಬೇರೆ ಕಾರಣಕ್ಕೆ ಕುಟುಂಬದವರನ್ನು ನಾವು ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಕರೆತಂದಿಲ್ಲ. ವಯಸ್ಸಾದ ತಂದೆ –ತಾಯಿ ಮನೆಯಲ್ಲಿದ್ದಾರೆ. ಅವರಿಗೆ ಚಿಕಿತ್ಸೆ ಕೊಡಿಸಬೇಕು. ಒತ್ತಡದ ಕರ್ವವ್ಯದಿಂದ ಅಗತ್ಯ ಸಂದರ್ಭಗಳಲ್ಲಿ ರಜೆಯೂ ಸಿಗುತ್ತಿಲ್ಲ. ನಾವು ಬಯಸಿದ ಜಿಲ್ಲೆಗಳಿಗೆ ವರ್ಗಾವಣೆ ಮಾಡಿಕೊಡಿ’ ಎಂದು ಸಿಬ್ಬಂದಿ ಪಟ್ಟು ಹಿಡಿದಿದ್ದಾರೆ.

ಹಂತ ಹಂತವಾಗಿ ವರ್ಗಾವಣೆ ಮಾಡಿದರೆ ಬಂದೋಬಸ್ತ್‌ ಕೆಲಸಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಪತಿ–ಪತ್ನಿ ಪ್ರಕರಣದಲ್ಲಿ ವರ್ಗಾವಣೆ ಮಾಡಿ, ನಮಗೆ ಅನ್ಯಾಯ ಮಾಡಲಾಗುತ್ತಿದೆ
ಹೆಸರು ಹೇಳಲು ಇಚ್ಛಿಸದ ಕಾನ್‌ಸ್ಟೆಬಲ್
‘ಹೊಸದಾಗಿ ಸೇವಾ ಜ್ಯೇಷ್ಠತೆ’
‘ಒಂದು ಪೊಲೀಸ್ ಘಟಕದಿಂದ ಇನ್ನೊಂದು ಘಟಕಕ್ಕೆ ವರ್ಗಾವಣೆಯಾದರೆ ಅಂತಹ ಸಿಬ್ಬಂದಿ, ತಮ್ಮ ಸೇವಾ ಜ್ಯೇಷ್ಠತೆ ಬಿಟ್ಟುಕೊಡಬೇಕು. ಆ ಘಟಕದ ಸೇವಾ ಹಿರಿತನಕ್ಕೆ ಅನುಗುಣವಾಗಿ ಸೇವಾ ಜ್ಯೇಷ್ಠತೆ ಹೊಂದಲು ಬದ್ಧರಾಗಿ ರಬೇಕು’ ಎಂಬ ಷರತ್ತು ಸಹ ವಿಧಿಸಲಾಗಿತ್ತು. ಅದಕ್ಕೂ ನಾವು ಒಪ್ಪಿ ಅರ್ಜಿ ಸಲ್ಲಿಸಿದ್ದೇವೆ. ನಗರ ಪ್ರದೇಶಗಳಲ್ಲಿ ಎಂಟು ಅಥವಾ ಹತ್ತು ವರ್ಷವಾದ ಮೇಲೆ ಸಹಜವಾಗಿಯೇ ಬಡ್ತಿ (ಹೆಡ್ ಕಾನ್‌ಸ್ಟೆಬಲ್‌) ದೊರೆಯುತ್ತದೆ. ಸ್ವಂತ ಊರಿಗೆ ತೆರಳಲು ಬಡ್ತಿಯನ್ನೇ ತ್ಯಾಗ ಮಾಡುತ್ತಿದ್ದೇವೆ. ಆದರೂ, ಇಲಾಖೆ ಪ್ರಕ್ರಿಯೆ ಆರಂಭಿಸಿಲ್ಲ’ ಎಂದು ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ವರ್ಗಾವಣೆ ಕೋರಿರುವ ಅರ್ಜಿಗಳ ವಿವರ
ಜಿಲ್ಲೆ; ಹೊರಕ್ಕೆ; ಒಳಕ್ಕೆ ಬೆಂಗಳೂರು ನಗರ;1,589;50 ಮಂಗಳೂರು ನಗರ;212;1 ಹುಬ್ಬಳ್ಳಿ–ಧಾರವಾಡ ನಗರ;44;123 ಮೈಸೂರು ನಗರ;37;169 ಕಲಬುರಗಿ ನಗರ;5;116 ಬೆಳಗಾವಿ ನಗರ;46;202 ಬೆಂಗಳೂರು ಜಿಲ್ಲೆ;73;8 ರಾಮನಗರ;72;8 ತುಮಕೂರು;103;24 ಮೈಸೂರು ಜಿಲ್ಲೆ;39;18 ಹಾಸನ;7;129 ಕೊಡಗು;58;4 ಮಂಡ್ಯ;73;7 ದಕ್ಷಿಣ ಕನ್ನಡ ಜಿಲ್ಲೆ;175;3 ಉಡುಪಿ;82;3 ಉತ್ತರ ಕನ್ನಡ;122;40 ಶಿವಮೊಗ್ಗ;112;83 ಕಲಬುರಗಿ;45;138 ಬೀದರ್‌;45;22 ಎಸ್‌ಪಿ ರೈಲ್ವೆ;56;1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.