ADVERTISEMENT

ಪೊಲೀಸ್ ಪರೀಕ್ಷೆಯಲ್ಲಿ ನಕಲು: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 19:45 IST
Last Updated 23 ನವೆಂಬರ್ 2020, 19:45 IST

ಬೆಂಗಳೂರು: ಕೆಎಸ್‌ಆರ್‌ಪಿ ಹಾಗೂ ಐಆರ್‌ಬಿ ಕಾನ್‌ಸ್ಟೆಬಲ್‌ ಹುದ್ದೆಗಳ ಪರೀಕ್ಷೆಯಲ್ಲಿ ಬ್ಲೂಟೂತ್ ಸಾಧನದಿಂದ ನಕಲು ಮಾಡುತ್ತಿದ್ದ ಹಾಗೂ ನಕಲಿ ಅಭ್ಯರ್ಥಿಗಳಾಗಿ ಪರೀಕ್ಷೆ ಬರೆಯುತ್ತಿದ್ದ ಮೂವರನ್ನು ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಪರೀಕ್ಷೆಯಲ್ಲಿ ಬ್ಲೂಟೂತ್ ಸಾಧನ ಬಳಸಿದ್ದ ಜಮಖಂಡಿಯ ಹನುಮಂತಪ್ಪ ಗಂಗಪ್ಪ ಬಿಲ್ಲೂರು ಹಾಗೂ ಅಭ್ಯರ್ಥಿಗಳ ಬದಲಿಗೆ ಪರೀಕ್ಷೆ ಬರೆಯುತ್ತಿದ್ದ ಗೋಕಾಕ್‌ನ ಗುರುನಾಥ್ ವಡ್ಡರ್, ಮಹಾಂತೇಶ್ ನಂದಿ ಬಂಧಿತರು.

‘ಇಂದಿರಾನಗರದ ಕೆಎಸ್‍ಇಇ ಶಾಲೆಯಲ್ಲಿ ನಡೆದ ಕೆಎಸ್‌ಆರ್‌ಪಿ ಪರೀಕ್ಷೆ ವೇಳೆ ಹನುಮಂತಪ್ಪ ಬೇರೊಬ್ಬರೊಂದಿಗೆ ಮಾತನಾಡುತ್ತಿರುವುದು ಮೇಲ್ವಿಚಾರಕ ಗಮನಕ್ಕೆಬಂದು, ಪರಿಶೀಲಿಸಿದಾಗ ಕಿವಿಯಲ್ಲಿ ಬ್ಲೂಟೂತ್ ಪತ್ತೆಯಾಗಿದೆ. ಬೇರೊಬ್ಬರಿಂದ ಉತ್ತರಗಳನ್ನು ನಕಲು ಮಾಡುತ್ತಿರುವುದು ಪತ್ತೆಯಾಯಿತು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

‘ಇದೇ ಪರೀಕ್ಷಾ ಕೇಂದ್ರದಲ್ಲಿ ಗುರುನಾಥ್ ವಡ್ಡರ್ ಎಂಬಾತ ಸಾಗರ್ ವಡ್ಡರ್ ಅಭ್ಯರ್ಥಿ ಹೆಸರಿನಲ್ಲಿ ಪರೀಕ್ಷೆ ಬರೆಯಲು ಬಂದಿದ್ದ. ಹಣಕ್ಕಾಗಿ ಅಭ್ಯರ್ಥಿಗಳ ಪರ ಪರೀಕ್ಷೆ ಬರೆದಿದ್ದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ’.

‘ಜೀವನ್ ಬಿಮಾನಗರದ ಸೇಕ್ರೆಡ್ ಹಾರ್ಟ್ ಹೈಸ್ಕೂಲ್‍ನ ಪರೀಕ್ಷಾ ಕೇಂದ್ರದಲ್ಲಿ ಸಿದ್ಧಾರೂಢ ಬಣಜ್ ಹೆಸರಿನಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಮಹಾಂತೇಶ್ ನಂದಿಯನ್ನೂ ಬಂಧಿಸ ಲಾಗಿದೆ. ಈ ಸಂಬಂಧ ಜೀವನ್‍ಬಿಮಾ ನಗರದಲ್ಲಿ ಒಂದು ಹಾಗೂ ಇಂದಿರಾನಗರ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದು, ತನಿಖೆ ಮುಂದುವರಿದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ನಕಲಿ ಅಭ್ಯರ್ಥಿಗಳಾಗಿ ಪರೀಕ್ಷೆಗೆ ಹಾಜರಾಗಿದ್ದ ಕಾನ್‌ಸ್ಟೆಬಲ್‌ ಸೇರಿದಂತೆ ಇಬ್ಬರನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.