ಬೆಂಗಳೂರು: ಹ್ಯಾಪಿಯೆಸ್ಟ್ ಹೆಲ್ತ್ ಸಂಸ್ಥೆ ಹಾಗೂ ನಗರ ಪೊಲೀಸ್ ಇಲಾಖೆ ಸಹಯೋಗದಲ್ಲಿ ಪೊಲೀಸರ ಆರೋಗ್ಯ ತಪಾಸಣೆಗೆ ‘ಖುಷಿ’ ಯೋಜನೆ ಜಾರಿ ಮಾಡಲಾಗಿದೆ.
ನಗರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ ಅವರು ಈ ಯೋಜನೆಗೆ ಚಾಲನೆ ನೀಡಿದರು.
ಪೊಲೀಸರ ಆರೋಗ್ಯ ನಿರ್ವಹಣೆಗೆ ರೂಪಿಸಲಾದ ಯೋಜನೆ ಇದಾಗಿದೆ. ಮಧುಮೇಹ, ಅಧಿಕ ರಕ್ತದ ಒತ್ತಡ, ಬೊಜ್ಜು, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ತಪಾಸಣೆ ಮಾಡಿಸಿಕೊಳ್ಳಬಹುದು. ಪೊಲೀಸ್ ವೃತ್ತಿಯಲ್ಲಿ ದೀರ್ಘಾವಧಿ ಕೆಲಸ, ಅತಿಯಾದ ಒತ್ತಡದ ವಾತಾವರಣ, ಅನಿಯಮಿತ ದಿನಚರಿಗಳಿರುತ್ತವೆ. ಪೊಲೀಸರ ಆರೋಗ್ಯದ ಕಾಳಜಿ ಹಾಗೂ ನಿರ್ವಹಣೆ ಸುಲಭವಾಗಿಲ್ಲ. ವೈಯಕ್ತಿಕ ಯೋಗಕ್ಷೇಮದ ಜೊತೆಗೆ ವೃತ್ತಿಪರ ದಕ್ಷತೆ ಮತ್ತು ಜೀವನದ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತದೆ. ಜೀವನಶೈಲಿಯ ಸಮಸ್ಯೆಗಳು ಮತ್ತು ಪೊಲೀಸರು ಎದುರಿಸುತ್ತಿರುವ ಅನೇಕ ಆರೋಗ್ಯ ಸವಾಲುಗಳನ್ನು ಗಮನದಲ್ಲಿ ಇರಿಸಿಕೊಂಡು ‘ಖುಷಿ ಯೋಜನೆ’ ಜಾರಿಗೆ ತರಲಾಗಿದೆ ಎಂದು ಹ್ಯಾಪಿಯೆಸ್ಟ್ ಹೆಲ್ತ್ ಯೋಜನೆ ಅಧಿಕಾರಿಗಳು ತಿಳಿಸಿದರು.
ಹ್ಯಾಪಿಯೆಸ್ಟ್ ಹೆಲ್ತ್‌ನ ಮುಖ್ಯ ಸಂಪಾದಕ ರವಿ ಜೋಶಿ ಮಾತನಾಡಿ, ‘ಸಮಾಜದ ಬೆನ್ನೆಲುಬು ಆಗಿರುವ ಪೊಲೀಸ್ ಸಿಬ್ಬಂದಿ ಸಮತೋಲನ ಜೀವನ ನಡೆಸಲು ಸಹಾಯ ಮಾಡುವುದೇ ಈ ಯೋಜನೆಯ ಉದ್ದೇಶ’ ಎಂದು ಹೇಳಿದರು.
‘ಮಧುಮೇಹ, ಅಧಿಕ ರಕ್ತದ ಒತ್ತಡ ಹಾಗೂ ಬೊಜ್ಜಿನಂತಹ ಸಮಸ್ಯೆಗಳನ್ನು ಪರೀಕ್ಷಿಸದೇ ಬಿಟ್ಟರೆ ಅವುಗಳು ಸದ್ದಿಲ್ಲದೇ ಜೀವನದ ಗುಣಮಟ್ಟ ಹಾಳು ಮಾಡುತ್ತವೆ’ ಎಂದು ಹ್ಯಾಪಿಯೆಸ್ಟ್ ಹೆಲ್ತ್‌ನ ಸಿಇಒ ಶ್ರೀನಿವಾಸ್ ನಾರಾಯಣ್ ಹೇಳಿದರು.
‘ಪ್ರಾಜೆಕ್ಟ್ ಖುಷಿ’ ಯೋಜನೆ ಅಡಿ ಮೂರು ತಿಂಗಳು ಆರೋಗ್ಯ ತಪಾಸಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.