ADVERTISEMENT

ಬೆಂಗಳೂರು | ರೇವ್ ಪಾರ್ಟಿ ಮೇಲೆ ಪೊಲೀಸರ ದಾಳಿ: 31 ಮಂದಿ ವಶಕ್ಕೆ, ವಿಚಾರಣೆ

​ಪ್ರಜಾವಾಣಿ ವಾರ್ತೆ
Published 25 ಮೇ 2025, 19:26 IST
Last Updated 25 ಮೇ 2025, 19:26 IST
<div class="paragraphs"><p>ರೇವ್ ಪಾರ್ಟಿ (ಸಾಂದರ್ಭಿಕ ಚಿತ್ರ)</p></div>

ರೇವ್ ಪಾರ್ಟಿ (ಸಾಂದರ್ಭಿಕ ಚಿತ್ರ)

   

ಬೆಂಗಳೂರು: ದೇವನಹಳ್ಳಿ ತಾಲ್ಲೂಕಿನ‌ ಕನ್ನಮಂಗಲ ಗೇಟ್ ಸಮೀಪದ ಖಾಸಗಿ ಜಮೀನಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ದೇವನಹಳ್ಳಿ ಪೊಲೀಸರು ಭಾನುವಾರ ಬೆಳಿಗ್ಗೆ ದಾಳಿ ಮಾಡಿದ್ದಾರೆ.

ದೇವನಹಳ್ಳಿ ಎಸಿಪಿ ನವೀನ್ ನೇತೃತ್ವದ ತಂಡ ದಾಳಿ ನಡೆಸಿ, ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಯುವಕ, ಯುವತಿಯರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದೆ.

ADVERTISEMENT

‘ಕನ್ನಮಂಗಲ ಗೇಟ್ ಬಳಿಯ ಫಾರ್ಮ್​ ಹೌಸ್​ನಲ್ಲಿ ಪಾರ್ಟಿ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ದೇವನಹಳ್ಳಿ ಪೊಲೀಸರು ಬೆಳಗಿನ ಜಾವ 5 ಗಂಟೆಯಲ್ಲಿ ದಾಳಿ ನಡೆಸಿದ್ದಾರೆ. ಪರಿಶೀಲನೆ ನಡೆಸಿದಾಗ ವ್ಯಕ್ತಿಯೊಬ್ಬರ ಜನ್ಮ ದಿನದ ಅಂಗವಾಗಿ ಪಾರ್ಟಿ ಆಯೋಜನೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ. ಮಾದಕ ವಸ್ತುಗಳನ್ನು ಬಳಕೆ ಮಾಡಿರುವುದು ಕಂಡು ಬಂದಿದೆ. 24 ಯುವಕರು, 7 ಯುವತಿಯರು ಸೇರಿದಂತೆ ಒಟ್ಟು 31 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಪಾರ್ಟಿಯಲ್ಲಿ ಡ್ರಗ್ ಪೆಡ್ಲರ್ ಹಾಗೂ ಮಾದಕ ವಸ್ತು ಸೇವನೆ ಮಾಡುವವರು ಭಾಗವಹಿಸಿದ್ದರು. 31 ಜನರ ರಕ್ತ ಮತ್ತು ಮೂತ್ರದ ಮಾದರಿ ಸಂಗ್ರಹಿಸಿ ಎಫ್​ಎಸ್​ಎಲ್‌ಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಪಾರ್ಟಿಯಲ್ಲಿ ಭಾಗವಹಿಸಿದ ಕೆಲವರಲ್ಲಿ ಅಲ್ಪ ಪ್ರಮಾಣದ ಕೊಕೇನ್ ಸೇರಿದಂತೆ ಮಾದಕ ವಸ್ತುಗಳು ಸಿಕ್ಕಿದ್ದು, ಜಪ್ತಿ ಮಾಡಲಾಗಿದೆ. ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ’ ಎಂದು ಈಶಾನ್ಯ ವಲಯ ಡಿಸಿಪಿ ವಿ.ಜೆ.ಸಜೀತ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.