ADVERTISEMENT

ಫ್ಲೆಕ್ಸ್, ಬ್ಯಾನರ್‌ಗಳ ನಿಯಂತ್ರಣ: ಪೊಲೀಸ್ ಠಾಣಾವಾರು ನೋಡಲ್ ಅಧಿಕಾರಿ

ಫ್ಲೆಕ್ಸ್, ಬ್ಯಾನರ್‌ಗಳ ನಿಯಂತ್ರಣಕ್ಕೆ ಬಿಬಿಎಂಪಿ–ಪೊಲೀಸ್‌ ಇಲಾಖೆ ನಡುವೆ ಸಮನ್ವಯ

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 15:50 IST
Last Updated 30 ಜುಲೈ 2024, 15:50 IST
ಸಮನ್ವಯ ಸಭೆಯಲ್ಲಿ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌, ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹಾಗೂ ನಗರ ಪೊಲೀಸ್‌ ಕಮಿಷನರ್‌ ದಯಾನಂದ್‌ ಭಾಗವಹಿಸಿದ್ದರು
ಸಮನ್ವಯ ಸಭೆಯಲ್ಲಿ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌, ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹಾಗೂ ನಗರ ಪೊಲೀಸ್‌ ಕಮಿಷನರ್‌ ದಯಾನಂದ್‌ ಭಾಗವಹಿಸಿದ್ದರು   

ಬೆಂಗಳೂರು: ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳ ನಿಯಂತ್ರಣಕ್ಕಾಗಿ ಬಿಬಿಎಂಪಿ ಹಾಗೂ ಪೊಲೀಸ್‌ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಲಿದ್ದು, ವಲಯ ವ್ಯಾಪ್ತಿಯ ಪೊಲೀಸ್‌ ಠಾಣಾವಾರು ನೋಡಲ್‌ ಅಧಿಕಾರಿಯನ್ನು ನಿಯೋಜಿಸಲು ನಿರ್ಧರಿಸಲಾಗಿದೆ.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹಾಗೂ ನಗರ ಪೊಲೀಸ್‌ ಕಮಿಷನರ್‌ ಬಿ. ದಯಾನಂದ ನೇತೃತ್ವದಲ್ಲಿ ಮಂಗಳವಾರ ನಡೆದ ಬಿಬಿಎಂಪಿ ಹಾಗೂ ಪೊಲೀಸ್ ಅಧಿಕಾರಿಗಳ ಸಮನ್ವಯ ಸಭೆಯಲ್ಲಿ ಪ್ರಮಾಣಿತ ಕಾರ್ಯಾಚರಣೆ ವಿಧಾನದ (ಎಸ್‌ಒಪಿ) ಮಾರ್ಗಸೂಚಿಗಳನ್ನು ಹೊರಡಿಸಲು ತೀರ್ಮಾನಿಸಲಾಯಿತು.

ಪ್ರತಿ ಠಾಣೆಯ ವ್ಯಾಪ್ತಿಯಲ್ಲಿ ಪಾಲಿಕೆ ಮತ್ತು ಪೊಲೀಸ್‌ ಇಲಾಖೆಯಿಂದ ತಲಾ ಒಬ್ಬ ನೋಡಲ್‌ ಅಧಿಕಾರಿಯನ್ನು ನೇಮಿಸಲಾಗುತ್ತದೆ. ಇದರಿಂದ ಅಧಿಕಾರಿಗಳ ಮಧ್ಯೆ ಸಮನ್ವಯ ಸಾಧಿಸಲು ನೆರವಾಗುತ್ತದೆ. ಪಾಲಿಕೆ ಅಧಿಕಾರಿಗಳು ಫ್ಲೆಕ್ಸ್ ಮುದ್ರಣ ಘಟಕಗಳ ಪಟ್ಟಿ ಮಾಡಿ, ಪೊಲೀಸ್ ಸಿಬ್ಬಂದಿಯೊಂದಿಗೆ ಘಟಕಗಳಿಗೆ ಭೇಟಿ ನೀಡಿ, ಅನಧಿಕೃತ ಜಾಹೀರಾತುಗಳನ್ನು ಮುದ್ರಿಸದಂತೆ ಎಚ್ಚರಿಕೆ ನೀಡಬೇಕು. ಉಲ್ಲಂಘಿಸಿದವರಿಗೆ ದಂಡ ವಿಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತುಷಾರ್‌ ಗಿರಿನಾಥ್ ತಿಳಿಸಿದರು.

ADVERTISEMENT

ಪಾಲಿಕೆಯ ವಲಯ ವ್ಯಾಪ್ತಿಯಲ್ಲಿ ಅಳವಡಿಸುವ ಅನಧಿಕೃತ ಜಾಹೀರಾತುಗಳ ಮೇಲೆ ರಾತ್ರಿ ವೇಳೆ ನಿಗಾವಹಿಸಲು ಪ್ರಹರಿ ವಾಹನ ನಿಯೋಜಿಸಲಾಗುತ್ತಿದೆ. ಪೊಲೀಸ್‌ ಸಿಬ್ಬಂದಿಯೂ ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದು, ಅವರೂ ಈ ಬಗ್ಗೆ ನಿಗಾವಹಿಸಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ದಯಾನಂದ ಮಾತನಾಡಿ, ‘ಅನಧಿಕೃತವಾಗಿ ಅಳವಡಿಸುತ್ತಿರುವ ಫ್ಲೆಕ್ಸ್, ಬ್ಯಾನರ್‌ಗಳಿಂದ ಸಮಸ್ಯೆಗಳಾಗುತ್ತಿವೆ. ಅದನ್ನು ನಿಯಂತ್ರಿಸುವಲ್ಲಿ ಪಾಲಿಕೆಗೆ ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ’ ಎಂದರು.

ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸುವವರ ವಿರುದ್ಧ ಕರ್ನಾಟಕ ತೆರೆದ ಸ್ಥಳಗಳು ಕಾಯ್ದೆ (ಕೆಒಪಿಡಿ) ಜೊತೆಗೆ ಇತರೆ ಕಾಯ್ದೆ ಅಡಿಯಲ್ಲಿಯೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ಬಿಬಿಎಂಪಿ ವಲಯ ಆಯುಕ್ತರಾದ ಡಾ. ಆರ್.ಎಲ್ ದೀಪಕ್, ರಮೇಶ್, ಶಿವಾನಂದ್, ರಮ್ಯಾ, ಸ್ನೇಹಲ್, ವಿನೋತ್ ಪ್ರಿಯಾ, ಹೆಚ್ಚುವರಿ ಪೊಲೀಸ್ ಕಮಿಷರ್‌ಗಳಾದ ಸತೀಶ್ ಕುಮಾರ್, ರಮಣ ಗುಪ್ತ, ಡಿಸಿಪಿಗಳು, ಎಸಿಪಿಗಳು, ಬಿಬಿಎಂಪಿ ಜಾಹೀರಾತು ವಿಭಾಗದ ಉಪ ಆಯುಕ್ತರು, ಸಹಾಯಕ ಆಯುಕ್ತರು ಸಭೆಯಲ್ಲಿದ್ದರು.

ಫ್ಲೆಕ್ಸ್‌ ನಿಯಂತ್ರಣಕ್ಕೆ ಆ್ಯಪ್‌

ನಗರದಲ್ಲಿ ಅನಧಿಕೃತವಾಗಿ ಅಳವಡಿಸುತ್ತಿರುವ ಫ್ಲೆಕ್ಸ್ ಬ್ಯಾನರ್‌ಗಳನ್ನು ನಿಯಂತ್ರಿಸಲು ಹಾಗೂ ತೆರವುಗೊಳಿಸಲು ಅನುವಾಗುವಂತೆ ಬಿಬಿಎಂಪಿಯಿಂದ ಮೊಬೈಲ್‌ ಅಪ್ಲಿಕೇಷನ್ ಸಿದ್ದಪಡಿಸಲು ಚಿಂತಿಸಲಾಗಿದೆ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌ ತಿಳಿಸಿದರು. ನಗರದಲ್ಲಿ ಜುಲೈ 1ರಿಂದ 8500ಕ್ಕೂ ಹೆಚ್ಚು ಫ್ಲೆಕ್ಸ್/ಬ್ಯಾನರ್ ಗಳನ್ನು ತೆರವುಗೊಳಿಸಿ 180ಕ್ಕೂ ಹೆಚ್ಚು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೇಳಿದರು. ಅನಧಿಕೃತ ಫ್ಲೆಕ್ಸ್/ ಬ್ಯಾನರ್‌ಗಳು ಕಂಡುಬಂದರೆ ಪಾಲಿಕೆಯ ಸಹಾಯವಾಣಿ 1533ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.