ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಶೋಭಾ ಡ್ರೀಮ್ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ವೊಂದರಲ್ಲಿ ಮನೆ ಕೆಲಸದಾಕೆಯನ್ನು ಕಳ್ಳತನ ಪ್ರಕರಣದಲ್ಲಿ ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ತೂರು ಪೊಲೀಸ್ ಠಾಣೆಯ ಅಪರಾಧ ವಿಭಾಗದ ಮೂವರು ಪೊಲೀಸರನ್ನು ವೈಟ್‌ಫೀಲ್ಡ್ ಡಿಸಿಪಿ ಪರಶುರಾಮ್ ಅವರು ಅಮಾನತುಗೊಳಿಸಿ ಮಂಗಳವಾರ ರಾತ್ರಿ ಆದೇಶಿಸಿದ್ದಾರೆ.
ಗೃಹ ಸಚಿವ ಜಿ.ಪರಮೇಶ್ವರ ಹಾಗೂ ಸೀಮಾಂತ್‌ಕುಮಾರ್ ಸಿಂಗ್ ಅವರು ಪ್ರಕರಣದ ತನಿಖೆಗೆ ಆದೇಶಿಸಿದ್ದರು. ಮಾರತ್‌ಹಳ್ಳಿ ವಿಭಾಗದ ಎಸಿಪಿಯವರು ತನಿಖೆ ನಡೆಸಿ ವರದಿ ಸಲ್ಲಿಸಿದ ಬೆನ್ನಲ್ಲೇ ಸಂಜಯ್ ರಾಥೋಡ್, ಸಂತೋಷ್ ಕುದ್ರಿ ಹಾಗೂ ಅರ್ಚನಾ ಅವರನ್ನು ಅಮಾನತು ಮಾಡಲಾಗಿದೆ. ಪಿಎಸ್‌ಐ ಮೌನೇಶ್ ದೊಡ್ಡಮನಿ ಅವರು ಎನ್‌ಸಿಆರ್ ದಾಖಲಿಸಿಕೊಂಡು ಠಾಣೆಯಿಂದ ಹೊರಹೋಗಿ ಲೋಪ ಎಸಗಿದ್ದಾರೆ. ಅವರ ವಿರುದ್ಧ ರೂಲ್ಸ್ 7 ಜಾರಿ ಮಾಡಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ಶೋಭಾ ಡ್ರೀಮ್ ಅಪಾರ್ಟ್‌ಮೆಂಟ್‌ನಲ್ಲಿ ಪ್ರಿಯಾಂಕಾ ಅವರಿಗೆ ಸೇರಿದ ಫ್ಲ್ಯಾಟ್‌ನಲ್ಲಿ ಹೊರರಾಜ್ಯದ ಸುಂದರಿ ಬೀಬಿ (34) ಅವರು ಕೆಲಸ ಮಾಡುತ್ತಿದ್ದರು. ಫ್ಲ್ಯಾಟ್‌ನಲ್ಲಿ ಕಸ ಗುಡಿಸುವಾಗ ಅವರಿಗೆ ₹100 ಸಿಕ್ಕಿತ್ತು. ಅದನ್ನು ಮಾಲೀಕರಿಗೆ ವಾಪಸ್ ಕೊಟ್ಟಿದ್ದರು. ಆದರೆ, ಹಣದ ಜೊತೆಗೆ ಮನೆಯಲ್ಲಿ ವಜ್ರದ ಉಂಗುರ ಸಹ ಕಳ್ಳತನವಾಗಿದೆ ಎಂದು ಆರೋಪಿಸಿದ್ದ ಮಾಲೀಕರು, ವರ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಸುಂದರಿ ಬೀಬಿ ಹಾಗೂ ಅವರ ಪತಿಯನ್ನು ಠಾಣೆಗೆ ಕರೆದೊಯ್ದು ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿತ್ತು.
ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯ ಮಹಿಳಾ ಆಯೋಗವೂ ಸೂಚನೆ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.