ADVERTISEMENT

ಯಶವಂತಪುರದಲ್ಲಿ ಜೆಡಿಎಸ್ ಗೆಲ್ಲದಿದ್ದರೆ ರಾಜಕೀಯ ನಿವೃತ್ತಿ: ಎಚ್.ಡಿ.ಕುಮಾರಸ್ವಾಮಿ

ಕ್ಷೇತ್ರದ ಅಭ್ಯರ್ಥಿ ಜವರಾಯಿಗೌಡ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 4:38 IST
Last Updated 7 ಫೆಬ್ರುವರಿ 2023, 4:38 IST
ಜೆಡಿಎಸ್ ಕಾರ್ಯಕರ್ತರು ಆಯೋಜಿಸಿದ್ದ ಸಭೆಯಲ್ಲಿ ಎಚ್.ಡಿ.ಕುಮಾರಸ್ವಾಮಿ, ಶಾಸಕರಾದ ಅನ್ನದಾನಿ, ಮಂಜುನಾಥ್, ಅಭ್ಯರ್ಥಿ ಜವರಾಯಿಗೌಡ, ನರಸಿಂಹಮೂರ್ತಿ, ಪಂಚಲಿಂಗಯ್ಯ, ಕೇಶವಮೂರ್ತಿ ಇದ್ದರು
ಜೆಡಿಎಸ್ ಕಾರ್ಯಕರ್ತರು ಆಯೋಜಿಸಿದ್ದ ಸಭೆಯಲ್ಲಿ ಎಚ್.ಡಿ.ಕುಮಾರಸ್ವಾಮಿ, ಶಾಸಕರಾದ ಅನ್ನದಾನಿ, ಮಂಜುನಾಥ್, ಅಭ್ಯರ್ಥಿ ಜವರಾಯಿಗೌಡ, ನರಸಿಂಹಮೂರ್ತಿ, ಪಂಚಲಿಂಗಯ್ಯ, ಕೇಶವಮೂರ್ತಿ ಇದ್ದರು   

ಕೆಂಗೇರಿ: ಯಶವಂತಪುರ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಯೇ ತೀರುತ್ತೇನೆ. ವಿಫಲವಾದಲ್ಲಿ ರಾಜಕೀಯದಿಂದ ನಿವೃತ್ತಿ ಪಡೆಯುವೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದರು.

ಕಾರ್ಯಕರ್ತರ ಸಭೆಯಲ್ಲಿ ಜವರಾಯಿಗೌಡ ಅವರನ್ನು ಕ್ಷೇತ್ರದ ಆಭ್ಯರ್ಥಿಯಾಗಿ ಘೋಷಿಸಿ ಅವರು ಮಾತನಾಡಿದರು.

ಕಳೆದ ಮೂರು ಚುನಾವಣೆಗಳಲ್ಲಿ ಜವರಾಯಿಗೌಡ ಕಡಿಮೆ ಅಂತರದಲ್ಲಿ ಸೋತಿದ್ದಾರೆ. ಕ್ಷೇತ್ರದ ಮತದಾರರ ಅನುಕಂಪ ಅವರ ಮೇಲಿದೆ. ಈ ಬಾರಿ ಜನರು ಅವರನ್ನು ಕೈ ಹಿಡಿಯಲಿದ್ದಾರೆ. ವೈಯಕ್ತಿಕವಾಗಿ ಬೆಂಬಲ ನೀಡುವ ಅವರನ್ನು ಜಯಶೀಲರನ್ನಾಗಿ ಮಾಡಿಯೇ ತೀರುವೆ ಎಂದು ಹೇಳಿದರು.

ADVERTISEMENT

ತ್ಯಾಜ್ಯ ವಿಲೇವಾರಿ ದೊಡ್ಡ ಮಾಫಿಯವಾಗಿದೆ. ತ್ಯಾಜ್ಯ ಸಂಸ್ಕರಣೆಗೆ ಹಲವಾರು ನೂತನ ವಿಧಾನಗಳಿವೆ. ಸರ್ಕಾರ ಈ ಬಗ್ಗೆ ಬದ್ಧತೆ ತೋರುತ್ತಿಲ್ಲ. ₹ 8 ಸಾವಿರ ಕೋಟಿ ಖರ್ಚಾದರೂ ಬೆಂಗಳೂರಿನಲ್ಲಿ ಗುಂಡಿಗಳ ಸಂಖ್ಯೆ ಕಡಿಮೆಯಾಗಿಲ್ಲ ಎಂದು ಅವರು ದೂರಿದರು.

ಕಾಂಗ್ರೆಸ್- ಬಿಜೆಪಿ ಒಳ ಮೈತ್ರಿಯಿಂದ ಕಳೆದ ಉಪಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಯಿತು ಎಂದು ಅವರು ತಿಳಿಸಿದರು.

‘ಯಶವಂತಪುರ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ನಾನಲ್ಲ. ಜನಸೇವೆ ಮಾಡಲು ಅಧಿಕಾರವೊಂದೇ ಮಾರ್ಗವಲ್ಲ’ ಎಂದು ಜೆಡಿಎಸ್ ಮುಖಂಡ ಜವರಾಯಿಗೌಡ ಅವರು ಹೇಳಿದರು.

ಅಭ್ಯರ್ಥಿಯಾಗಲು ಒತ್ತಾಯ: ‘ಕುಮಾರಸ್ವಾಮಿ ಅವರೇ ಯಶವಂತಪುರ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು. ಕಳೆದ ಮೂರು ಬಾರಿ ನಡೆದ ಚುನಾವಣೆಯಲ್ಲೂ ಜೆಡಿಎಸ್ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಬಾರಿ ನೀವೇ ಸ್ಪರ್ಧಿಸಿದರೆ ಕಾರ್ಯ ಕರ್ತರ ವಿಶ್ವಾಸ ಇಮ್ಮಡಿಗೊಳ್ಳಲಿದೆ’ ಎಂದು ಕಾರ್ಯಕರ್ತರು ಒತ್ತಾಯಿಸಿದರು.

ಶಾಸಕರಾದ ಅನ್ನದಾನಿ, ಎ.ಮಂಜುನಾಥ್ ಹಾಗೂ ಪಂಚಲಿಂಗಯ್ಯ, ಹನುಮಂತೇಗೌಡ, ಕುಂಬಳಗೂಡು ನರಸಿಂಹಮೂರ್ತಿ, ಕೇಶವ ಮೂರ್ತಿ, ಕಿಟ್ಟಿ ಮತ್ತು ಅಪಾರ ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.