ಬೆಂಗಳೂರು: ರಾಜಕಾರಣಿಗಳು ಚುನಾವಣೆಯ ಸಂದರ್ಭದಲ್ಲಿ ಮಾತ್ರ ಸಮರ್ಪಣೆಯ ಮನೋಭಾವ ವ್ಯಕ್ತಪಡಿಸುತ್ತಾರೆ. ಇದರಿಂದ ಪ್ರಯೋಜನವಿಲ್ಲ. ಸಮಾಜದಿಂದ ಪಡೆದಿರುವುದನ್ನು ಸಮಾಜಕ್ಕೆ ಅರ್ಪಣೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ತಿಳಿಸಿದರು.
ಕನ್ನಡ ಕರಾವಳಿ ವೇದಿಕೆಯ ರಜತ ಮಹೋತ್ಸವ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಕರಾವಳಿ ಸಿರಿ' ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಸಮಾಜಕ್ಕೆ ವಾಪಸ್ ನೀಡುವ ಗುಣ ಇದ್ದಾಗ ಮಾತ್ರ ಸಾರ್ವಜನಿಕ ವ್ಯವಸ್ಥೆಗಳು ಬೆಳೆಯುತ್ತವೆ. ಸಮಾಜ ಅಭಿವೃದ್ಧಿಯತ್ತ ಸಾಗುತ್ತದೆ ಎಂದು ವಿಶ್ಲೇಷಿಸಿದರು.
ಹೊಗಳಿಕೆಯಲ್ಲಿರುವ ಸುಳ್ಳು, ತೆಗಳಿಕೆಯಲ್ಲಿರುವ ಸತ್ಯವನ್ನು ಅರ್ಥ ಮಾಡಿಕೊಂಡು ಕೆಲಸ ಮಾಡುವವರು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ಅತಿಯಾದ ಪ್ರಶಂಸೆಯು ವ್ಯಕ್ತಿಯನ್ನು ಅಹಂಕಾರವೆಂಬ ಮೋಹದ ಬಲೆಗೆ ಕೆಡವುತ್ತದೆ. ಸಾಧಕರಾಗಲು ಅಹಂಕಾರ ತೊರೆಯಬೇಕು ಎಂದು ಸಲಹೆ ನೀಡಿದರು.
ವಿಧಾನ ಪರಿಷತ್‌ನ ಮಾಜಿ ಸದಸ್ಯ ಬಿ.ಎಂ. ಫಾರೂಕ್ ಅವರಿಗೆ ‘ಕರಾವಳಿ ಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ‘ರಜತ ಸಿರಿ’ ಸ್ಮರಣ ಸಂಚಿಕೆಯನ್ನು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಬಿಡುಗಡೆ ಮಾಡಿದರು.
ಶಾಸಕರಾದ ಪ್ರಿಯಕೃಷ್ಣ, ಗುರುರಾಜ್ ಗಂಟಿಹೊಳೆ, ದಕ್ಷಿಣ ಕನ್ನಡಿಗರ ಸಂಘದ ಅಧ್ಯಕ್ಷ ಕೆ.ಸಿ. ಬಲ್ಲಾಳ್, ಬಂಟರ ಸಂಘದ ಅಧ್ಯಕ್ಷ ಎಂ. ಮುರಳೀಧರ ಹೆಗ್ಡೆ, ಮಣಿಪಾಲ ಆಸ್ಪತ್ರೆ ಮುಖ್ಯಸ್ಥ ಎಚ್. ಸುದರ್ಶನ್ ಬಲ್ಲಾಳ್, ಸಂಘದ ಅಧ್ಯಕ್ಷ ಕೆ. ನಾಗರಾಜ ಶೆಟ್ಟಿ, ಗೌರವ ಕಾರ್ಯದರ್ಶಿ ಪಣಿರಾಜ್ ಜೈನ್, ಉಪಾಧ್ಯಕ್ಷ ವಸಂತ್ ಎಸ್. ಶೆಟ್ಟಿ, ಪ್ರಧಾನ ಸಂಚಾಲಕ ಎಂ.ಮಧುಕರ್ ಶೆಟ್ಟಿ, ನಿಧಿ ಸಂಗ್ರಹ ಸಮಿತಿ ಅಧ್ಯಕ್ಷ ಕೆ. ಜಯರಾಮ ಸೂಡ, ಸ್ಮರಣ ಸಂಚಿಕೆ ಪ್ರಧಾನ ಸಂಪಾದಕ ಅಜಿತ್ ಹೆಗ್ಡೆ, ರಾಜೇಂದ್ರ ಕುಮಾರ್ ಕೆ.ವಿ. ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.