ADVERTISEMENT

‘ಸ್ವಾಮೀಜಿ ವೇಷದವರ ಬಯಲಾಟ’; ರಾಜಕಾರಣಿಗಳ ಕುಟುಕಿದ ಕುಂ. ವೀರಭದ್ರಪ್ಪ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2024, 21:59 IST
Last Updated 16 ಡಿಸೆಂಬರ್ 2024, 21:59 IST
<div class="paragraphs"><p>ಬಸವ ಅಂತರರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ಕಾದಂಬರಿಕಾರ ಕುಂ. ವೀರಭದ್ರಪ್ಪ ಅವರಿಗೆ ‘ಶ್ರೀ ಸಿದ್ಧಗಂಗಾ ಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು </p></div>

ಬಸವ ಅಂತರರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ಕಾದಂಬರಿಕಾರ ಕುಂ. ವೀರಭದ್ರಪ್ಪ ಅವರಿಗೆ ‘ಶ್ರೀ ಸಿದ್ಧಗಂಗಾ ಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ನಿಜವಾಗಿ ಬಯಲಾಟವಾಡುವವರು ಸ್ವಾಮೀಜಿ ವೇಷದಲ್ಲಿರುವ ರಾಜಕಾರಣಿಗಳು. ಸ್ವಾಮೀಜಿಗಳ ವೇಷದಲ್ಲಿ ರಾಜಕಾರಣಿಗಳಂತೆ ವರ್ತಿಸುವವರು ಬಹಳ ಅಪಾಯಕಾರಿ’ ಎಂದು ಕಾದಂಬರಿಕಾರ ಕುಂ. ವೀರಭದ್ರಪ್ಪ ಹೇಳಿದರು.

ADVERTISEMENT

ಲಂಡನ್‌ನ ಬಸವ ಅಂತರರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ‘ಶ್ರೀ ಸಿದ್ಧಗಂಗಾ ಸಿರಿ’ ಪ್ರಶಸ್ತಿ ಸ್ವೀಕರಿಸಿ ಸೋಮವಾರ ಅವರು ಮಾತನಾಡಿದರು.

‘ರಾಜಕಾರಣಿಗಳಿಂತ ಹೆಚ್ಚಾಗಿ ರಾಜಕಾರಣ ಮಾಡುವ ಸ್ವಾಮೀಜಿಗಳು, ಬಸವಣ್ಣನ ಹೆಸರು ಹೇಳಬಾರದು. ಕೂಡಲ ಸಂಗಮ ಎಂಬ ಹೆಸರನ್ನು ಬಳಸಬಾರದು. ಬಲಿಷ್ಠ ಸಮುದಾಯಗಳಿಗೆ ಮೀಸಲಾತಿ ಕೇಳುವುದು ಸಂವಿಧಾನಕ್ಕೆ ಬಗೆಯುವ ದ್ರೋಹ. ಹಿಂದುಳಿದ ವರ್ಗಗಳಿಗೂ ಮಾಡುವ ದ್ರೋಹ. ಮೀಸಲಾತಿ ಕೇಳುವ ಇಂತಹವರನ್ನು ಎಲ್ಲರೂ ವಿರೋಧಿಸಬೇಕು’ ಎಂದರು.

‘ತಿರುಪತಿಗೆ ಹೋಗಿ ₹60 ಲಕ್ಷದ ಕಿರೀಟ ಕೊಟ್ಟವರು ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ. ಹುಂಡಿಗಳಿಗೆ ಹಣ ಹಾಕುವ ಬದಲು ಬಡ ಮಕ್ಕಳ ಭವಿಷ್ಯಕ್ಕೆ ನೆರವಾಗಬೇಕು. ಬಡವರನ್ನು ದತ್ತು ತೆಗೆದುಕೊಂಡು ಅನ್ನ ಹಾಕಬೇಕು. ರಾಜಕಾರಣಿಗಳು ತಮ್ಮ ಮಕ್ಕಳನ್ನು ಮಠಗಳಿಗೆ ಸೇರಿಸಿ, ಅಲ್ಲಿ ಶಿಕ್ಷಣ ಕೊಡಿಸಬೇಕು’ ಎಂದು ಹೇಳಿದರು.

‘ತುಮಕೂರು ವಿಶ್ವವಿದ್ಯಾಲಯಕ್ಕೆ ‘ಶಿವಕುಮಾರ ಸ್ವಾಮೀಜಿ’ ಅವರ ಹೆಸರಿಡಬೇಕು. ಬೇರೆಯವರಿಗೆ ಭಾರತರತ್ನ ಕೊಟ್ಟಮೇಲೆ ಶಿವಕುಮಾರ ಸ್ವಾಮೀಜಿ ಅವರಿಗೆ ಕೊಡುವ ಅಗತ್ಯವಿಲ್ಲ. ಅವರು ವಿಶ್ವರತ್ನ, ರತ್ನಗಳನ್ನು ಸೃಷ್ಟಿಸಿದವರು’ ಎಂದರು.

‘ಜನಮನ ತಲುಪದ, ಜನರ ಮತ ಪರಿವರ್ತನೆ ಮಾಡದ ಸಾಹಿತ್ಯ ತನ್ನ ನೆಲೆ ಕಳೆದುಕೊಳ್ಳುತ್ತದೆ’ ಎಂದು ಜಾನಪದ ಸಾಹಿತಿ ಗೊ.ರು. ಚನ್ನಬಸಪ್ಪ ಹೇಳಿದರು.

ಗುಬ್ಬಿ ತೋಟದಪ್ಪನವರ ಧರ್ಮಸಂಸ್ಥೆ ಅಧ್ಯಕ್ಷ ಎಲ್‌. ರೇವಣ ಸಿದ್ದಯ್ಯ ಅವರು ಸಿದ್ಧಗಂಗಾಮಠದಲ್ಲಿ ಶಿಕ್ಷಣ ಪಡೆದ ದಿನಗಳನ್ನು ಮೆಲುಕು ಹಾಕಿದರು.

ತುಮಕೂರು ಸಿದ್ಧಗಂಗಾ ಮಠದ ಶಿವಸಿದ್ದೇಶ್ವರ ಕಿರಿಯ ಸ್ವಾಮೀಜಿ, ಬಸವ ಅಂತರರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಎಸ್‌. ಮಹಾದೇವಯ್ಯ, ಪ್ರಧಾನ ಕಾರ್ಯದರ್ಶಿ ಕೆ.ವಿ. ನಾಗರಾಜಮೂರ್ತಿ ಭಾಗವಹಿಸಿದ್ದರು.

‘ಶಿಕ್ಷಕ ಕೆಲಸ ಸಿಗದಿದ್ದಾಗ ಸಾಯಲು ನಿರ್ಧರಿಸಿದ್ದೆ’

‘ನನ್ನ 19ನೇ ವರ್ಷದಲ್ಲಿ ಸಿದ್ಧಗಂಗಾ ಮಠದಲ್ಲಿ ಶಿಕ್ಷಕನಾಗಲು ಬಯಸಿ ಬಂದಾಗ ಸಂದರ್ಶನದಲ್ಲಿ ವಿಫಲನಾಗಿದ್ದೆ. 19ರ ಮಗ್ಗಿ ಹೇಳಿ ಎಂದಿದ್ದರು, ನನಗೆ ಬರೊಲ್ಲ ಎಂದಿದ್ದೆ. 18 ಅಥವಾ 17ರ ಮಗ್ಗಿ ಹೇಳಿ ಅಂದರು. ಅದೂ ಬರೊಲ್ಲ ಎಂದಿದ್ದೆ. ಹೀಗಾಗಿ ಎರಡನೇ ಪಟ್ಟಿಯಲ್ಲಿಯೂ ನಾನು ಆಯ್ಕೆಯಾಗಿರಲಿಲ್ಲ. ಕ್ಯಾತಸಂದ್ರ ರೈಲು ನಿಲ್ದಾಣದಲ್ಲಿ ರೈಲಿಗೆ ಸಿಕ್ಕು ಸಾಯಬೇಕು ಅಂದುಕೊಂಡಿದ್ದೆ’ ಎಂದು ಸಿದ್ಧಗಂಗಾ ಮಠಕ್ಕೆ ಬಂದ ಪ್ರಥಮ ಸನ್ನಿವೇಶವನ್ನು ನೆನಪಿಸಿಕೊಂಡ ಕುಂ. ವೀರಭದ್ರಪ್ಪ ಭಾವುಕರಾದರು.

‘ಶಿವಕುಮಾರ ಸ್ವಾಮೀಜಿ ಶಿಫಾರಸು ಮಾಡಿದರೆ ಕೆಲಸ ಸಿಗುತ್ತದೆ ಎಂದು ಯಾರೋ ಹೇಳಿದರು. ಸ್ವಾಮೀಜಿ ಮುಂದೆ ಷಟ್ಪದಿಗಳನ್ನು ಹೇಳಿದಾಗ ಸಂತಸಗೊಂಡು, ಶಿಫಾರಸು ಮಾಡಿ ಶಿಕ್ಷಕ ಹುದ್ದೆ ಕೊಡಿಸಿದರು’ ಎಂದರು.

‘ಮಠದಲ್ಲಿದ್ದಾಗ ಬೆಳಿಗ್ಗೆ ಸ್ವಾಮೀಜಿ ಬಂದಾಗಲೂ ಎಚ್ಚರಗೊಳ್ಳದ ಸಂದರ್ಭದಲ್ಲಿ ಪಾದುಕೆಯಿಂದ ನನ್ನ ಹಣೆಗೆ ಹೊಡೆದಿದ್ದರು. ಆ ನಂತರ ಹಲವರು ನನ್ನ ಹಣೆ ಮುಟ್ಟಿ ನಮಸ್ಕರಿಸಿ, ಎಂತಹ ಅದೃಷ್ಟ ಎಂದಿದ್ದರು’ ಎಂದು ನೆನಪಿಸಿಕೊಂಡರು.

‘ಪ್ರಜಾವಾಣಿ’ಗೆ ಸ್ವಾಮೀಜಿ ಶಿಫಾರಸು ಪತ್ರ!
‘ಆರಂಭದ ದಿನಗಳಲ್ಲಿ ನಾನು ಕವಿತೆಗಳನ್ನು ಬರೆಯುತ್ತಿದ್ದೆ. ನನ್ನ ಕವಿತೆ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಪ್ರಕಟವಾಗಬೇಕೆಂಬ ಆಸೆ ಇತ್ತು. ಇದಕ್ಕಾಗಿ ಶಿವಕುಮಾರ ಸ್ವಾಮೀಜಿ ಅವರನ್ನು ಕೇಳಿ ಕೊಂಡೆ. ನನ್ನ ಆಶಯದಂತೆ ಅವರು ‘ಪ್ರಜಾವಾಣಿ’ ಪತ್ರಿಕೆಗೆ ಕವಿತೆ ಪ್ರಕಟಿಸಲು ಸಂಪಾದಕರಿಗೆ ಶಿಫಾರಸು ಪತ್ರ ಬರೆದರು. ಆ ಕವಿತೆ ಪ್ರಕಟವಾಗಿದೆಯೇ ಎಂಬುದನ್ನು ಕ್ಯಾತಸಂದ್ರದ ಲ್ಲಿದ್ದ ವೆಂಕಟೇಶ್ವರ ಸಲೂನ್‌ಗೆ ಬರುತ್ತಿದ್ದ ಪತ್ರಿಕೆ ನೋಡುತ್ತಿದ್ದೆ. ಆ ಸಂದರ್ಭದಲ್ಲಿ ಯು.ಆರ್‌. ಅನಂತಮೂರ್ತಿ ಅವರು ‘ನವಿಲು’ ಕಥೆ ಪ್ರಕಟವಾಗಿತ್ತು. ಅದನ್ನು ಹತ್ತಾರು ಬಾರಿ ಓದಿದ್ದೆ. ಅದರಿಂದಲೇ ನಾನು ಕಥೆಗಾರನಾದೆ’ ಎಂದು ಕುಂ. ವೀರಭದ್ರಪ್ಪ ಅವರು ಸ್ಮರಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.