ADVERTISEMENT

ಮಂತ್ರಘೋಷ ಕೇಳಿಸುತ್ತಿರಬೇಕು...

ಶಿಷ್ಯಂದಿರಿಗೆ ಆಜ್ಞಾಪಿಸಿದ್ದ ಪೇಜಾವರಶ್ರೀ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 23:07 IST
Last Updated 29 ಡಿಸೆಂಬರ್ 2019, 23:07 IST
ವಿದ್ಯಾಗುರುಗಳಾಗಿದ್ದ ವಿದ್ಯಾಮಾನ್ಯತೀರ್ಥರೊಂದಿಗೆ ವಿಶ್ವೇಶತೀರ್ಥರು
ವಿದ್ಯಾಗುರುಗಳಾಗಿದ್ದ ವಿದ್ಯಾಮಾನ್ಯತೀರ್ಥರೊಂದಿಗೆ ವಿಶ್ವೇಶತೀರ್ಥರು   

ಬೆಂಗಳೂರು: ‘ನಾನು ಸತ್ತ ಮೇಲೂ ವಿದ್ಯಾರ್ಥಿಗಳು ಮಾಡುವ ಮಂತ್ರ ಘೋಷ ಸದಾ ನನ್ನ ಕಿವಿಗೆ ಬೀ‌ಳುತ್ತಿರ
ಬೇಕು. ಸರಿಯಾಗಿ ಕೇಳಿಸಿಕೊಳ್ಳಿ, ನಾನು ಹೇಳಿದ್ದು ಅರ್ಥವಾಯಿತೋ ಇಲ್ಲವೋ...’

ನಗರದ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲೇ ಬೃಂದಾವನ ನಿರ್ಮಾಣ ಆಗಬೇಕು ಎಂಬ ಬಗ್ಗೆ ಪೇಜಾವರ ಶ್ರೀಗಳು ತಮ್ಮ ಶಿಷ್ಯಂದಿರಿಗೆ ಆಜ್ಞಾಪಿಸಿದ್ದ ಪರಿ ಇದು. ‘ಒಂದು ಬಾರಿಯಲ್ಲ, ಹಲವು ಬಾರಿ ಇದನ್ನು ನೆನಪು ಮಾಡಿದ್ದರು. ವಿದ್ಯಾಪೀಠಕ್ಕೆ ಬಂದಾಗಲೆಲ್ಲಾ ಬೃಂದಾವನ ನಿರ್ಮಾಣವಾಗಬೇಕಾದ ಜಾಗವನ್ನು ತೋರಿಸುತ್ತಿದ್ದರು’ ಎಂದು ವಿಶ್ವೇಶತೀರ್ಥರ ಆಪ್ತ ಶಿಷ್ಯ ಮತ್ತು ವಿದ್ಯಾಪೀಠದ ಪ್ರಾಧ್ಯಾಪಕ ಕೃಷ್ಣರಾಜ ಕುತ್ಪಾಡಿ ನೆನಪು ಮಾಡಿಕೊಂಡರು.

ವಿದ್ಯಾಪೀಠದ ಬಗ್ಗೆ ಸ್ವಾಮೀಜಿ ಅಷ್ಟೊಂದು ಪ್ರೀತಿ ಬೆಳೆಸಿಕೊಳ್ಳಲು ಕಾರಣ ಏನಂದರೆ ಇದು ಅವರೇ ಕಟ್ಟಿ ಬೆಳೆಸಿದ ವಿದ್ಯಾಕೇಂದ್ರ. ಅವರ ಕನಸಿನ ಕೂಸು ಕೂಡ ಆಗಿತ್ತು.

ADVERTISEMENT

1956ರಲ್ಲಿ ಕಲ್ಯಾಣ ರಾಘವೇಂದ್ರ ಆಶ್ರಮದಲ್ಲಿ ವಿದ್ಯಾಪೀಠವನ್ನು ಸ್ವಾಮೀಜಿ ಆರಂಭಿಸಿದರು. 1960ರಲ್ಲಿ ಈ ಜಾಗವನ್ನು ಶ್ರೀಗಳು ಖರೀದಿ ಮಾಡಿದರು. ಅವರ ವಿದ್ಯಾಗುರುಗಳಾಗಿದ್ದ ಪಲಿಮಾರು ಮಠದ ವಿದ್ಯಾಮಾನ್ಯತೀರ್ಥರು ಅವರಿಗೆ ಒತ್ತಾಸೆಯಾಗಿ ನಿಂತಿದ್ದರು.

‘ಕಾಡು–ಮೇಡಿನಿಂದ ಕೂಡಿದ್ದ ಈ ಜಾಗದಲ್ಲಿ ಜನ ಸಂಚಾರವೇ ಇರಲಿಲ್ಲ. ₹ 7 ಸಾವಿರ ನೀಡಿ 3 ಎಕರೆ 20 ಗುಂಟೆ ಜಾಗವನ್ನು ಖರೀದಿ ಮಾಡಿದ್ದರು. ಆ ಕಾಲಕ್ಕೆ ಅದು ದೊಡ್ಡ ಮೊತ್ತ. ಅಷ್ಟೊಂದು ಹಣ ಕೂಡಿಸುವುದು ಕಷ್ಟದ ಕೆಲಸವಾಗಿತ್ತು. ಭಕ್ತರಿಂದ ದೇಣಿಗೆ ಸಂಗ್ರಹಿಸಿ ಮತ್ತು ಸಾಲದ ಪಡೆದು ಹಣ ಒಟ್ಟುಗೂಡಿಸಿ ಜಾಗ ಖರೀದಿ ಮಾಡಿದ್ದರು. ಬಳಿಕ ಈ ಜಾಗದಲ್ಲೇ ವಿದ್ಯಾಕೇಂದ್ರವನ್ನು ಕಟ್ಟಿ ಬೆಳೆಸಿದರು’ ಎಂದು ಸ್ಮರಿಸುತ್ತಾರೆ ಅವರ ಶಿಷ್ಯಂದಿರು.

‘ವಿದ್ಯಾಪೀಠ ನಿರ್ಮಾಣವಾದ ಬಳಿಕ ಗಿರಿನಗರ, ಹೊಸಕೆರೆಹಳ್ಳಿ, ಶ್ರೀನಗರ, ಶ್ರೀನಿವಾಸನಗರದಲ್ಲಿ ಬಡಾವಣೆಗಳು ಬೆಳೆದವು. ವಿದ್ಯಾಪೀಠ ಸ್ಥಾಪನೆಯಾಗಿ 65 ವರ್ಷಗಳು ಕಳೆದಿವೆ. ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ. ಜೀವಮಾನದ ದೊಡ್ಡ ಸಾಧನೆ ಇದು ಎಂದು ಶ್ರೀಗಳೇ ಹೇಳಿಕೊಳ್ಳುತ್ತಿದ್ದರು. ಅವರ ಈ ಕೈಂಕರ್ಯವನ್ನು ಎಲ್ಲರೂ ಸ್ಮರಿಸಿಕೊಳ್ಳುತ್ತಾರೆ’ ಎಂದು ವಿದ್ಯಾಪೀಠದ ಗಣಪತಿ ದೇಗುಲದ ಪುರೋಹಿತ ವಾಸುದೇವಾಚಾರ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘350ರಿಂದ‌ 400 ವಿದ್ಯಾರ್ಥಿಗಳಿಗೆ ಉಚಿತವಾಗಿ ಇಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಸಾವಿರಕ್ಕೂ ಹೆಚ್ಚು ಮಂದಿ ಇಲ್ಲಿ ಶಿಕ್ಷಣ ಪಡೆದು ಪಂಡಿತರಾಗಿ ಹೊರ ಬಂದಿದ್ದಾರೆ. ಇಲ್ಲಿ ಕಲಿತ ಅನೇಕರು ದೇಶವಿದೇಶಗಳಲ್ಲಿ ಛಾಪು ಮೂಡಿಸಿದ್ದಾರೆ. ವಿಶ್ವವಿದ್ಯಾಲಯಗಳ ಕುಲಪತಿ ಆದವರೂ ಹಲವರಿದ್ದಾರೆ’ ಎಂದರು.

‘ಶ್ರೀಗಳಿಗೆ ಬೆಂಗಳೂರು ಕೇಂದ್ರ ಸ್ಥಾನವಾಗಿತ್ತು. ಅವರು ಹೆಚ್ಚಿನ ಸಮಯವನ್ನು ವಿದ್ಯಾಪೀಠದಲ್ಲೇ ಕಳೆದಿದ್ದಾರೆ. ವಿದ್ಯಾರ್ಥಿಗಳ ಜೊತೆ ಬೆರೆಯುವುದೆಂದರೆ ಅವರಿಗೆ ಇಷ್ಟ’ ಎಂದೂ ಅವರು ಹೇಳಿದರು.

ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ13 ವರ್ಷ ಶಿಕ್ಷಣ
ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ 8ರಿಂದ 10ನೇ ವಯಸ್ಸಿನ ಮಕ್ಕಳು ವಿದ್ಯಾಭ್ಯಾಸಕ್ಕೆ ಸೇರಿಕೊಂಡರೆ 13 ವರ್ಷಗಳ ಕಾಲ ಉಚಿತವಾಗಿ ವಸತಿಯುತ ಶಿಕ್ಷಣ ಪಡೆಯಬಹುದು.‌

‘ಪ್ರಧಾನವಾಗಿ ಸಂಸ್ಕೃತ ಶಿಕ್ಷಣ ನೀಡಲಾಗುತ್ತದೆ. ಜ್ಯೋತಿಷ, ಪೌರೋಹಿತ್ಯ, ವೇದಾಂತ, ತರ್ಕ, ವ್ಯಾಕರಣ, ಮೀಮಾಂಸೆ, ಅಲಂಕಾರ ಎಲ್ಲವನ್ನೂ ಕಲಿಸಲಾಗುತ್ತದೆ. 11 ವರ್ಷಗಳ ಅಧ್ಯಯನದ ನಂತರ ವಿದ್ಯಾರ್ಥಿಗಳು 2 ವರ್ಷ ಸ್ವಾಮೀಜಿಗಳ ಜತೆಯಲ್ಲೇ ಲೋಕಸಂಚಾರ ಮಾಡಬೇಕು. ಶ್ರೀಗಳೇ ಅವರಿಗೆ ಪಾಠ– ಪ್ರವಚನ ಹೇಳಿಕೊಡುತ್ತಾರೆ. ಅದಕ್ಕೆ ‘ಸುಧಾಪಾಠ’ ಎನ್ನುತ್ತಾರೆ. ಅದು ಒಂದು ರೀತಿಯ ಪಿಎಚ್‌.ಡಿ ಇದ್ದಂತೆ’ ಎಂದು ವಾಸುದೇವಾಚಾರ್ಯ ವಿವರಿಸಿದರು.

‘ದೇಶದಾದ್ಯಂತ ಸ್ವಾಮೀಜಿ ಹಲವೆಡೆ ಆಶ್ರಮಗಳನ್ನು ಆರಂಭಿಸಿದ್ದಾರೆ. ಆ ಎಲ್ಲಾ ಆಶ್ರಮಗಳನ್ನು ನೋಡಿಕೊಳ್ಳುತ್ತಿರುವವರು, ಸ್ವಾಮೀಜಿಗಳು ಎಲ್ಲರೂ ಇಲ್ಲಿಯೇ ಶಿಕ್ಷಣ ಪಡೆದವರೇ. ಕುಕ್ಕೆ ಸುಬ್ರಹ್ಮಣ್ಯದ ಸ್ವಾಮೀಜಿ ಕೂಡ ಪೇಜಾವರಶ್ರೀಗಳ ಶಿಷ್ಯರು’ ಎಂದರು.

ಮಡುಗಟ್ಟಿದ್ದ ದುಃಖ
ವಿದ್ಯಾಕೇಂದ್ರವನ್ನು ಕಟ್ಟಿ ಬೆಳೆಸಿದ ಶ್ರೀಗಳು ‘ಇನ್ನಿಲ್ಲ’ ಎಂಬ ಸುದ್ದಿ ಹರಡುತ್ತಿದಂತೆ ಇಡೀ ವಿದ್ಯಾಪೀಠದ ಆವರಣದಲ್ಲಿ ದುಃಖ ಮಡುಗಟ್ಟಿತು.

ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮತ್ತು ಸಿಬ್ಬಂದಿ ಎಲ್ಲರ ಮುಖದಲ್ಲೂ ಅನಾಥ ಪ್ರಜ್ಞೆ ಕಾಡುತ್ತಿತ್ತು. ದುಃಖದ ನಡುವೆಯೂ, ಶ್ರೀಗಳಿಗೆ ಸಲ್ಲಿಸಬೇಕಾದ ಅಂತಿಮ ಗೌರವಕ್ಕೆ ಬೇಕಾದ ಸಿದ್ಧತೆಗಳಲ್ಲಿ ತೊಡಗಿಕೊಂಡರು.

ಭಕ್ತರ ದಂಡು ಕೂಡ ತಂಡೋಪತಂಡವಾಗಿ ಬಂದು ಸೇರಿಕೊಂಡಿತು. ಬೃಂದಾವನ ನಿರ್ಮಿಸುವ ಜಾಗದಲ್ಲಿ ಗುಂಡಿ ತೆಗೆಯುವ ಕೆಲಸದಲ್ಲಿ ನಾಮುಂದು ತಾಮುಂದು ಎಂಬಂತೆ ಭಕ್ತರು ಕೈಜೋಡಿಸಿದರು. ಮತ್ತೊಂದೆಡೆ ಪೆಂಡಾಲುಗಳ ನಿರ್ಮಾಣ ಕಾರ್ಯವೂ ಲಗುಬಗೆಯಿಂದ ನಡೆಯಿತು. ಶಿಷ್ಯಂದಿರು ಪಠಿಸುತ್ತಿದ್ದ ಮಂತ್ರಘೋಷ ವಿದ್ಯಾಪೀಠದ ಪ್ರಾಂಗಣದಲ್ಲಿ ಅನುರಣಿಸುತ್ತಿತ್ತು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ನಗರ ಪೊಲೀಸ್ ಕಮಿಷನರ್ ಭಾಸ್ಕರ ರಾವ್, ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌, ಜಿಲ್ಲಾಧಿಕಾರಿ ಜಿ.ಎನ್‌.ಶಿವಮೂರ್ತಿ, ಹೆಚ್ಚುವರಿ ಪೊಲೀಸ್ ಕಮಿಷನರ್ (ಸಂಚಾರ) ರವಿಕಾಂತೇಗೌಡ ವಿದ್ಯಾಪೀಠಕ್ಕೆ ಭೇಟಿ ನೀಡಿ ಮಾರ್ಗದರ್ಶನ ಮಾಡಿದರು.

ಮೋದಿಗೂ ಕಿವಿ ಹಿಂಡುತ್ತಿದ್ದರು
‘ಪೇಜಾವರಶ್ರೀಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಕಿವಿ ಹಿಂಡುತ್ತಿದ್ದರು’ ಎಂದು ಸ್ವಾಮೀಜಿ ಶಿಷ್ಯ ‌ಬಿಂದುಮಾಧವಾಚಾರ್ಯ ಸ್ಮರಿಸಿಕೊಂಡರು.

‘‌ಗಂಗಾನದಿ ಶುದ್ಧೀಕರಣ, ಗೋಹತ್ಯೆ ತಡೆಯುವ ವಿಷಯದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಮೋದಿ ಅವರಿಗೆ ಆಗಾಗ ನೆನಪಿಸುತ್ತಿದ್ದರು. ಸರಳ ಜೀವನ ಕ್ರಮವೇ ಎಲ್ಲರೂ ಗೌರವಿಸುವಂತೆ ಮಾಡಿತ್ತು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.