ADVERTISEMENT

‘ಟೋಯಿಂಗ್’ ಸುಲಿಗೆಗೆ ಜನಾಕ್ರೋಶ: ಗೃಹ ಸಚಿವ, ಕಮಿಷನರ್ ಆದೇಶಕ್ಕೂ ಕಿಮ್ಮತ್ತಿಲ್ಲ

ಟೋಯಿಂಗ್‌ ಹೊಣೆ ಖಾಸಗಿ ಹೆಗಲಿಗೆ l

​ಪ್ರಜಾವಾಣಿ ವಾರ್ತೆ
Published 31 ಜನವರಿ 2022, 19:34 IST
Last Updated 31 ಜನವರಿ 2022, 19:34 IST
ದ್ವಿಚಕ್ರ ವಾಹನವನ್ನು ಸಿಬ್ಬಂದಿ ಟೋಯಿಂಗ್ ಮಾಡಿದರು – ಸಂಗ್ರಹ ಚಿತ್ರ
ದ್ವಿಚಕ್ರ ವಾಹನವನ್ನು ಸಿಬ್ಬಂದಿ ಟೋಯಿಂಗ್ ಮಾಡಿದರು – ಸಂಗ್ರಹ ಚಿತ್ರ   

ಬೆಂಗಳೂರು: ವಾಹನಗಳ ಸುಗಮ ಸಂಚಾರಕ್ಕಾಗಿ ಜಾರಿಯಲ್ಲಿರುವ ‘ಟೋಯಿಂಗ್’ ವ್ಯವಸ್ಥೆಯನ್ನು ಜನರ ಸುಲಿಗೆಗೆ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಚಾಲ್ತಿಯಲ್ಲಿರುವ ನಿಯಮಗಳನ್ನು ಮೀರಿ ಕಾನೂನು ಬಾಹಿರವಾಗಿ ವಾಹನಗಳ ‘ಟೋಯಿಂಗ್’ ಮಾಡಲಾಗುತ್ತಿದ್ದು, ಕೆಲ ಸಂಚಾರ ಪೊಲೀಸರ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿಪಡಿಸುವ ಹಾಗೂ ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸುವ ವಾಹನಗಳನ್ನು ಎತ್ತಿಕೊಂಡು ಹೋಗಿ ದಂಡ ವಿಧಿಸಲು ಟೋಯಿಂಗ್ ವ್ಯವಸ್ಥೆ ಜಾರಿ ಮಾಡಲಾಗಿದೆ. ಖಾಸಗಿ ಏಜೆನ್ಸಿ ಮೂಲಕ ಸಂಚಾರ ಪೊಲೀಸರು, ವಾಹನಗಳನ್ನು ಟೋಯಿಂಗ್ ಮಾಡುತ್ತಿದ್ದಾರೆ.

ADVERTISEMENT

ವಾಹನಗಳ ಟೋಯಿಂಗ್‌ ಮಾಡುವ ‘ಟೈಗರ್‘ ವಾಹನದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರು ಹಾಗೂ ಏಜೆನ್ಸಿಗಳ ಸಿಬ್ಬಂದಿ ದುರ್ವರ್ತನೆ ತೋರುತ್ತಿದ್ದು, ಇದು ಇತ್ತೀಚಿನ ದಿನಗಳಲ್ಲಿ ಅಸಹನೀಯ ಹಾಗೂ ಅಮಾನವೀಯವಾಗುತ್ತಿದೆ ಎಂದು ಸಾರ್ವಜನಿಕರು ಸಿಟ್ಟಿನಿಂದ ಹೇಳುತ್ತಿದ್ದಾರೆ.

ಟೋಯಿಂಗ್ ವಾಹನದ ಪೊಲೀಸ್‌ಗೆ ಕಲ್ಲಿನಿಂದ ಹೊಡೆದರೆಂಬ ಕಾರಣಕ್ಕೆ ಅಂಗವಿಕಲ ಮಹಿಳೆಯನ್ನು ಬೂಟುಗಾಲಿನಿಂದ ಒದ್ದಿದ್ದ ಹಲಸೂರು ಗೇಟ್ ಸಂಚಾರ ಠಾಣೆ ಎಎಸ್‌ಐ ನಾರಾಯಣ ವಿರುದ್ಧ ಜನ ಕಿಡಿ ಕಾರಿದ್ದರು. ಟೋಯಿಂಗ್ ವ್ಯವಸ್ಥೆಯೇ ಅಕ್ರಮವಾಗಿರುವುದಾಗಿ ಆರೋಪಿಸಿದ್ದರು. ಇದರಿಂದ ಎಚ್ಚೆತ್ತ ಹಿರಿಯ ಅಧಿಕಾರಿಗಳು, ಘಟನೆ ಬಗ್ಗೆ ತನಿಖೆ ನಡೆಸಿ ಎಎಸ್‌ಐ ಅವರನ್ನು ಅಮಾನತು ಮಾಡಿದ್ದಾರೆ.

ಇಂದಿರಾನಗರದಲ್ಲಿ ಟೋಯಿಂಗ್ ವಾಹನದ ಹಿಂದೆಯೇ ಬೈಕ್ ಸವಾರರೊಬ್ಬರು ಓಡಿದ್ದ ಘಟನೆ ಬಗ್ಗೆಯೂ ಜನ ಸಿಟ್ಟು ತೋರಿದ್ದರು. ಟೋಯಿಂಗ್ ವಿಚಾರವಾಗಿ ಇಂಥ ಹಲವು ಘಟನೆಗಳು ನಗರದಲ್ಲಿ ನಡೆಯುತ್ತಿದ್ದು, ಕೆಲ ಸಂಚಾರ ಪೊಲೀಸರ ವರ್ತನೆಗೆ ಜನ ಬೇಸರಗೊಂಡಿದ್ದಾರೆ.

‘ಟೋಯಿಂಗ್ ಮುನ್ನ ವಾಹನದ ನೋಂದಣಿ ಸಂಖ್ಯೆಯನ್ನು ಮೈಕ್‌ನಲ್ಲಿ ಮೂರು ಸಲ ಕೂಗಬೇಕು. ಮಾಲೀಕರು ಸ್ಥಳದಲ್ಲೇ ಇದ್ದರೆ, ಅಲ್ಲಿಯೇ ದಂಡ ಕಟ್ಟಿಸಿಕೊಂಡು ವಾಹನ ಬಿಡಬೇಕು’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಕಮಿಷನರ್ ಕಮಲ್‌ ಪಂತ್ ಹಲವು ಬಾರಿ ಸೂಚನೆ ನೀಡಿದ್ದಾರೆ. ಇದಕ್ಕೆಲ್ಲ ಕಿಮ್ಮತ್ತು ನೀಡದ ಕೆಲ ಸಂಚಾರ ಪೊಲೀಸರು, ತಮ್ಮಿಷ್ಟದಂತೆ ಟೋಯಿಂಗ್ ಮಾಡುತ್ತಿದ್ದಾರೆ. ಮೈಕ್‌ ಇದ್ದರೂ ಕೂಗದೇ ವಾಹನಗಳನ್ನು ಎತ್ತಿಕೊಂಡು ಹೋಗುತ್ತಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ದಂಡ ಹಾಗೂ ಟೋಯಿಂಗ್ ಶುಲ್ಕದ ಹೆಸರಿನಲ್ಲಿ ಜನರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ’ ಎಂದು ಸಾರ್ವಜನಿಕರು ಆರೋಪಿಸುತ್ತಿರುವುದು ನಗರದ ಎಲ್ಲ ವಲಯದಿಂದಲೂ ಕೇಳಿ
ಬರುತ್ತಿದೆ.

‘ನೋ ಪಾರ್ಕಿಂಗ್ ಫಲಕವಿಲ್ಲದ ಕಡೆ ನಿಲ್ಲಿಸುವ ವಾಹನಗಳನ್ನೂ ಪೊಲೀಸರು ಟೋಯಿಂಗ್ ಮಾಡುತ್ತಿದ್ದಾರೆ. ಇದರ ವಿರುದ್ಧ ದೂರು ನೀಡಿದರೂ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ’ ಎಂದೂ ದೂರಿದರು.

ಪೊಲೀಸರಿಗೆ ಕಾನೂನು ಇಲ್ಲವೇ?: ‘ಟೋಯಿಂಗ್ ಹೇಗೆ ಮಾಡಬೇಕು? ಎಂಬುದಕ್ಕೆ ಕಾನೂನು ಇದೆ. ಆದರೆ, ತಮಗೆ ಸಂಬಂಧವಿಲ್ಲವೆಂಬಂತೆ ಪೊಲೀಸರು ವರ್ತಿಸುತ್ತಿದ್ದಾರೆ’ ಎಂದು ದೂರಿದರು.

‘ಟೋಯಿಂಗ್‌ ವ್ಯವಸ್ಥೆಯಲ್ಲಿ ಸಾಕಷ್ಟು ಲೋಪಗಳಿವೆ. ಪೊಲೀಸರ ವರ್ತನೆಯನ್ನು ಕೆಲವರಷ್ಟೇ ಪ್ರಶ್ನಿಸುತ್ತಿದ್ದರು. ಬಹುತೇಕರು, ವಾಗ್ವಾದ ಬೇಡವೆಂದು ದಂಡ ಕಟ್ಟಿ ವಾಹನ ಬಿಡಿಸಿಕೊಂಡು ಹೋಗುತ್ತಾರೆ’ ಎಂದು ಇಂದಿರಾನಗರದ ನಿವಾಸಿ ಆರ್. ಬಾಲರಾಜು ಹೇಳಿದರು.

‘ಮೆಜೆಸ್ಟಿಕ್, ಚಿಕ್ಕಪೇಟೆ, ಮೈಸೂರು ರಸ್ತೆ, ಇಂದಿರಾನಗರ, ಎಸ್‌ಪಿ ರಸ್ತೆ, ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರ, ಕಲಾಸಿಪಾಳ್ಯ, ಬಸವನಗುಡಿ, ರಾಜಾಜಿನಗರ, ಯಶವಂತಪುರ ಹಾಗೂ ಇತರೆ ಕಡೆ ಅಕ್ರಮವಾಗಿ ಟೋಯಿಂಗ್ ಮಾಡಲಾಗುತ್ತಿದೆ’ ಎಂದೂ ತಿಳಿಸಿದರು.

ವ್ಯವಸ್ಥೆ ಸುಧಾರಣೆ ಅಗತ್ಯ: ‘ಟೋಯಿಂಗ್ ಸಿಬ್ಬಂದಿಯಿಂದ ಸಾರ್ವಜನಿಕರಿಗೆ ಆಗುತ್ತಿರುವ ಕಿರುಕುಳವನ್ನು ತಪ್ಪಿಸಬೇಕಿದೆ. ಟೋಯಿಂಗ್ ವ್ಯವಸ್ಥೆ ಸುಧಾರಣೆ ಮಾಡಬೇಕಾದ ಅಗತ್ಯವಿದೆ’ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಟೋಯಿಂಗ್ ನಿಯಮಾವಳಿಯಲ್ಲಿ ತಿದ್ದುಪಡಿ’

‘ಟೋಯಿಂಗ್ ವ್ಯವಸ್ಥೆ ಬಗ್ಗೆ ಹೆಚ್ಚು ದೂರುಗಳು ಬರುತ್ತಿವೆ. ಟೋಯಿಂಗ್ ನಿಯಮಾವಳಿಯಲ್ಲಿ ಕೆಲ ತಿದ್ದುಪಡಿ ತರಲು ಚಿಂತನೆ ನಡೆದಿದ್ದು, ಈ ಬಗ್ಗೆ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ’ ಎಂದು ಪೊಲೀಸ್ ಕಮಿಷನರ್ ಕಮಲ್ ಪಂತ್ ಹೇಳಿದರು.

ನಗರದಲ್ಲಿ ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿ ಅವರು, ‘ಕೆಲ ಸಿಬ್ಬಂದಿ ಅವೈಜ್ಞಾನಿಕವಾಗಿ ಟೋಯಿಂಗ್ ಮಾಡುತ್ತಿರುವ ಹಾಗೂ ಸಾರ್ವಜನಿಕರ ಮೇಲೆ ದಬ್ಬಾಳಿಕೆ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ತಪ್ಪಿತಸ್ಥ ಪೊಲೀಸರ ಮೇಲೆಯೇ ದೂರು ದಾಖಲಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು’ ಎಂದರು.

ಟೋಯಿಂಗ್’ ತಾತ್ಕಾಲಿಕ ಬಂದ್

ಜನರ ವಿರೋಧ ವ್ಯಕ್ತವಾಗುತ್ತಿರುವುದರಿಂದ, ವಾಹನಗಳನ್ನು ಟೋಯಿಂಗ್ ಮಾಡುವುದನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಟೋಯಿಂಗ್ ‘ಟೈಗರ್’ ವಾಹನಗಳು ನಗರದಲ್ಲಿ ಸೋಮವಾರ ಎಲ್ಲಿಯೂ ಸಂಚರಿಸಲಿಲ್ಲ.

‘ಟೋಯಿಂಗ್ ವ್ಯವಸ್ಥೆ ಸುಧಾರಣೆ ಹೇಗೆ ? ಹಾಗೂ ಪೊಲೀಸರು ಜನರ ಜೊತೆ ಹೇಗೆ ನಡೆದುಕೊಳ್ಳಬೇಕು’ ಎಂಬುದನ್ನು ತಿಳಿಸಲು ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ ಅವರು ಸೋಮವಾರ ಸಭೆ ನಡೆಸಿದರು.

ನಗರದ ಎಲ್ಲ ಸಂಚಾರ ಠಾಣೆಗಳ ಎಎಸ್‌ಐ, ಪಿಎಸ್‌ಐ, ಇನ್‌ಸ್ಪೆಕ್ಟರ್, ಎಸಿಪಿ ಹಾಗೂ ಡಿಸಿಪಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ, ಸಂಚಾರ ಸಮಸ್ಯೆಗಳ ಬಗ್ಗೆಯೂ ಚರ್ಚಿಸಲಾಯಿತು.

ಟೋಯಿಂಗ್ ಕಿರಿಕಿರಿ: ನೀವೂ ಬರೆಯಿರಿ

ಟೋಯಿಂಗ್ ಹೆಸರಿನಲ್ಲಿ ಸುಲಿಗೆ, ಕಿರಿಕಿರಿಗೆ ಒಳಗಾಗಿದ್ದರೆ ನಿಮ್ಮ ಅಭಿಪ್ರಾಯವನ್ನು ಬರೆದು ಕಳುಹಿಸಿ. ಎಲ್ಲಿ, ಯಾವಾಗ ನಡೆಯಿತು ಎಂಬ ವಿವರ ಇರಲಿ. ಜತೆಗೆ ನಿಮ್ಮದೊಂದು ಫೋಟೋ, ಮೊಬೈಲ್‌ ನಂಬರ್, ವಿಳಾಸ ಇರುವುದು ಅಗತ್ಯ. ಗರಿಷ್ಠ ಪದ ಮಿತಿ 100 ಪದಗಳು

ವಾಟ್ಸ್‌ ಆ್ಯಪ್ ಸಂಖ್ಯೆ–9606038256

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.