
ಬೆಂಗಳೂರು: ‘ನಾನು ಕೂಡ ಅಂಚೆ ಇಲಾಖೆಯ ದೊಡ್ಡ ಫಲಾನುಭವಿಯಾಗಿದ್ದು, ನನ್ನ ಮತ್ತು ಕಮಲಾ ಅವರ ಮನಸ್ಸುಗಳನ್ನು ಸೇತುವೆಯಂತೆ ಸೇರಿಸುವ ಕೆಲಸ ಮಾಡಿದ್ದೇ ಅಂಚೆ ಪತ್ರಗಳು’ ಎಂದು ಸಾಹಿತಿ ಹಂಪ ನಾಗರಾಜಯ್ಯ ಸ್ಮರಿಸಿಕೊಂಡರು.
ಭಾರತೀಯ ಅಂಚೆ ಇಲಾಖೆಯ ಕರ್ನಾಟಕ ವೃತ್ತವು ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಜಿಲ್ಲಾ ಮಟ್ಟದ ಅಂಚೆ ಚೀಟಿಗಳ ಸಂಗ್ರಹಣಾ ಪ್ರದರ್ಶನಕ್ಕೆ ಮಂಗಳವಾರ ಚಾಲನೆ ನೀಡಿ, ಮಾತನಾಡಿದರು.
‘ನಾವು ಆರು ವರ್ಷ ಪ್ರೀತಿಸಿ, ನಂತರ ಮದುವೆಯಾದೆವು. ಆ ಅವಧಿಯಲ್ಲಿ ನಾವು ಪ್ರೇಮ ಪತ್ರಗಳನ್ನು ನಿರಂತರ ಬರೆಯುತ್ತಿದ್ದೇವು. ಈ ಪ್ರೇಮ ಪತ್ರಗಳಿಗಾಗಿಯೇ ಒಬ್ಬರಿಗೊಬ್ಬರು ಅಂಚೆ ಅಣ್ಣನನ್ನು ಎದುರು ನೋಡುತ್ತಿದ್ದೇವು. ಮದುವೆಯಾದ ನಂತರವೂ ನಮ್ಮ ಪ್ರೇಮ ಪತ್ರ ನಿಲ್ಲಲಿಲ್ಲ. ನಾನು ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಕೆಲಸ ಮಾಡಿದರೆ, ಕಮಲಾ ಅವರು ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆದ್ದರಿಂದ ವಿವಾಹದ ಬಳಿಕವೂ ಪ್ರೇಮ ವ್ಯಕ್ತಪಡಿಸಲು ಅಂಚೆ ಪತ್ರವನ್ನೇ ಅವಲಂಬಿಸಿದ್ದೇವು’ ಎಂದರು.
‘ಅಂಚೆ ಪತ್ರಗಳು ಪ್ರೀತಿಯನ್ನಷ್ಟೆ ಅಲ್ಲ, ತಂದೆ-ತಾಯಿಗಳನ್ನು, ಬಂಧು-ಬಾಂಧವರನ್ನು ಸೇರಿಸುವ ಕೆಲಸ ಮಾಡಿತು. ಟೆಲಿಗ್ರಾಂ ಬಂದರೆ ಊರಿನಲ್ಲಿ ಗಾಬರಿಯಾಗುತ್ತಿದ್ದರು’ ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು.
ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ್, ‘ಭಾರತೀಯ ಅಂಚೆ ಇಲಾಖೆ ವಿಶ್ವದಲ್ಲೆ ದೊಡ್ಡ ಇಲಾಖೆ ಎನಿಸಿದೆ. ತಾಂತ್ರಿಕವಾಗಿಯೂ ಒಗ್ಗಿಕೊಳ್ಳುತ್ತಾ, ಬ್ಯಾಂಕಿಂಗ್ ಕ್ಷೇತ್ರಕ್ಕೂ ಹೆಜ್ಜೆಯಿರಿಸಿದೆ’ ಎಂದು ಶ್ಲಾಘಿಸಿದರು.
ಪೋಸ್ಟ್ ಮಾಸ್ಟರ್ ಜನರಲ್ ಚಂದ್ರಶೇಖರ್ ಕಾಕುಮಾನು, ಅಂಚೆ ಸೇವೆಗಳ ನಿರ್ದೇಶಕರಾದ ಸಂದೇಶ್ ಮಹಾದೇವಪ್ಪ, ವಿ.ತಾರಾ ಉಪಸ್ಥಿತರಿದ್ದರು.
ಪ್ರದರ್ಶನದಲ್ಲಿ ಅಪರೂಪದ ಸಾವಿರಾರು ಅಂಚೆ ಚೀಟಿಗಳಿದ್ದು, ವಿದ್ಯಾರ್ಥಿಗಳು ಸೇರಿ ವಿವಿಧ ವಯೋಮಾನದವರು ಕುತೂಹಲದಿಂದ ವೀಕ್ಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.