ADVERTISEMENT

ಡಿಸಿಎಂ ಶಿವಕುಮಾರ್‌ ವಿರುದ್ಧ ಭಿತ್ತಿಪತ್ರ

​ಪ್ರಜಾವಾಣಿ ವಾರ್ತೆ
Published 7 ಮೇ 2024, 16:20 IST
Last Updated 7 ಮೇ 2024, 16:20 IST
ಬೆಂಗಳೂರು ನಗರದ ವಿವಿಧೆಡೆ ಅಂಟಿಸಲಾಗಿರುವ ಭಿತ್ತಿಚಿತ್ರಗಳ ಒಂದು ಮಾದರಿ. . .
ಬೆಂಗಳೂರು ನಗರದ ವಿವಿಧೆಡೆ ಅಂಟಿಸಲಾಗಿರುವ ಭಿತ್ತಿಚಿತ್ರಗಳ ಒಂದು ಮಾದರಿ. . .   

ಬೆಂಗಳೂರು: ‘ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೆಣ್ಣು ಮಕ್ಕಳ ಫೋಟೋವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ’ ಎಂದು ದೂರಿರುವ ಭಿತ್ತಿಪತ್ರಗಳನ್ನು ನಗರದ ಹಲವೆಡೆ ಅಂಟಿಸಲಾಗಿದೆ.

ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಗೆ ರಚಿಸಿದ ವಿಶೇಷ ತನಿಖಾ ತಂಡವನ್ನು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್‌ ಮತ್ತು ಬಿಜೆಪಿ ನಾಯಕರು ಟೀಕಿಸಿದ್ದಾರೆ. ಈ ಬೆನ್ನಲ್ಲೇ, ಇವರಿಬ್ಬರನ್ನು ಗುರಿಯಾಗಿಸಿ, ಶಿವಕುಮಾರ್ ಅವರನ್ನು ಅವಾಚ್ಯ ಪದಗಳಲ್ಲಿ ನಿಂದಿಸಿರುವ  ಭಿತ್ತಿಪತ್ರಗಳನ್ನು ಸೋಮವಾರ ರಾತ್ರಿ ನಗರದ ಹಲವೆಡೆ ಅಂಟಿಸಲಾಗಿದೆ. 

‘ಪ್ರಜ್ವಲ್ ರೇವಣ್ಣ ಅವರ ವಿಡಿಯೊಗಳು ಇವೆ ಎನ್ನಲಾದ ಪೆನ್‌ಡ್ರೈವ್ ಬಿಡುಗಡೆ ಮಾಡಿರುವುದರ ಹಿಂದೆ ಶಿವಕುಮಾರ್ ಕೈವಾಡ ಇದೆ. ವಿಡಿಯೊಗಳನ್ನು ಸೃಷ್ಟಿಸಿ, ಪೆನ್‌ ಡ್ರೈವ್‌ಗೆ ಹಾಕಿ ಸಾವಿರಾರು ಸಂಖ್ಯೆಯಲ್ಲಿ ಹಂಚಲಾಗಿದೆ. ಅವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡ ಆಗ್ರಹಿಸಿದ್ದರು. 

ADVERTISEMENT

ಈ ರೀತಿಯ ಭಿತ್ತಿಪತ್ರಗಳನ್ನು ಅಂಟಿಸಿರುವ ‘ಕಿಡಿಗೇಡಿ’ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ನಗರ ಕಾಂಗ್ರೆಸ್ ಸಮಿತಿ ನಗರ ಪೊಲೀಸ್ ಕಮಿಷನರ್‌ ಬಿ. ದಯಾನಂದ ಅವರಿಗೆ ದೂರು ನೀಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.