ADVERTISEMENT

ಮತ್ತೆ ತೆರೆಯಿತು ಗುಂಡಿ...ತಪ್ಪದ ಸವಾರರ ಗೋಳು

ಬಿಬಿಎಂಪಿ: ಹಳೆ ಗುಂಡಿಗಳ ಜೊತೆ ಅಲ್ಲಲ್ಲಿ ಹೊಸ ಗುಂಡಿಗಳು; ದುರಸ್ತಿಗೆ ಈಗಾಗಲೇ ₹15 ಕೋಟಿ ವೆಚ್ಚ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2022, 5:29 IST
Last Updated 16 ಡಿಸೆಂಬರ್ 2022, 5:29 IST
ಮೈಸೂರು ರಸ್ತೆಯ ಕರ್ನಾಟಕ ವಿದ್ಯುತ್‌ ಕಾರ್ಖಾನೆ ಬಳಿ ತೇಪೆ ಹಾಕಿರುವ ಸ್ಥಳದಲ್ಲೇ ಮತ್ತೆ ಗುಂಡಿಗಳಾಗಿರುವುದು            ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಮೈಸೂರು ರಸ್ತೆಯ ಕರ್ನಾಟಕ ವಿದ್ಯುತ್‌ ಕಾರ್ಖಾನೆ ಬಳಿ ತೇಪೆ ಹಾಕಿರುವ ಸ್ಥಳದಲ್ಲೇ ಮತ್ತೆ ಗುಂಡಿಗಳಾಗಿರುವುದು ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.   

ಬೆಂಗಳೂರು: ಒಂದೇ ಮಳೆಗೆ ಈ ಹಿಂದೆ ಮುಚ್ಚಿದ್ದ ಗುಂಡಿಗಳು ಮತ್ತೆ ಬಾಯಿತೆರೆದುಕೊಂಡಿವೆ. ಚಂಡಮಾರುತದಿಂದ ನಗರದಲ್ಲಿ ನಾಲ್ಕೈದು ದಿನ ಮಳೆಯಾಯಿತು. ಈ ಮಳೆಗೆ ಮೊದಲು ನಗರದಲ್ಲಿದ್ದ ಎಲ್ಲ ಗುಂಡಿಗಳನ್ನೂ ಮುಚ್ಚಲಾಗಿದೆ ಎಂದು ಬಿಬಿಎಂಪಿ ಹೇಳಿಕೊಂಡಿತ್ತು. ಆದರೆ, ಇದೀಗ ಸುರಿದಿರುವ ಮಳೆಯಿಂದ ಹಳೆ ಗುಂಡಿಗಳು ಮತ್ತೆ ತೆರೆದುಕೊಂಡಿವೆ. ಜೊತೆಗೆ ಹೊಸ ಗುಂಡಿಗಳೂ ಮೂಡಿವೆ.

‘ಈ ವರ್ಷ 33 ಸಾವಿರ ರಸ್ತೆಗುಂಡಿಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ ಬಹುತೇಕ ಎಲ್ಲವನ್ನೂ ಮುಚ್ಚಲಾಗಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದ್ದರು. ‘ಡಿಸೆಂಬರ್‌ ವೇಳೆಗೆನಗರದ ರಸ್ತೆಗಳನ್ನು ಗುಂಡಿಮುಕ್ತ ಮಾಡಲಾಗುತ್ತದೆ’ ಎಂದು ಪ್ರಧಾನ ಎಂಜಿನಿಯರ್‌ ಪ್ರಹ್ಲಾದ್‌ ಹೇಳಿದ್ದರು. ಆದರೆ, ಇದು ಸಾಕಾರಗೊಂಡಿಲ್ಲ.

ಜೆ.ಸಿ. ರಸ್ತೆ, ಟೌನ್‌ಹಾಲ್‌ ಮುಂಭಾಗ ಪ್ರಥಮವಾಗಿ ಬಿಬಿಎಂಪಿ ರಸ್ತೆ ಗುಂಡಿ ಮುಚ್ಚುವ ಕೆಲಸವನ್ನು ಎರಡು ತಿಂಗಳ ಹಿಂದೆ ಆರಂಭಿಸಿತ್ತು. ಆ ರಸ್ತೆಗಳಲ್ಲಿ ಇಂದು ಅದೇ ಗುಂಡಿಗಳು ಮತ್ತೆ ತೆರೆದುಕೊಂಡಿದೆ. ರಸ್ತೆಯಲ್ಲೆಲ್ಲ ಜೆಲ್ಲಿ ಹರಡಿದೆ. ಮೈಸೂರು ರಸ್ತೆ, ಹಳೇ ಮದ್ರಾಸ್‌ ರಸ್ತೆ, ವಿಜಯನಗರ, ನಾಗರಬಾವಿ,ರಾಜಾಜಿನಗರ, ಯಲಹಂಕ, ರಾಜರಾಜೇಶ್ವರಿನಗರ, ಯಶವಂತಪುರ ಸೇರಿ ಹಲವು ಪ್ರದೇಶಗಳ ರಸ್ತೆಗಳ ಸ್ಥಿತಿಯೂ ಇದೇ.

ADVERTISEMENT

‘ಮೈಸೂರು ರಸ್ತೆಯಲ್ಲಿ ಹೊಸಗುಡ್ಡಹಳ್ಳಿ, ಬಾಪೂಜಿನಗರ, ಬ್ಯಾಟರಾಯನಪುರದ ಸಮೀಪ ಮಳೆಯಿಂದ ಗುಂಡಿಗಳು ಮತ್ತೆ ಕಾಣಿಸಿಕೊಂಡಿವೆ. ಕವಿಕಾ ಸಮೀಪದ ರಸ್ತೆಯಲ್ಲಿ ದಿನಕ್ಕೆ ಕನಿಷ್ಠ ಇಬ್ಬರಾದರೂ ಗುಂಡಿಯಿಂದ ಬೀಳುತ್ತಾರೆ. ಇತ್ತೀಚಿನ ನಾಲ್ಕು ದಿನ ಮಳೆಯ ಸಂದರ್ಭದಲ್ಲಿ ನಿತ್ಯವೂ ಐದಾರು ಜನರು ಬೀಳುತ್ತಿದ್ದಾರೆ’ ಎಂದು ಸ್ಥಳೀಯ ಮಳಿಗೆ ಮಾಲೀಕ ಮಹಮದ್‌ ಹೇಳಿದರು.

₹15 ಕೋಟಿ: ‘ರಸ್ತೆ ಗುಂಡಿಗಳನ್ನು ಮುಚ್ಚಲು ಈ ವರ್ಷ ಸುಮಾರು ₹5 ಕೋಟಿ ಬಿಡುಗಡೆ ಮಾಡಲಾಗಿದೆ. ಕಳೆದ ಮೂರು ತಿಂಗಳಲ್ಲಿ ಗುಂಡಿ ಮುಚ್ಚಿರುವ ಕಾಮಗಾರಿಗೆ ಬಿಲ್‌ ಕಡತ ಪ್ರಾರಂಭವಾಗಿದ್ದು, ಇನ್ನೂ ಹಣ ಬಿಡುಗಡೆ ಆಗಿಲ್ಲ. ಅದೆಲ್ಲ ಸೇರಿದರೆ ಸುಮಾರು ₹15 ಕೋಟಿಯಾಗಬಹುದು’ ಎಂದು ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್‌ ರಾಯಪುರ ಮಾಹಿತಿ ನೀಡಿದರು.

ಪ್ರಧಾನ ಎಂಜಿನಿಯರ್‌ ಪ್ರಹ್ಲಾದ್‌ ಅವರು ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

‘ಗುಣಮಟ್ಟದ ರಸ್ತೆ ತೋರಿಸಿದರೆ ಬಹುಮಾನ...’

‘ಬಿಬಿಎಂಪಿ ವತಿಯಿಂದ ನಿರ್ಮಿಸಿರುವ ರಸ್ತೆ ಎಲ್ಲ ರೀತಿಯ ನಿಯಮಗಳನ್ನು ಪಾಲಿಸಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ. ಬಿಬಿಎಂಪಿಯವರು ಇದನ್ನು ಸಾಬೀತುಪಡಿಸಲಿ.ಐಆರ್‌ಸಿ ನಿಯಮವನ್ನು ಶೇ 100ರಷ್ಟು ಪಾಲಿಸಿ ನಿರ್ಮಿಸಲಾಗಿರುವ ಕನಿಷ್ಠ ಒಂದು ಕಿ.ಮೀ ರಸ್ತೆಯನ್ನು ತೋರಿಸಿ ಸಾಬೀತುಪಡಿಸಲಿ. ಅವರಿಗೆ ಬಹುಮಾನ ನೀಡುತ್ತೇನೆ’ ಎಂದುಕಾಮಗಾರಿ ಗುಣ ನಿಯಂತ್ರಣ ಕಾರ್ಯಪಡೆಯ ಮಾಜಿ ಸದಸ್ಯ ಕಾರ್ಯದರ್ಶಿಐ. ರವೀಂದ್ರನಾಥ್‌ ಸವಾಲು ಹಾಕಿದರು.

‘ನಿಯಮದಂತೆ ‘ರೋಡ್‌ ರಫ್‌ನೆಸ್‌ ಇಂಡೆಕ್ಸ್’ ಸಾಬೀತುಪಡಿಸಲಿ. ರಸ್ತೆಯ ಮೇಲ್ಮೈ ಹೇಗಿರಬೇಕು ಎಂಬುದನ್ನು ಸ್ಥಿರೀಕರಿಸುವುದೇ ಈ ಮಾಪನ. ಇನ್ನು ಡಾಂಬರು ಹಾಕುವಾಗ ‘ರೋಡ್‌ ಪೇವರ್‌ ಸೆನ್ಸರ್‌ ಮೆಷಿನ್‌’ ತೋರುವ ಉಬ್ಬುತಗ್ಗುಗಳನ್ನೂ ಪರಿಗಣಿಸುತ್ತಿಲ್ಲ’ ಎಂದು ದೂರಿದರು.

‘ರಸ್ತೆಗಳ ಗುಣಮಟ್ಟ ಕಾಪಾಡಿಕೊಳ್ಳಲು ಬೋಟ್‌ ಅಥವಾ ಇತರೆ ರೀತಿಯ ಸಹಭಾಗಿತ್ವದಲ್ಲಿ ರಸ್ತೆ ನಿರ್ಮಾಣ ಯೋಜನೆಯನ್ನು ನೀಡಬೇಕು. ರಸ್ತೆ ನಿರ್ಮಿಸಿ ಐದು ವರ್ಷ ಅವರೇ ನಿರ್ವಹಣೆ ಮಾಡಬೇಕು. ಮತ್ತೆ 5 ವರ್ಷ ನಿರ್ವಹಣೆ ವೆಚ್ಚ ನೀಡಲಿ. ಈಗಿರುವ ಗುತ್ತಿಗೆದಾರರಿಗೇ ಈ ಯೋಜನೆಯಡಿ ಕಾಮಗಾರಿ ನೀಡಲಿ’ ಎಂದು ಸಲಹೆ ನೀಡಿದರು.

ದಕ್ಷಿಣ ವಲಯ ಗುಂಡಿಮುಕ್ತ!

‘ಬಿಬಿಎಂಪಿಯ ದಕ್ಷಿಣ ವಲಯದ ರಸ್ತೆಗಳು ಗುಂಡಿಮುಕ್ತವಾಗಿವೆ. ಗುಂಡಿಗಳು ಕಂಡುಬಂದರೆದಕ್ಷಿಣ ವಲಯದ ನಿಯಂತ್ರಣ ಕೊಠಡಿ 26566362/ 22975703 ದೂರು ನೀಡಬಹುದು. ವಾಟ್ಸ್‌ ಆ್ಯಪ್‌ 9480685704ಗೆ ಜಿಯೋ ಲೊಕೇಷನ್/ವಿಳಾಸ ಇರುವ ರಸ್ತೆ ಗುಂಡಿಗಳ ಚಿತ್ರಗಳನ್ನು ಕಳುಹಿಸಬಹುದು’ ಎಂದು ದಕ್ಷಿಣ ವಲಯ ಆಯುಕ್ತ ಜಯರಾಮ್ ರಾಯಪೂರ ತಿಳಿಸಿದರು.

ಬಿಬಿಎಂಪಿಯ 8 ವಲಯಗಳ ಪೈಕಿ ದಕ್ಷಿಣ ವಲಯ ಮಾತ್ರ ಈ ರೀತಿ ರಸ್ತೆ ಗುಂಡಿಮುಕ್ತ ಎಂದು ಬಹಿರಂಗವಾಗಿ ಪ್ರಕಟಿಸಿರುವುದು. ಉಳಿದ ವಲಯಗಳಲ್ಲಿ ಮಾಹಿತಿ ನೀಡಲು ಅಧಿಕಾರಿಗಳು ಹಿಂಜರಿಯುತ್ತಿದ್ದಾರೆ. ‘ಎಲ್ಲದಕ್ಕೂ ಪ್ರಧಾನ ಎಂಜಿನಿಯರ್‌ ಅವರನ್ನೇ ಕೇಳಬೇಕು’ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.