ADVERTISEMENT

ರಸ್ತೆ ಗುಂಡಿ; ರಾಜಕೀಯಕ್ಕೆ ದೂಷಿಸಬೇಡಿ: ಗೃಹ ಸಚಿವ ಜಿ.ಪರಮೇಶ್ವರ

ಸಂಚಾರ ಪೊಲೀಸರಿಗೆ 50 ಗಸ್ತು ವಾಹನ ಹಸ್ತಾಂತರಿಸಿದ ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 23:18 IST
Last Updated 18 ಅಕ್ಟೋಬರ್ 2025, 23:18 IST
ವಿಧಾನಸೌಧದ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಹೋಂಡಾ ಇಂಡಿಯಾ ಫೌಂಡೇಶನ್ ನೀಡಿದ 50 ಗಸ್ತು ವಾಹನಗಳಲ್ಲಿ ನಗರ ಸಂಚಾರ ಪೊಲೀಸರು ಸಾಗಿದರು.
ಪ್ರಜಾವಾಣಿ ಚಿತ್ರ/ ಕೃಷ್ಣಕುಮಾರ್‌ ಪಿ.ಎಸ್‌. 
ವಿಧಾನಸೌಧದ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಹೋಂಡಾ ಇಂಡಿಯಾ ಫೌಂಡೇಶನ್ ನೀಡಿದ 50 ಗಸ್ತು ವಾಹನಗಳಲ್ಲಿ ನಗರ ಸಂಚಾರ ಪೊಲೀಸರು ಸಾಗಿದರು. ಪ್ರಜಾವಾಣಿ ಚಿತ್ರ/ ಕೃಷ್ಣಕುಮಾರ್‌ ಪಿ.ಎಸ್‌.    

ಬೆಂಗಳೂರು: ‘ಮಳೆ ಬಂದಾಗ ರಸ್ತೆಗಳು ಗುಂಡಿ ಬೀಳುತ್ತವೆ. ಅವುಗಳ ದುರಸ್ತಿಗೆ ಸಮಯ ಬೇಕು. ಆದರೆ, ರಾಜಕೀಯ ಕಾರಣಕ್ಕೆ ಟೀಕೆ ಮಾಡುವುದು ಸರಿಯಲ್ಲ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.

ವಿಧಾನಸೌಧದ ಮುಂಭಾಗ ಶನಿವಾರ ಬೆಂಗಳೂರು ನಗರ ಸಂಚಾರ ಪೊಲೀಸರು ಹಾಗೂ ಹೋಂಡಾ ಇಂಡಿಯಾ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 50 ಗಸ್ತು ವಾಹನವನ್ನು ಹಸ್ತಾಂತರಿಸಿ ಮಾತನಾಡಿದರು.

‘ಗುಂಡಿ ಮುಚ್ಚಲು ಕೆಲ ಸಮಯಬೇಕಾಗುತ್ತದೆ. ಅದಕ್ಕಾಗಿ ಸರ್ಕಾರದ ಕಾರ್ಯವೈಖರಿ ಬಗ್ಗೆ ಟೀಕೆ, ಟಿಪ್ಪಣಿ ಮಾಡುವುದು ಸರಿಯಲ್ಲ. ಕರ್ನಾಟಕ ಶಾಂತಿಯ ನಾಡು. ಬೆಂಗಳೂರು ವಾಸಯೋಗ್ಯಕ್ಕೆ ಸೂಕ್ತ ನಗರ. ಯಾವುದೋ ಕಾರಣಕ್ಕೆ ಕಂಪನಿಗಳು ಹೊರ ರಾಜ್ಯಕ್ಕೆ ಹೋಗುತ್ತವೆ. ಅದನ್ನು ರಾಜಕೀಯ ಮಾಡಬಾರದು. ಕಳೆದ ವರ್ಷ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ₹10.22 ಲಕ್ಷ ಕೋಟಿ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ ₹ 4 ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

₹1.30 ಕೋಟಿ ವೆಚ್ಚದಲ್ಲಿ 350 ಸಿಸಿ ಸಾಮರ್ಥ್ಯದ 50 ವಾಹನಗಳನ್ನು ಹೋಂಡಾ ಇಂಡಿಯಾ ಫೌಂಡೇಶನ್‌ ತನ್ನ ಖಾಸಗಿ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ಯೋಜನೆ ಅಡಿ ನೀಡಿದೆ. ರಾಯಲ್ ಎನ್‌ಫೀಲ್ಡ್‌ ವಾಹನಕ್ಕೆ ಸರಿಸಮಾನವಾಗಿ ವಾಹನ ತಯಾರಿಸಲಾಗಿದೆ. ಇವು ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರಿಗೆ ಸಹಕಾರಿಯಾಗಲಿವೆ. ಎಷ್ಟು ಕೆಲಸ ಮಾಡಿದರೂ ನಗರದಲ್ಲಿ ಟ್ರಾಫಿಕ್‌ ಸಮಸ್ಯೆ ಬಗೆಗಿನ ಟೀಕೆ ನಿಂತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದೆಹಲಿ, ಮುಂಬೈ, ಕೋಲ್ಕತ್ತ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರು ನಗರದಲ್ಲಿ ಸಂಚಾರ ಸುವ್ಯವಸ್ಥೆ ಉತ್ತಮ ಸ್ಥಿತಿಯಲ್ಲಿದೆ. ಈ ವರ್ಷ 500 ವಾಹನಗಳನ್ನು ಖರೀದಿಸಿ ಇಲಾಖೆಗೆ ನೀಡಲಾಗಿದೆ ಎಂದರು.

ಪೊಲೀಸ್ ಅಧಿಕಾರಿಗಳ ನಿಯೋಗವನ್ನು‌ ಲಂಡನ್‌ಗೆ ಕರೆದೊಯ್ಯಲಾಗಿತ್ತು.‌ ಲಂಡನ್ ಮೆಟ್ರೊ ಪೊಲೀಸರು ಕಮಾಂಡ್ ಸೆಂಟರ್‌ನ ಕಾರ್ಯವೈಖರಿಯನ್ನು ಪರಿಚಯಿಸಿದ್ದರು. ಅಪಘಾತ ಸೇರಿ ಯಾವುದೇ ತುರ್ತು ಸಂದರ್ಭಗಳಲ್ಲಿ ಸ್ಪಂದಿಸಲು ಅನುಕೂಲವಾಗುವ ನಿಟ್ಟಿನಲ್ಲಿ ನಿರ್ಮಿಸಿದ್ದರು. ಅದೇ ರೀತಿಯ ಕಮಾಂಡ್ ಸೆಂಟರ್ ಅನ್ನು ನಗರದಲ್ಲಿ ₹26 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸಾರ್ವಜನಿಕರ ಯಾವುದೇ ರೀತಿಯ ತುರ್ತು ಕರೆಗಳಿಗೆ ಪೊಲೀಸರು 9 ನಿಮಿಷದಲ್ಲಿ ಸ್ಪಂದಿಸುತ್ತಾರೆ ಎಂದು ತಿಳಿಸಿದರು.

ಡ್ರಗ್ಸ್ ದಂಧೆಯನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ನಗರ ಪೊಲೀಸರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಪೊಲೀಸರು ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಮತ್ತು ಯುವಕರಿಗೆ ಡ್ರಗ್ಸ್ ದುಷ್ಪರಿಣಾಮದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ.ಸಲೀಂ, ನಗರ ಪೊಲೀಸ್ ಕಮಿಷನರ್‌ ಸೀಮಾಂತ್ ಕುಮಾರ್ ಸಿಂಗ್, ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಕಾರ್ತಿಕ್ ರೆಡ್ಡಿ, ಹೋಂಡಾ ಇಂಡಿಯಾ ಸಂಸ್ಥೆಯ ಕಾರ್ಯಾಚರಣೆ ಅಧಿಕಾರಿಗಳಾದ ಸುನಿಲ್ ಕುಮಾರ್ ಮಿತ್ತಲ್, ಪ್ರಭು ನಾಗರಾಜ್, ಡಿಸಿಪಿ ಅನೂಪ್ ಶೆಟ್ಟಿ ಹಾಜರಿದ್ದರು.

ಅಸ್ತ್ರಂ  ಆ್ಯಪ್

ಇ–ಆಕ್ಸಿಡೆಂಟ್‌ ರಿಪೋರ್ಟ್ ಸೌಲಭ್ಯ 

ನಗರ ಸಂಚಾರ ಪೊಲೀಸರು ‘ಅಸ್ತ್ರಂ’ ಆ್ಯಪ್ ಮೂಲಕ ಇ-ಆ್ಯಕ್ಸಿಡೆಂಟ್ ರಿಪೋರ್ಟ್‌ ಸೌಲಭ್ಯವನ್ನು ಪರಿಚಯಿಸಿದ್ದಾರೆ.‌ ಸಂಚಾರ ಪೊಲೀಸ್ ಠಾಣೆಯೊಂದಕ್ಕೆ ಅಪಘಾತದ ವಿಮೆ ಕ್ಲೈಮ್‌ ಉದ್ದೇಶಕ್ಕಾಗಿ ದಿನಕ್ಕೆ 3–4 ಅರ್ಜಿ ಬರುತ್ತವೆ. ಎಫ್ಐಆರ್ ಅಗತ್ಯವಿಲ್ಲದ ಸಣ್ಣ ಅಪಘಾತದ ಸಂದರ್ಭದಲ್ಲಿ ನಾಗರಿಕರು ಅಪಘಾತದ ವರದಿ ಸಲ್ಲಿಸಲು ಮತ್ತು ವಿಮಾ ಕ್ಲೈಮ್‌ಗೆ ಅಂಗೀಕಾರ ಪಡೆಯಲು ಠಾಣೆಗೆ ಭೇಟಿ ನೀಡಬೇಕಾಗುತ್ತದೆ. ಇದರಿಂದ ಸಾಕಷ್ಟು ಸಮಯ ವ್ಯರ್ಥವಾಗುತ್ತದೆ. ಇದರ ಒತ್ತಡ ಕಡಿಮೆ ಮಾಡಲು ‘ಅಸ್ತ್ರಂ’ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಅಪಘಾತದ ವರದಿ ನಮೂದಿಸಿ ಪೋಟೊಗಳನ್ನು ಅಪ್‌ಲೋಡ್ ಮಾಡಿ ಅಂಗೀಕಾರ ಪಡೆದು ವಿಮೆಗೆ ಸಲ್ಲಿಸಬಹುದು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.