ADVERTISEMENT

ಮಳೆಯಿಂದಾಗಿ ಬೆಂಗಳೂರಿನ ಹಲವೆಡೆ ವಿದ್ಯುತ್‌ ವ್ಯತ್ಯಯ

ಕಾಡುಬೀಸನಹಳ್ಳಿಯ ಪವರ್‌ ಸ್ಟೇಷನ್‌ಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 21:53 IST
Last Updated 6 ಸೆಪ್ಟೆಂಬರ್ 2022, 21:53 IST
   

ಬೆಂಗಳೂರು: ನಗರದಲ್ಲಿ ಸತತ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬೆಸ್ಕಾಂನ ಒಂದು ವಿದ್ಯುತ್‌ ಸ್ಟೇಷನ್‌ ನೀರಿನಲ್ಲಿ ಮುಳುಗಡೆಯಾಗಿದ್ದು, ಹೊರ ವರ್ತುಲ ರಸ್ತೆ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿದೆ.

ಭಾರಿ ಮಳೆಗೆ ಕಾಡುಬೀಸನಹಳ್ಳಿಯಲ್ಲಿರುವ ಪವರ್‌ ಸ್ಟೇಷನ್‌ಗೆ ನೀರು ನುಗ್ಗಿದ್ದು, ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿದೆ. ಜತೆಗೆ, ಎರಡು ವಿದ್ಯುತ್‌ ಪರಿವರ್ತಕಗಳು ಮಳೆಯಿಂದ ಹಾನಿಗೊಳಗಾಗಿರುವ ವರದಿಯಾಗಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಕಾಡುಬೀಸನಹಳ್ಳಿಯಲ್ಲಿ ಇರುವ ಪವರ್‌ ಸ್ಟೇಷನ್‌ ಸಮೀಪವಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕೊಳಚೆ ನೀರು ಶುದ್ಧೀಕರಣ ಘಟಕದ ನೀರು ಉಕ್ಕಿ ಹರಿದ ಪರಿಣಾಮ ಬೆಸ್ಕಾಂ ಪವರ್‌ ಸ್ಟೇಷನ್‌ಗೆ ನೀರು ನುಗ್ಗಿದೆ ಎಂದು ಬೆಸ್ಕಾಂ ಪ್ರಧಾನ ವ್ಯವಸ್ಥಾಪಕ (ಗ್ರಾಹಕ ಸಂಬಂಧ ) ಎಸ್.ಆರ್. ನಾಗರಾಜ ತಿಳಿಸಿದ್ದಾರೆ.

ADVERTISEMENT

ಜಯದೇವ ಪವರ್‌ ಸ್ಟೇಷನ್‌ ಮತ್ತು ಹೊಸಕೋಟೆ ಕೈಗಾರಿಕಾ ಪ್ರದೇಶದಲ್ಲಿರುವ ಟ್ರಾನ್ಸ್‌ಫಾರ್ಮರ್‌ ಟ್ರಿಪ್‌ ಆದ ಪರಿಣಾಮ ಹೊಸಕೋಟೆ ಪ್ರದೇಶದಲ್ಲಿ ಸುಮಾರು 8ರಿಂದ 10 ತಾಸು ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು ಎಂದು ನಾಗರಾಜ ತಿಳಿಸಿದ್ದಾರೆ.

ಬೆಂಗಳೂರಿನ ಸರ್ಜಾಪುರ, ಯಮಲೂರು, ರೈನ್‌ ಬೋ ಬಡಾವಣೆ ಪ್ರದೇಶಗಳಲ್ಲಿನ ಅಪಾರ್ಟ್‌ಮೆಂಟ್‌ಗಳ ನೆಲಮಹಡಿಗಳಲ್ಲಿ ನೀರು ನುಗ್ಗಿರುವ ಪರಿಣಾಮ ಈ ಪ್ರದೇಶಗಳ ಅಪಾರ್ಟ್‌ಮೆಂಟ್‌ಗಳ ವಿದ್ಯುತ್‌ ಸಂಪರ್ಕವನ್ನು ಸುರಕ್ಷತೆ ದೃಷ್ಟಿಯಿಂದ ಕಡಿತಗೊಳಿಸಲಾಗಿದೆ ಎಂದು ನಾಗರಾಜ ತಿಳಿಸಿದ್ದಾರೆ.

ಹಾನಿ ವಿವರ: ಆಗಸ್ಟ್‌ ತಿಂಗಳಲ್ಲಿ ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದ್ದು, ಈ ಅವಧಿಯಲ್ಲಿ ಒಟ್ಟು 1,823 ವಿದ್ಯುತ್‌ ಕಂಬಗಳು ಮುರಿದಿದ್ದು, 1341 ಮರಗಳು ಮತ್ತು ಕೊಂಬೆಗಳು ವಿದ್ಯುತ್‌ ತಂತಿ ಮೇಲೆ ಬಿದ್ದಿವೆ. ಒಟ್ಟು174 ವಿದ್ಯುತ್‌ ಪರಿವರ್ತಕಗಳು ಹಾನಿಗೊಳಗಾಗಿವೆ ಸುಮಾರು 55 ‘ಡಬಲ್‌ ಪೋಲ್‌ ಸ್ಟ್ರಕ್ಚರ್‌’ಗಳು ಹಾನಿಗೊಂಡಿವೆ.

ಜುಲೈ ತಿಂಗಳಲ್ಲಿ ಸುರಿದ ಮಳೆಗೆ 703 ವಿದ್ಯುತ್‌ ಕಂಬಗಳು ಮುರಿದಿದ್ದು, 486 ಮರಗಳು ಮತ್ತು ಕೊಂಬೆಗಳು ವಿದ್ಯುತ್‌ ತಂತಿಯ ಮೇಲೆ ಉರುಳಿ ಬಿದ್ದಿವೆ. ಹಾಗೆಯೇ 104 ವಿದ್ಯುತ್‌ ಪರಿವರ್ತಕಗಳು ಮತ್ತು 23 ‘ಡಬಲ್‌ ಪೋಲ್‌ ಸ್ಟ್ರಕ್ಚರ್‌’ ಹಾನಿಗೊಳಗಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.