ADVERTISEMENT

ಹೆಸರಷ್ಟೇ ಪ್ರಧಾನಮಂತ್ರಿ ಆವಾಸ್‌, ದುಡ್ಡು ನಮ್ಮದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಕೊಳೆಗೇರಿ ನಿವಾಸಿಗಳಿಗೆ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 16:02 IST
Last Updated 2 ಮಾರ್ಚ್ 2024, 16:02 IST
ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಿಸಿರುವ 36,789 ಮನೆಗಳ ಫಲಾನುಭವಿಗಳಲ್ಲಿ ಕೆಲವರಿಗೆ ಬೀಗದ ಕೀಗಳನ್ನು ಸಿದ್ದರಾಮಯ್ಯ ನೀಡಿದರು. ಮಂಡಳಿ ಅಧ್ಯಕ್ಷ ಪ‍್ರಸಾದ್ ಅಬ್ಬಯ್ಯ, ಶಾಸಕ ಬೈರತಿ ಬಸವರಾಜ್, ವಸತಿ ಸಚಿವ ಬಿ.ಜೆಡ್‌. ಜಮೀರ್ ಅಹಮದ್ ಖಾನ್ ಹಾಜರಿದ್ದರು. –ಪ್ರಜಾವಾಣಿ ಚಿತ್ರ
ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಿಸಿರುವ 36,789 ಮನೆಗಳ ಫಲಾನುಭವಿಗಳಲ್ಲಿ ಕೆಲವರಿಗೆ ಬೀಗದ ಕೀಗಳನ್ನು ಸಿದ್ದರಾಮಯ್ಯ ನೀಡಿದರು. ಮಂಡಳಿ ಅಧ್ಯಕ್ಷ ಪ‍್ರಸಾದ್ ಅಬ್ಬಯ್ಯ, ಶಾಸಕ ಬೈರತಿ ಬಸವರಾಜ್, ವಸತಿ ಸಚಿವ ಬಿ.ಜೆಡ್‌. ಜಮೀರ್ ಅಹಮದ್ ಖಾನ್ ಹಾಜರಿದ್ದರು. –ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದ ಬಡವರಿಗೆ ಸೂರು ಕಲ್ಪಿಸಲು ಇರುವ ಯೋಜನೆಗೆ ಹೆಸರು ಮಾತ್ರ ಪ್ರಧಾನಮಂತ್ರಿ ಆವಾಸ್‌ ಯೋಜನೆ. ₹ 1.5 ಲಕ್ಷ ಸಬ್ಸಿಡಿ ನೀಡುವ ಕೇಂದ್ರ ಸರ್ಕಾರವು ಮನೆಯ ಒಟ್ಟು ವೆಚ್ಚವಾದ ₹7.5 ಲಕ್ಷಕ್ಕೆ ಜಿಎಸ್‌ಟಿ ರೂಪದಲ್ಲಿ ₹ 1.38 ಲಕ್ಷ ವಾಪಸ್‌ ಪಡೆಯುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದರು.

ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನ.ನಾಗೇನಹಳ್ಳಿಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ  ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ರಾಜ್ಯದ ವಿವಿಧೆಡೆ 36,789 ಮನೆಗಳನ್ನು ಫಲಾನುಭವಿಗಳಿಗೆ ವಿತರಿಸಿ ಅವರು ಮಾತನಾಡಿದರು.

‘ಒಂದು ಮನೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಒಟ್ಟು ತಲಾ ₹1.5 ಲಕ್ಷದಂತೆ ಭರಿಸಿ ₹ 3 ಲಕ್ಷ ಸಬ್ಸಿಡಿ ನೀಡಲಾಗುತ್ತಿತ್ತು. ಉಳಿದ ಮೊತ್ತವನ್ನು ಫಲಾನುಭವಿಗಳೇ ಭರಿಸಬೇಕಿತ್ತು. ಆದರೆ, ಆ ಶಕ್ತಿ ಇಲ್ಲದ ಕಾರಣ ಮನೆಗಳು ನನೆಗುದಿಗೆ ಬಿದ್ದಿದ್ದವು. ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ ಈ ವಿಚಾರವನ್ನು ನನ್ನ ಗಮನಕ್ಕೆ ತಂದಿದ್ದರು. ಬಡವರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಕಾರಣಕ್ಕೆ ಫಲಾನುಭವಿಗಳಿಂದ ಕೇವಲ ₹ 1 ಲಕ್ಷ ವಂತಿಗೆ ಪಾವತಿ ಮಾಡಿಸಿಕೊಂಡು ಉಳಿದ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸಿದೆ ಎಂದು ವಿವರಿಸಿದರು.

ADVERTISEMENT

‘ಒಂದು ಮನೆಗೆ ₹7.5 ಲಕ್ಷ ವೆಚ್ಚವಾಗುತ್ತದೆ. ಅದಕ್ಕೆ ಜಿಎಸ್‌ಟಿ ₹ 1.38 ಲಕ್ಷ ತೆರಬೇಕಾಗುತ್ತದೆ. ಈ ಮೊತ್ತ ಕಳೆದರೆ ಕೇಂದ್ರ ಸರ್ಕಾರವು ಒಂದು ಮನೆಗೆ ಕೇವಲ  ₹12 ಸಾವಿರ ನೀಡಿದಂತಾಗುತ್ತದೆ. ಆದರೂ ಅವರೇ ಹೆಸರು ಇಟ್ಟುಕೊಂಡಿದ್ದಾರೆ, ಇಟ್ಟುಕೊಳ್ಳಲಿ. ಯಾರು ಎಷ್ಟು ನೀಡಿದ್ದಾರೆ ಎಂಬುದು ಫಲಾನುಭವಿಗಳಿಗೆ ಮಾತ್ರ ಗೊತ್ತಿರಲಿ. ಇಲ್ಲದೇ ಇದ್ದರೆ ಸುಳ್ಳನ್ನೇ ಮನೆದೇವ್ರು ಮಾಡಿಕೊಂಡಿರುವ ಬಿಜೆಪಿ ದಾರಿತಪ್ಪಿಸಲಿದೆ’ ಎಂದು ಎಚ್ಚರಿಸಿದರು.

ವಸತಿ ಸಚಿವ ಬಿ.ಜೆಡ್‌ ಜಮೀರ್‌ ಅಹಮದ್‌ ಖಾನ್‌ ಮಾತನಾಡಿ, ‘ಸಿದ್ದರಾಮಯ್ಯ ಅವರು 2013ರಿಂದ 18ರವರೆಗೆ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಮನೆಗಳನ್ನು ಮಂಜೂರು ಮಾಡಿದ್ದರು. ಆನಂತರ ಮುಖ್ಯಮಂತ್ರಿಗಳಾದ ಎಚ್‌.ಡಿ. ಕುಮಾರಸ್ವಾಮಿ, ಬಿ.ಎಸ್‌. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಯಾವುದೇ ಮನೆಗಳನ್ನು ಮಂಜೂರು ಮಾಡಲಿಲ್ಲ. ನಾಲ್ಕು ವರ್ಷ ವಸತಿ ಸಚಿವರಾಗಿದ್ದ ಸೋಮಣ್ಣ ಅವರಿಗೆ ಬಡವರ ಪರ ಕಾಳಜಿ ಇದ್ದರೂ ಆಗಿನ ಮುಖ್ಯಮಂತ್ರಿಗಳು ಸ್ಪಂದಿಸಲಿಲ್ಲ’ ಎಂದು ಟೀಕಿಸಿದರು.

ಈ ಯೋಜನೆಯಡಿ ರಾಜ್ಯದಾದ್ಯಂತ 1,80,253 ಮನೆಗಳು ನಿರ್ಮಾಣಗೊಳ್ಳುತ್ತಿವೆ. ಅದರಲ್ಲಿ ಇಂದು 36,789 ಮನೆಗಳು ಉದ್ಘಾಟನೆಗೊಂಡಿವೆ. ಡಿಸೆಂಬರ್‌ ಒಳಗೆ ಎಲ್ಲ ಮನೆಗಳು ಪೂರ್ಣಗೊಳ್ಳಲಿವೆ ಎಂದರು.

ಜಮೀರ್‌ಗೆ ಮೆಚ್ಚುಗೆ: ‘ಬಡವರಿಗೆ ಸ್ವಂತ ಮನೆ ಕನಸು ಮಾಡಿಕೊಳ್ಳಲಾಗುತ್ತಿರಲಿಲ್ಲ. ಅವರ ಆರ್ಥಿಕ ಸಂಕಷ್ಟ ನೋಡಿದ ಸಚಿವ ಜಮೀರ್‌, ಸರ್ಕಾರದಿಂದ ಹಣ ಕೊಡಬೇಕು ಎಂದು ಒತ್ತಡ ಹಾಕಿದರು. ಹೀಗಾಗಿ, ಫಲಾನುಭವಿಗಳ ಪಾಲನ್ನು ₹1 ಲಕ್ಷಕ್ಕೆ ಇಳಿಸಲಾಯಿತು. ಇದಕ್ಕೆ ಜಮೀರ್ ಕಾರಣ’ ಎಂದು ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

‘ಗ್ಯಾರಂಟಿ’ ಶ್ಲಾಘಿಸಿರುವ ಸುನೀಲ್‌ ಕುಮಾರ್‌: ಡಿಕೆಶಿ

ಗ್ಯಾರಂಟಿ ಯೋಜನೆಗಳನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ. ಮಾಜಿ ಸಚಿವರಾಗಿರುವ ಕಾರ್ಕಳ ಶಾಸಕ ಸುನೀಲ್‌ ಕುಮಾರ್‌ ಅವರು ಶ್ಲಾಘಿಸಿರುವುದು ಪತ್ರಿಕೆಗಳಲ್ಲಿ ಬಂದಿದೆ. ಗ್ಯಾರಂಟಿ ಯೋಜನೆಗಳಿಂದ ಜನರ ಬದುಕು ಸದೃಢ ಎಂಬುದಾಗಿ ಅವರು ಹೇಳಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು. ಬೈರತಿ ಅಸಮಾಧಾನ: ‘ಕೇಂದ್ರ ಸರ್ಕಾರ ಯೋಜನೆಯಾದರೂ ಎಲ್ಲಿಯೂ ಪ್ರಸ್ತಾಪಿಸಿಲ್ಲ’ ಎಂದು ಕಾರ್ಯಕ್ರಮದ ಆರಂಭದಲ್ಲಿಯೇ ಶಾಸಕ ಬೈರತಿ ಬಸವರಾಜ್‌ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.