
ಬೆಂಗಳೂರು: ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮವಾದ ‘ಪ್ರಜಾವಾಣಿ’ಯ ಹೆಸರಿನಲ್ಲಿ, ಅದರದ್ದೇ ಅಂತರ್ಜಾಲ ಪುಟದ ವಿನ್ಯಾಸವನ್ನೇ ನಕಲು ಮಾಡಿ ಸುದ್ದಿ ಹರಡುತ್ತಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
‘ದೇಶದ ಅಭಿವೃದ್ಧಿಗೆ ಬೆಂಗಳೂರು ಕೇಂದ್ರಾಡಳಿತ ಪ್ರದೇಶವಾಗುವುದು ಅಗತ್ಯ: ಬಿಜೆಪಿ ವರಿಷ್ಠ ಸಿ.ಟಿ. ರವಿ’ ಎಂಬ ಶೀರ್ಷಿಕೆಯಲ್ಲಿ ಸುದ್ದಿಯೊಂದು ಪ್ರಕಟಗೊಂಡಿದೆ ಎಂದು ಕಿಡಿಗೇಡಿಗಳು ‘ಪ್ರಜಾವಾಣಿ’ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳನ್ನು ಹರಿಯಬಿಟ್ಟಿದ್ದಾರೆ.
ಇದನ್ನು ವಿಕಾಸ್ ನೇಗಿಲೋಣಿ ಎಂಬವರು ವರದಿ ಮಾಡಿರುವ ರೀತಿಯಲ್ಲಿ ತಿರುಚಿ ಪ್ರಕಟಿಸಲಾಗಿದೆ. ‘ಪ್ರಜಾವಾಣಿ ಕಥಾ‘ ಸ್ಪರ್ಧೆಯಲ್ಲಿ ವಿಕಾಸ್ ನೇಗಿಲೋಣಿ ಅವರ ‘ಅಂತಿಮ ಯಾತ್ರೆ’ ಎಂಬ ಕಥೆಗೆ ಮೆಚ್ಚುಗೆ ಪಡೆದ ಪ್ರಶಸ್ತಿ ಲಭಿಸಿದೆ. ಅದು ನ. 9ರಂದು ‘ಭಾನುವಾರ ಪುರವಣಿ’ ವಿಭಾಗದಲ್ಲಿ ಪ್ರಕಟಗೊಂಡಿತ್ತು. ಈ ಕಥೆಯ ಸ್ಕ್ರೀನ್‌ಶಾಟ್ ತೆಗೆದುಕೊಂಡು, ಕಿಡಿಗೇಡಿಗಳು ಶೀರ್ಷಿಕೆ ಮಾತ್ರ ಬದಲಿಸಿ ಹಂಚಿಕೊಂಡಿದ್ದಾರೆ. ಇಲ್ಲಿ ಬಳಸಿರುವುದು ಸಂಸ್ಥೆಯು ತಾನೇ ವಿಶಿಷ್ಟವಾಗಿ ವಿನ್ಯಾಸಗೊಳಿಸಿದ ಯುನಿಕೋಡ್ ಫಾಂಟ್ ಅಲ್ಲ ಎಂದು ‘ಪ್ರಜಾವಾಣಿ’ ಖಚಿತಪಡಿಸುತ್ತದೆ.
ವಿಕಾಸ್ ನೇಗಿಲೋಣಿ ಅವರು ಕಥೆಗಾರರೇ ಹೊರತು, ‘ಪ್ರಜಾವಾಣಿ’ಯ ವರದಿಗಾರರಲ್ಲ. ಇದೊಂದು ನಕಲಿ ಸುದ್ದಿಯಾಗಿದ್ದು, ಇದನ್ನು ‘ಪ್ರಜಾವಾಣಿ’ ಪ್ರಕಟಿಸಿಲ್ಲ.
ಓದುಗರು ವಿಶ್ವಾಸಾರ್ಹ ಸುದ್ದಿಗಳಿಗಾಗಿ ನೇರವಾಗಿ www.prajavani.net ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.