
ಬೆಂಗಳೂರು: ಭಾರಿ ಕುತೂಹಲ ಮೂಡಿಸಿದ್ದ ‘ಪ್ರಜಾವಾಣಿ’ಯ ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆ–2025ರ ಫೈನಲ್‌ನಲ್ಲಿ ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡಿದ್ದ ಬೆಂಗಳೂರಿನ ಶಿಶುಗೃಹ ಸೀನಿಯರ್ ಸ್ಕೂಲ್ ತಂಡ ಅಂತಿಮ ಹಂತದಲ್ಲೂ ಅತ್ಯುತ್ತಮವಾಗಿ ಉತ್ತರಿಸಿ ಹೆಚ್ಚಿನ ಅಂಕಗಳ ಅಂತರದಿಂದ ಚಾಂಪಿಯನ್ ಆಗಿ ಹೊರಹೊಮ್ಮಿತು.
ಜಯನಗರದ ರಾಷ್ಟ್ರೀಯ ವಿದ್ಯಾಲಯದ ಆರ್.ವಿ. ಸಭಾಂಗಣದಲ್ಲಿ ಸೋಮವಾರ ನಡೆದ ರಸ್ರಪ್ರಶ್ನೆ ಸ್ಪರ್ಧೆಯು ಜ್ಞಾನದ ವಿಸ್ತರಣೆಗೆ, ಕುತೂಹಲದ ಕ್ಷಣಗಳಿಗೆ ಸಾಕ್ಷಿಯಾಯಿತು. ಅಂತಿಮವಾಗಿ ಹುಬ್ಬಳ್ಳಿ ವಲಯದ ಬ್ರಹ್ಮಾವರದ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ ತಂಡವು ದ್ವಿತೀಯ ಹಾಗೂ ಬಾಗಲಕೋಟೆಯ ಬಸವೇಶ್ವರ ಅಂತರರಾಷ್ಟ್ರೀಯ ಪಬ್ಲಿಕ್ ಸ್ಕೂಲ್ ತಂಡವು ತೃತೀಯ ಸ್ಥಾನ ಪಡೆದವು.
ಜ್ಞಾನದಲ್ಲಿ ಯಾರಿಗೂ ನಾವು ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ಯೋಚಿಸಿ ವಿದ್ಯಾರ್ಥಿಗಳು ಉತ್ತರ ನೀಡಿದರು. ಕರ್ನಾಟಕದ ನಾನಾ ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಂದ ಹಿಡಿದು ಹಲವು ದೇಶಗಳ ಕುರಿತಾದ ಪ್ರಶ್ನೆಗಳನ್ನು ಸೈ ಎನ್ನುವಂತೆಯೇ ಎದುರಿಸಿದರು. ಎದುರಾಳಿಗಳಿಗೆ ನೀರು ಕುಡಿಸಿ ಗೆದ್ದು ಸಂಭ್ರಮಿಸಿದರು.
ಫೈನಲ್ಸ್‌ನಲ್ಲಿ ಆರ್ಕಿಡ್ ಚಾಯ್ಸ್, ದೇಶ ಸುತ್ತು–ಕೋಶ ಓದು, ಚಿತ್ರ–ವಿಚಿತ್ರ, ವಿಷಯ–ವಿಶೇಷ, ಫಟಾಫಟ್ ಎಂಬ ಐದು ಸುತ್ತುಗಳು ಇದ್ದವು. ಫಟಾಫಟ್ ಸುತ್ತಿನಲ್ಲಿ ಅಚ್ಚರಿ ಪ್ರಶ್ನೆಗಳು ತೇಲಿಬಂದವು. ಅಷ್ಟೇ ಜಾಣ್ಮೆ, ತಾಳ್ಮೆಯ ಉತ್ತರಗಳು ಬಂದವು. ಅಂಕಗಳ ಏಣಿಯಾಟದಲ್ಲಿ ಮೊದಲ ಎರಡು ಸ್ಥಾನದಲ್ಲಿಯೇ ಎರಡು ತಂಡಗಳಲ್ಲಿ ಒಂದು ತಂಡ ಋಣಾತ್ಮಕ ಸುತ್ತಿನಲ್ಲಿ ತಪ್ಪು ಉತ್ತರ ನೀಡಿ ಅಂಕ ಕಳೆದುಕೊಂಡಿತು. ಇದು ಮತ್ತೊಂದು ತಂಡಕ್ಕೆ ವರದಾನವೂ ಆಗಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಪ್ರಸಂಗ ನಡೆಯಿತು.
ಬೆಂಗಳೂರು, ಹುಬ್ಬಳ್ಳಿ, ದಾವಣಗೆರೆ, ಮೈಸೂರು, ಬೀದರ್, ಬಾಗಲಕೋಟೆ ವಲಯಗಳಲ್ಲಿ ಗೆಲುವು ಸಾಧಿಸಿ, ಫೈನಲ್‌ಗೆ ಆಯ್ಕೆಯಾಗಿದ್ದ ಆರು ತಂಡಗಳು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. 7ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ನಡೆದ ವಲಯವಾರು ಸ್ಪರ್ಧೆಯಲ್ಲಿ ನೂರಾರು ತಂಡಗಳು ಪಾಲ್ಗೊಂಡಿದ್ದವು. ಅದರಲ್ಲಿ ವಿಜೇತ ತಂಡಗಳು ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಪಾಲ್ಗೊಂಡವು.
ಆರಂಭದ ಸುತ್ತಿನಿಂದಲೇ ಮುನ್ನಡೆ ಕಾಯ್ದುಕೊಂಡು ಬಂದಿದ್ದ ತ್ರಿವಿಕ್ರಮ್ ಕೇಶವನ್ ಮತ್ತು ವಿಷ್ಣು ಎಸ್.ಗಣೇಶ್ ಜೋಡಿಯು ಕೆಲ ಸುತ್ತುಗಳಲ್ಲಿ ಎಡವಿದರೂ ಪಾಸಿಂಗ್ ಪ್ರಶ್ನೆಗಳನ್ನು ಗ್ರಹಿಸಿ ಉತ್ತರಿಸುವ ಮೂಲಕ ಹೆಚ್ಚು ಅಂಕಗಳನ್ನು ಪಡೆದು ಗೆಲುವಿನ ದಡ ಸೇರಿ ಸಂಭ್ರಮಿಸಿತು. ವಿಜೇತ ತಂಡ ಆಕರ್ಷಕ ಟ್ರೋಫಿ, ಪ್ರಶಸ್ತಿ ಪತ್ರ, ಟ್ಯಾಬ್ ತಮ್ಮದಾಗಿಸಿಕೊಂಡಿತು.
ಶಿಶುಗೃಹ ತಂಡಕ್ಕೆ ಪೈಪೋಟಿ ನೀಡಿದ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್‌ನ ತಕ್ಷಕ್ ಶೆಟ್ಟಿ ಮತ್ತು ಸೃಜನ್ ಎನ್.ವೈ ಜೋಡಿಯು ನಾಲ್ಕನೇ ಸುತ್ತಿನ ಅಂತ್ಯದಲ್ಲಿ ಮೊದಲನೇ ಸ್ಥಾನದಲ್ಲಿದ್ದರೂ ಕೊನೆಯ ಸುತ್ತಿನಲ್ಲಿ ತಪ್ಪು ಉತ್ತರ ನೀಡಿ ಅಂಕ ಕಳೆದುಕೊಂಡಿತು. ಇದರಿಂದಾಗಿ ದ್ವಿತೀಯ ಸ್ಥಾನದೊಂದಿಗೆ ಟ್ರೋಫಿ, ಪ್ರಶಸ್ತಿ ಪತ್ರ, ಮೊಬೈಲ್ ಫೋನ್ ಪಡೆದರೆ, ತೃತೀಯ ಸ್ಥಾನ ಪಡೆದ ಬಸವೇಶ್ವರ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ತೇಜಲ್ ಮತ್ತು ಸ್ತುತಿ ರಾಠಿ ಜೋಡಿಗೆ ಟ್ರೋಫಿ, ಪ್ರಶಸ್ತಿ ಪತ್ರ ಹಾಗೂ ಸ್ಮಾರ್ಟ್ ವಾಚ್ ನೀಡಲಾಯಿತು.
ಅಂತಿಮ ಸುತ್ತಿನಲ್ಲಿ ವಿಜೇತ ತಂಡಗಳ ಜತೆ ಕಲಬುರಗಿಯ ಎಸ್.ಬಿ.ಆರ್. ಪಬ್ಲಿಕ್ ಸ್ಕೂಲ್‌ನ ಬಸವಪ್ರಸಾದ್ ಪಾಟೀಲ್– ಎಂ.ಪಿ.ಶ್ರೇಯಸ್, ದಾವಣಗೆರೆಯ ಬಾಪೂಜಿ ಹಿರಿಯ ಪ್ರಾಥಮಿಕ ಶಾಲೆಯ ಈಶಾನ್ ಎಸ್.ಬೆಂಗೇರಿ–ಚಿನ್ಮಯ್ ಆರ್.ಕಲಾಲ್ ಹಾಗೂ ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಯ ರಿಷಿ ಭಾರ್ಗವ್ ಶ್ರಾಫ್ –ಹಿರೇನ್ ಬಿ.ರೈ ತಂಡ ಇದ್ದವು.
ಆತ್ಮವಿಶ್ವಾಸದ ಆಟ
ಕ್ವಿಜ್ ಮಾಸ್ಟರ್ ಮೇಘವಿ ಮಂಜುನಾಥ್ ಅವರು ಕೇಳುವ ಪ್ರತಿ ಪ್ರಶ್ನೆಯನ್ನು ಸ್ಪರ್ಧಿಗಳು ಉತ್ಸಾಹದಿಂದಲೇ ಎದುರಿಸುತ್ತಿದ್ದರು. ವಿಜ್ಞಾನ, ಸಮಾಜ, ಸಂಶೋಧನೆ, ಇತಿಹಾಸ, ಪ್ರಶಸ್ತಿ ಪುರಸ್ಕೃತರು, ಪ್ರಚಲಿತ ವಿಷಯ, ವನ್ಯಜೀವಿ, ಸಾಹಿತ್ಯ ವಿಷಯಗಳ ಮೇಲೆ ಪ್ರಶ್ನೆ ಕೇಳಲಾಯಿತು. ಸೂಕ್ಷ್ಮ ಗ್ರಹಿಕೆ, ತಾಳ್ಮೆ, ಆತ್ಮವಿಶ್ವಾಸದಿಂದಲೇ ಸ್ಪರ್ಧಿಗಳು ಉತ್ತರಿಸಿದರು.
ಪ್ರತಿಯೊಂದು ಸುತ್ತೂ ಕುತೂಹಲ ಹೆಚ್ಚಿಸುವಂತೆ ಮಾಡಿತು. ಪರದೆಯ ಮೇಲೆ ಪ್ರಶ್ನೆಗಳು ಮೂಡುತ್ತಿದ್ದಂತೆಯೇ ಆಲೋಚಿಸಿ, ಉತ್ತರಿಸುವ ಕೌಶಲ ತೋರಿದ ತಂಡಗಳು ತಮ್ಮ ಬುಟ್ಟಿಗೆ ಅಂಕವನ್ನು ಜಮೆ ಮಾಡಿಕೊಂಡು ಜಯದ ನಗೆ ಬೀರುತ್ತಿದ್ದವು.
ಸ್ಪರ್ಧೆಯಲ್ಲಿ ಕೇಳಿದ ಪ್ರಶ್ನೆಗಳು ಎಲ್ಲರನ್ನೂ ತುದಿಗಾಲಿನಲ್ಲಿ ನಿಲ್ಲಿಸಿದವು. ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನದ ಜೊತೆಗೆ ಅವರಲ್ಲಿರುವ ಏಕಾಗ್ರತೆ, ಚಾಣಾಕ್ಷತನ, ಗ್ರಹಿಕೆ ಸಾಮರ್ಥ್ಯ ಒರೆಗೆ ಹಚ್ಚಲಾಗಿತ್ತು. ಕೆಲ ಪ್ರಶ್ನೆಗಳಿಗೆ ತಂಡಗಳು ಉತ್ತರ ನೀಡದಿದ್ದಾಗ, ಪ್ರೇಕ್ಷಕರರಾಗಿ ಕುಳಿತಿದ್ದ ಮಕ್ಕಳು, ಶಿಕ್ಷಕರು, ಪೋಷಕರು ಸರಿ ಉತ್ತರ ಹೇಳಿ, ಬಹುಮಾನ ಪಡೆದು ಸಂಭ್ರಮಿಸಿದರು.
ದಿ ಪ್ರಿಂಟರ್ಸ್ ಮೈಸೂರು ಪ್ರೈವೆಟ್ ಲಿಮಿಟೆಡ್‌ನ (‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಸಮೂಹ) ನಿರ್ದೇಶಕಿ ಕೆ.ಟಿ. ಸೌಭಾಗ್ಯಲಕ್ಷ್ಮಿ, ‘45’ ಸಿನಿಮಾದ ನಿರ್ದೇಶಕ ಅರ್ಜುನ್ ಜನ್ಯ ಅವರು ವಿಜೇತ ಸ್ಪರ್ಧಿಗಳಿಗೆ ಬಹುಮಾನ ವಿತರಿಸಿದರು.
‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ದಿ ಪ್ರಿಂಟರ್ಸ್ ಮೈಸೂರು ಪ್ರೈವೆಟ್ ಲಿಮಿಟೆಡ್ ಸಿಒಒ ಕಿರಣ್ ಸುಂದರ್ ರಾಜನ್, ಆರ್ಕಿಡ್ಸ್ ವಲಯ ಮುಖ್ಯಸ್ಥೆ ಮಂಜುಳಾ, ದಾವಣಗೆರೆಯ ಸಿದ್ದಗಂಗಾ ಪಿಯು ಕಾಲೇಜು ನಿರ್ದೇಶಕ ಡಿ.ಎಸ್.ಜಯಂತ್ ಪಾಲ್ಗೊಂಡಿದ್ದರು.
ಆರ್ಕಿಡ್ಸ್ ದಿ ಇಂಟರ್‌ನ್ಯಾಷನಲ್ ಸ್ಕೂಲ್ ಪ್ರಸ್ತುತಿಪಡಿಸಿದ ಈ ಕಾರ್ಯಕ್ರಮದಲ್ಲಿ ಬ್ಯಾಂಕಿಂಗ್ ಪಾರ್ಟ್‌ನರ್ 'ಎಸ್‌ಬಿಐ’, ರಿಫ್ರೆಶ್‌ಮೆಂಟ್ ಪಾರ್ಟ್‌ನರ್ 'ಮೊಗು ಮೊಗು’, ಸ್ಪೆಷಲ್ ಪಾರ್ಟ್‌ನರ್ ‘ಭೀಮ’, ನ್ಯೂಟ್ರಿಷನ್ ಪಾರ್ಟ್‌ನರ್ ‘ನಂದಿನಿ’ ಸಹಕರಿಸಿದವು. ಪೂರ್ವಿಕಾ, ವಿಐಪಿಎಸ್, ಟ್ಯಾಲೆಂಟ್ ಸ್ಪ್ರಿಂಟ್, ಐಸಿಎಸ್ ಮಹೇಶ್ ಪಿಯು ಕಾಲೇಜು, ಸೂಪರ್ ಬ್ರೈನ್, ಮಾರ್ಗದರ್ಶಿ, ದಿ ಟೀಮ್ ಅಕಾಡೆಮಿ, ಐಬಿಎಂಆರ್, ಮಂಗಳೂರು ಪಿಯು ಕಾಲೇಜು, ಶಾರದಾ ವಿದ್ಯಾಮಂದಿರ ಸಹಯೋಗ ನೀಡಿದ್ದವು. ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಸಹಯೋಗ ನೀಡಿತು.
ಉತ್ತಮ ಉತ್ತರಕ್ಕೆ ಕಾತರ
‘ಪ್ರಜಾವಾಣಿ’ ರಸಪ್ರಶ್ನೆಯೊಂದಿಗೆ ಇದು ನನ್ನ ಆರನೇ ಆವೃತ್ತಿಯ ಪಯಣ. ಮಕ್ಕಳಲ್ಲಿರುವ ಜ್ಞಾನ ವಿವಿಧ ವಿಷಯಗಳಲ್ಲಿನ ಆಸಕ್ತಿಯನ್ನು ಹೊರಗೆಡಹಲು ಇದೊಂದು ವೇದಿಕೆಯಾಯಿತು. ಉತ್ತರ ಕರ್ನಾಟಕ ಭಾಗದಲ್ಲಿ ಈ ಬಾರಿ ದೊರೆತ ಪ್ರತಿಕ್ರಿಯೆ ಮಕ್ಕಳ ಪಾಲ್ಗೊಳ್ಳುವಿಕೆ ಉತ್ತಮವಾಗಿತ್ತು. ತಾರ್ಕಿಕ ಪ್ರಶ್ನೆಗಳಿಗೆ ಪೂರಕವಾಗಿ ಯೋಚಿಸಿ ಬುದ್ದಿವಂತಿಕೆ ಬಳಸುವುದರೊಂದಿಗೆ ಉತ್ತರ ನೀಡುವ ಪ್ರಯತ್ನವನ್ನು ಮಕ್ಕಳು ಮಾಡಿದ ಪರಿ ಖುಷಿ ನೀಡಿತು. –ಮೇಘವಿ ಮಂಜುನಾಥ್ ಕ್ವಿಜ್ ಮಾಸ್ಟರ್
ಬಾಲಕನ ಚುರುಕುತನ
ರಸಪ್ರಶ್ನೆ ಸ್ಪರ್ಧೆಯಲ್ಲಿ ತಂಡಗಳು ಉತ್ತರ ನೀಡಲು ಆಗದೇ ಇದ್ದಾಗ ವೇದಿಕೆ ಮುಂಭಾಗದಲ್ಲಿ ಸಭಿಕರಾಗಿ ಕುಳಿತಿದ್ದ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಯಿತು. ಇದರಲ್ಲಿ ಅತೀ ಹೆಚ್ಚು ಮೂರು ಉತ್ತರ ನೀಡಿ ಶಿಶುಗೃಹ ಶಾಲೆಯ ಆರವ್ ಬಹುಮಾನ ಪಡೆದುಕೊಂಡು ಗಮನ ಸೆಳೆದಿದ್ದು ವಿಶೇಷವಾಗಿತ್ತು.
ಕಳೆದುಕೊಂಡವನಿಗೆ ‘ಮೊಬೈಲ್’ ಬಹುಮಾನ
ರಸಪ್ರಶ್ನೆ ಸ್ಪರ್ಧೆಗೆಂದು ಉಡುಪಿಯ ಬ್ರಹ್ಮಾವರದಿಂದ ಬೆಂಗಳೂರಿಗೆ ಬರುವಾಗ ಬಸ್‌ನಲ್ಲಿಯೇ ಮೊಬೈಲ್ ಕಳೆದುಕೊಂಡಿದ್ದ ಸೃಜನ್‌ಗೆ ಬಹುಮಾನವಾಗಿ ಮೊಬೈಲ್ ಸಿಕ್ಕಿದ್ದು ಖುಷಿ ನೀಡಿತ್ತು. ಹುಬ್ಬಳ್ಳಿ ವಲಯಕ್ಕೆ ದ್ವಿತೀಯ ಸ್ಥಾನ ಲಭಿಸಿದ್ದರಿಂದ ಇಬ್ಬರಿಗೂ ಮೊಬೈಲ್ ನೀಡಲಾಯಿತು. ಫಲಿತಾಂಶ ಪ್ರಕಟಿಸಿ ಕೈಗೆ ಮೊಬೈಲ್ ಇದ್ದ ಉಡುಗೊರೆ ನೀಡಿದಾಗ ಸೃಜನ್ ಖುಷಿಗೆ ಪಾರವೇ ಇರಲಿಲ್ಲ.
ವಿಭಾಗ ಮಟ್ಟಕ್ಕಿಂತ ರಾಜ್ಯಮಟ್ಟದಲ್ಲಿ ‘ಪ್ರಜಾವಾಣಿ’ ರಸಪ್ರಶ್ನೆ ಕಠಿಣ ಎನ್ನಿಸಿತು. ಟ್ವಿಸ್ಟ್ ಎನ್ನಿಸುವ ಪ್ರಶ್ನೆಗಳು ನಮ್ಮನ್ನು ಯೋಚಿಸುವಂತೆ ಮಾಡಿದವು. ರಸಪ್ರಶ್ನೆ ಹೇಗೆ ಎದುರಿಸಬೇಕು ಎನ್ನುವ ಅಂಶ ತಿಳಿದುಕೊಂಡೆವು. ಮೊದಲನೇ ಸ್ಥಾನ ಪಡೆದಿದ್ದಕ್ಕೆ ಖುಷಿಯಾಗಿದೆ– ತ್ರಿವಿಕ್ರಮ ಕೇಶವನ್ ವಿಷ್ಣು ಎಸ್.ಗಣೇಶ್ ಶಿಶುಗೃಹ ಸೀನಿಯರ್ ಸ್ಕೂಲ್ ಬೆಂಗಳೂರು
ಮೇಘವಿ ಮಂಜುನಾಥ್ ಅವರು ನಡೆಸಿಕೊಟ್ಟ ರಸಪ್ರಶ್ನೆ ಶೈಲಿ ನೀಡುತ್ತಿದ್ದ ವಿವರಣೆ ಉತ್ಸಾಹ ತುಂಬುತ್ತಿದ್ದ ಪರಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯ ಮಾಹಿತಿ ಒತ್ತಡ ಎನ್ನಿಸಲಿಲ್ಲ. ಜ್ಞಾನದ ಹರಿವು ವಿಸ್ತರಿಸಿಕೊಳ್ಳುವ ಅವಕಾಶವನ್ನು ‘ಪ್ರಜಾವಾಣಿ’ ಕಲ್ಪಿಸಿತು– ತಕ್ಷಕ್ ಶೆಟ್ಟಿ ಸೃಜನ್ ಎನ್.ವೈ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರ ಉಡುಪಿ ಜಿಲ್ಲೆ
ಹಿಂದೆ ರಸಪ್ರಶ್ನೆ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರೂ ರಾಜ್ಯ ಮಟ್ಟದ ಹಂತದವರೆಗೂ ಹೋಗಿರಲಿಲ್ಲ. ಇದು ‘ಪ್ರಜಾವಾಣಿ’ ರಸಪ್ರಶ್ನೆ ನಡೆಸಿದ ರೀತಿ ಚಿಂತನೆಯ ಕ್ರಮವನ್ನು ಬದಲಿಸಿದೆ. ನಮ್ಮ ಪ್ರಯತ್ನಕ್ಕೆ ಮೂರನೇ ಬಹುಮಾನ ಲಭಿಸಿದ್ದು ಖುಷಿ ತಂದಿದೆ–ತೇಜಲ್ ಅಮಾರಿ ಸ್ತುತಿ ರಾಠಿ ಬಸವೇಶ್ವರ ಅಂತರರಾಷ್ಟ್ರೀಯ ಪಬ್ಲಿಕ್ ಶಾಲೆ ಬಾಗಲಕೋಟೆ
ಐಎಲ್ಯು
ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಪ್ರಜಾವಾಣಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು
ತವಕ... ಬೆಂಗಳೂರಿನಲ್ಲಿ ನಡೆದ ಪ್ರಜಾವಾಣಿ ರಸಪ್ರಶ್ನೆ ಸ್ಪರ್ಧೆಯ ಫೈನಲ್ಸ್‌ನಲ್ಲಿ ಉತ್ತರಿಸಲು ಉತ್ಸುಕತೆ ತೋರಿದ ವಿದ್ಯಾರ್ಥಿಗಳು
ಪ್ರಜಾವಾಣಿ ಮುದ್ರಣಾಲಯಕ್ಕೆ ಭೇಟಿ ನೀಡಿದ ವಿದ್ಯಾರ್ಥಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.