ADVERTISEMENT

ಬೆಂಗಳೂರು ಜನದನಿ | ಕುಂದು ಕೊರತೆ: ರಸ್ತೆ ಅತಿಕ್ರಮಣ ತೆರವುಗೊಳಿಸಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2022, 22:45 IST
Last Updated 18 ಡಿಸೆಂಬರ್ 2022, 22:45 IST
   

‘ರಸ್ತೆ ಅತಿಕ್ರಮಣ ತೆರವುಗೊಳಿಸಿ’

ಹಂಪಿನಗರ ಕಲ್ಯಾಣ್ ಹೌಸಿಂಗ್ ಸೊಸೈಟಿಯ ಸಾರ್ವಜನಿಕ ರಸ್ತೆ ತುಂಬಾ ಕಿರಿದಾಗಿದೆ. ಸ್ಥಳೀಯ ನಿವಾಸಿಯೊಬ್ಬರು ಮನೆಯ ಕಟ್ಟಡದ ನೆಲಮಹಡಿಯಿಂದ ಕಾರುಗಳನ್ನು ಹೊರ ತೆಗೆಯಲು 2 ರಿಂದ 3 ಅಡಿಗಳಷ್ಟು ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇದು ಮುಖ್ಯರಸ್ತೆಯಾಗಿದ್ದು, ನೂರಾರು ವಾಹನಗಳು ಸಂಚಾರಿಸುವುದರಿಂದ ಪಾದಚಾರಿಗಳು ಮತ್ತು ವಾಹನ ಸಂಚಾರಕ್ಕೆ ಅನನುಕೂಲವಾಗಿದೆ. ಅತಿಕ್ರಮಿಸಿರುವ ರಸ್ತೆಯನ್ನು ಕೂಡಲೇ ತೆರವುಗೊಳಿಸಲುಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು.

ತಿ. ನಿರಂಜನ,ಸ್ಥಳೀಯ ನಿವಾಸಿ

****

‘ರಸ್ತೆ ಉಬ್ಬು ತೆರವುಗೊಳಿಸಿ’

ADVERTISEMENT

ಬೇಗೂರು ನಾಗನಾಥೇಶ್ವರ ದೇವಸ್ಥಾನದ ಹತ್ತಿರದ ಮದರ್‌ ತೆರೇಸಾ ಅಥವಾ ಶಾಸ್ತ್ರಿ ಬೀದಿಯಿಂದ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ 2–3 ಅಡಿ ಎತ್ತರದ ಉಬ್ಬು ಇದ್ದು, ವಾಹನಗಳು ಹತ್ತಿ ಇಳಿಯಲು ತೊಂದರೆಯಾಗುತ್ತಿದೆ. ವಾಹನ ಸವಾರರು ಬಿದ್ದ ಹಲವು ನಿದರ್ಶನಗಳಿವೆ. ಈ ರಸ್ತೆಯ ಪಕ್ಕದಲ್ಲಿರುವ ಮೋರಿಯೂ ಒಂದು ವರ್ಷದಿಂದ ತೆರೆದ ಸ್ಥಿತಿಯಲ್ಲಿದೆ. ಕೂಡಲೇ ಈ ಮೋರಿ ಮುಚ್ಚಿ, ರಸ್ತೆಯ ಉಬ್ಬು ತೆರವುಗೊಳಿಸಬೇಕು.

ನಾಗರಾಜ ಎ.,ಬೇಗೂರು ನಿವಾಸಿ

****
ರಸ್ತೆ ದುರಸ್ತಿಗೊಳಿಸಿ

ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಘವೇಂದ್ರ ಬಡಾವಣೆಯ ಪೈಪ್‌ಲೈನ್ ರಸ್ತೆ ಹಾಳಾಗಿದೆ. ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಇಲ್ಲಿನ ದೂಳು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡುತ್ತಿದೆ. ಈ ಭಾಗದಲ್ಲಿ ಶಾಲೆಗಳಿವೆ. ಗುಂಡಿಗಳಿಂದಾಗಿ ಸಂಚಾರ ದಟ್ಟಣೆ ಆಗುತ್ತಿದೆ. ಸಂಚಾರಕ್ಕೆ ಅನನುಕೂಲವಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳಿಗೆ, ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು ಪ್ರಯೋಜನವಾಗಿಲ್ಲ.

ಪ್ರಭು,ಸ್ಥಳೀಯ ನಿವಾಸಿ

****
‘ಹೆಚ್ಚಿನ ಸಾರಿಗೆ ವ್ಯವಸ್ಥೆ ಕಲ್ಪಿಸಿ’

ದೊಡ್ಡಕಲ್ಲಸಂದ್ರ ಎಂಕೆಎಸ್ ಬಡಾವಣೆ ಮತ್ತು ನಾರಾಯಣ ನಗರಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಸದ್ಯ ಬಿಸಿಎಂಸಿ ಬಡಾವಣೆಗೆ ಬರುವ ಬಸ್ಸುಗಳು ನಿತ್ಯ ಕೆಲವೇ ಟ್ರಿಪ್‌ಗಳಲ್ಲಿ ಸಂಚರಿಸುತ್ತಿವೆ. ಆದ್ದರಿಂದ ಅಂಜನಾಪುರದಿಂದ ಸಂಚರಿಸುವ 215-ಕೆ ಮಾರ್ಗ ಸಂಖ್ಯೆಯ ಬಸ್‌ ಅನ್ನು ಆವಲಹಳ್ಳಿ ಚೌಕ, ಅಂಜನಾಪುರ ಡಬಲ್ ರಸ್ತೆ, ಎಂಕೆಎಸ್‌ ಬಡಾವಣೆ, ದೊಡ್ಡಕಲ್ಲಸಂದ್ರ ಮಾರ್ಗವಾಗಿ ಸಂಚರಿಸಿದರೆ ಈ ಭಾಗದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಜತೆಗೆ ಇಲ್ಲಿರುವ ಬಸ್‌ ನಿಲ್ದಾಣಗಳಿಗೆ ಫಲಕಗಳನ್ನು ಅಳವಡಿಸಬೇಕು. ‌

ಶ್ರೀನಿವಾಸ್,ಸ್ಥಳೀಯ ನಿವಾಸಿ

****

‘ರಸ್ತೆ ಗುಂಡಿ ಮುಚ್ಚಿ’

ಯಶವಂತಪುರದ ದೇವರಾಜ್ ಅರಸು ಟ್ರಕ್‌ ಟರ್ಮಿನಲ್‌ ಮತ್ತು ಸುತ್ತಮುತ್ತಲಿನ ರಸ್ತೆಗಳು ಗುಂಡಿಗಳಿಂದ ಕೂಡಿವೆ. ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದೂಳು ಆರೋಗ್ಯವನ್ನು ಹಾಳು ಮಾಡುತ್ತಿದ್ದು, ಸಾರ್ವಜನಿಕರ ಓಡಾಟಕ್ಕೂ ಸಮಸ್ಯೆಯಾಗಿದೆ. ಮಳೆ ಬಂದರೆ ರಸ್ತೆ ಕೆಸರು ಗದ್ದೆಯಾಗಿ ಮಾರ್ಪಡುತ್ತದೆ. ರಸ್ತೆಯಲ್ಲಿ ಹಲವು ಅಪಘಾತಗಳಿಗೂ ಕಾರಣವಾಗಿದೆ. ಕೂಡಲೇ ರಸ್ತೆ ದುರಸ್ತಿಗೊಳಿಸಿ.

ರವಿಂದ್ರ,ಸ್ಥಳೀಯ ನಿವಾಸಿ

****

‘ಪಾದಚಾರಿ ಮಾರ್ಗ ನಿರ್ಮಿಸಿ’

ಬಿಇಎಲ್ ವೃತ್ತ ಮತ್ತು ವಿದ್ಯಾರಣ್ಯಪುರ ನಡುವಿನ ದೊಡ್ಡಬೊಮ್ಮಸಂದ್ರದ ನಂಜಪ್ಪ ವೃತ್ತ ನಡುವಿನ ರಸ್ತೆ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ಈ ರಸ್ತೆಯ ಇಕ್ಕೆಲಗಳಲ್ಲಿ ಪಾದಚಾರಿ ಮಾರ್ಗವಿಲ್ಲದೇ ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆಯಾಗಿದೆ. ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಈ ಭಾಗದಲ್ಲಿ ಪಾದಚಾರಿ ಮಾರ್ಗವನ್ನು ನಿರ್ಮಿಸಬೇಕು.

ಬಾಗೂರು.ಆರ್. ನಾಗರಾಜಪ್ಪ,ದೊಡ್ಡಬೊಮ್ಮಸಂದ್ರದ ನಿವಾಸಿ

****

‘ಸಿ.ಸಿ.ಟಿ.ವಿ ಕ್ಯಾಮೆರಾ ದುರಸ್ತಿಗೊಳಿಸಿ’

ಟಿ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚೊಕ್ಕಸಂದ್ರ ವಾರ್ಡ್‌ ನಂ.39ರ ವಿನಾಯಕನಗರ ಮತ್ತು ವಿಕಾಸನಗರದ ಮುಖ್ಯರಸ್ತೆಯಲ್ಲಿ ಅಳವಡಿಸಿದ್ದ ಸಿ.ಸಿ.ಟಿ.ವಿ ಕ್ಯಾಮೆರಾ ಕೆಟ್ಟು ಮೂರು ವರ್ಷ ಗಳಾದರೂ ದುರಸ್ತಿಯಾಗಿಲ್ಲ. ಈ ಭಾಗದಲ್ಲಿ ಕಳ್ಳರ ಉಪಟಳ ಹೆಚ್ಚಾಗಿದ್ದು, ಮಧ್ಯರಾತ್ರಿ ಓಡಾಡುವ ಸಾರ್ವಜನಿಕರ ಮೇಲೆ ದಾಳಿ ಮಾಡಿ ಚಾಕು ಇರಿದು, ಸುಲಿಗೆ ಮಾಡಿರುವ ಘಟನೆಗಳು ನಡೆದಿವೆ. ಈ ಕುರಿತು ಕ್ಷೇತ್ರದ ಶಾಸಕ ಆರ್. ಮಂಜುನಾಥ್ ಮತ್ತು ಬಿಬಿಎಂಪಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ. ಕ್ಯಾಮೆರಾದ ಕೆಲವು ಭಾಗಗಳು ಕೆಳಗೆ ಬಿದ್ದಿವೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ದುರಸ್ತಿಗೆ ಕ್ರಮವಹಿಸಲಿ.

ಆರ್.ಗೋವಿಂದರಾವ್ ಸೂರ್ಯವಂಶಿ
ಸ್ಥಳೀಯ ನಿವಾಸಿ

****

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್‌ ಸಂಖ್ಯೆ 109ರ ಕಾರ್ಪೊರೇಷನ್‌ ಕಂದಾಯ ಕಚೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಬಿಬಿಎಂಪಿ ಸಿಬ್ಬಂದಿ ದುರಸ್ತಿಗೊಳಿಸಿದರು. ‘ಪ್ರಜಾವಾಣಿ’ ಕುಂದು ಕೊರತೆ ವಿಭಾಗದಲ್ಲಿ ನವೆಂಬರ್ 26ರಂದು ‘ರಸ್ತೆ ದುರಸ್ತಿಗೊಳಿಸಿ’ ಎಂಬ ಶೀರ್ಷಿಕೆ ಅಡಿಯಲ್ಲಿ ಅಹವಾಲು ಪ್ರಕಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.