ADVERTISEMENT

ಪ್ರಜ್ವಲ್‌ ಪ್ರಕರಣ: ಕಲ್ಲು ಬಂಡೆಯಂತೆ ನಿಂತ ಸಂತ್ರಸ್ತೆ; ತನಿಖಾ ತಂಡ

ಪೆನ್‌ಡ್ರೈವ್‌ ಹಂಚಿಕೆ: ಶೀಘ್ರದಲ್ಲೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 16:10 IST
Last Updated 2 ಆಗಸ್ಟ್ 2025, 16:10 IST
ಬೆಂಗಳೂರಿನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಶೋಭಾ, ಬಿ.ಕೆ. ಸಿಂಗ್‌, ಸುಮನ್‌ ಡಿ. ಪನ್ನೇಕರ್, ಅಶೋಕ ನಾಯಕ್ ಉಪಸ್ಥಿತರಿದ್ದರು.
ಬೆಂಗಳೂರಿನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಶೋಭಾ, ಬಿ.ಕೆ. ಸಿಂಗ್‌, ಸುಮನ್‌ ಡಿ. ಪನ್ನೇಕರ್, ಅಶೋಕ ನಾಯಕ್ ಉಪಸ್ಥಿತರಿದ್ದರು.   

ಬೆಂಗಳೂರು: ‘ಅತ್ಯಾಚಾರಕ್ಕೆ ಸಂಬಂಧಿಸಿದ ಒಂದು ಪ್ರಕರಣದಲ್ಲಿ ಅಪರಾಧಿ ಪ್ರಜ್ವಲ್‌ ರೇವಣ್ಣನಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ತನಿಖಾ ಹಂತದಲ್ಲಿ ಸಂತ್ರಸ್ತೆ ಕಲ್ಲು ಬಂಡೆಯಂತೆ ನಿಂತು ಸಹಕಾರ ನೀಡಿದ್ದರು’ ಎಂದು ವಿಶೇಷ ತನಿಖಾ ದಳದ ಮುಖ್ಯಸ್ಥ, ಎಡಿಜಿಪಿ ಬಿ.ಕೆ.ಸಿಂಗ್ ಹೇಳಿದರು.‌

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅತ್ಯಾಚಾರ ಹಾಗೂ ಪೆನ್‌ಡ್ರೈವ್‌ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಐದು ಪ್ರಕರಣಗಳ ತನಿಖೆ ನಡೆಸುವಂತೆ ರಾಜ್ಯ ಸರ್ಕಾರವು ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ಆದೇಶಿಸಿತ್ತು. ಒಂದು ಪ್ರಕರಣದಲ್ಲಿ ಸಂತ್ರಸ್ತೆ ಎಲ್ಲಿಯೂ ತನ್ನ ಹೇಳಿಕೆಯನ್ನು ಬದಲಿಸಲಿಲ್ಲ. ಸಂತ್ರಸ್ತೆಯನ್ನು ಮೂರು ದಿನ ವಿಚಾರಣೆ ನಡೆಸಲಾಯಿತು. ಅಪರಾಧಿ ಪ್ರಜ್ವಲ್‌ ರೇವಣ್ಣ ಪರ ವಕೀಲರು ಎರಡು ದಿನ ಎಂಟು ತಾಸು ಪ್ರಶ್ನೆ ಕೇಳಿದರು. ಸಂತ್ರಸ್ತೆ ಆತಂಕಕ್ಕೆ ಒಳಗಾಗದೇ ಧೈರ್ಯದಿಂದ ನಡೆದ ಘಟನೆಯನ್ನು ನ್ಯಾಯಾಧೀಶರ ಎದುರು ವಿವರಿಸಿದ್ದರು’ ಎಂದು ಹೇಳಿದರು.

‘ಸಂತ್ರಸ್ತೆಯು ಆರ್ಥಿಕ ಹಾಗೂ ಸಾಮಾಜಿಕವಾಗಿ ಬಲಾಢ್ಯರಲ್ಲ. ಅಪರಾಧಿ ಆರ್ಥಿಕವಾಗಿ ಬಲಾಢ್ಯನಿದ್ದ. ರಾಜಕೀಯ ಪ್ರಭಾವ ಇತ್ತು. ಈ ವ್ಯತ್ಯಾಸವಿದ್ದರೂ ನ್ಯಾಯ ಬೇಕೇಬೇಕೆಂದು ಒಂದು ವರ್ಷದಿಂದ ಪ್ರಾಸಿಕ್ಯೂಷನ್‌ ಜತೆಗೆ ಆಕೆ ಧೈರ್ಯದಿಂದ ನಿಂತಿದ್ದರು. ತೀರ್ಪು ವಿಳಂಬವಾಗಿ ಬರುವಂತೆ ಮಾಡಲು ಕೆಲವರು ಷಡ್ಯಂತ್ರ ಮಾಡಿದ್ದರು’ ಎಂದು ಹೇಳಿದರು.

ADVERTISEMENT

‘ಸಂತ್ರಸ್ತೆಗೆ ನ್ಯಾಯ ಕೊಡಿಸಿದ ತೃಪ್ತಿ ತನಿಖಾ ತಂಡಕ್ಕಿದೆ. ಪ್ರಕರಣದಲ್ಲಿ ಮಹಿಳಾ ಅಧಿಕಾರಿಗಳಾದ ಸೀಮಾ ಲಾಟ್ಕರ್‌, ಸುಮನ್‌ ಡಿ. ಪನ್ನೇಕರ್ ಹಾಗೂ ಬೆಂಗಳೂರು ಪೂರ್ವ ವಿಭಾಗದ ಮಹಿಳಾ ಠಾಣೆಯ ಇನ್‌ಸ್ಟೆಕ್ಟರ್‌ ಎನ್‌.ಶೋಭಾ ಅವರು ಸಾಕಷ್ಟು ಪರಿಶ್ರಮದೊಂದಿಗೆ ತನಿಖೆ ನಡೆಸಿದ್ದರು’ ಎಂದರು.  

‘ಸಿಐಡಿ ಸೈಬರ್‌ ಅಪರಾಧ ಠಾಣೆಯಲ್ಲಿ ಮೂರು, ಹಾಸನ ಜಿಲ್ಲೆಯ ಹೊಳೆನರಸೀಪುರ ಹಾಗೂ ಮೈಸೂರಿನ ಕೆ.ಆರ್.ನಗರ ಠಾಣೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದ್ದವು. ಒಂದು ಪ್ರಕರಣದಲ್ಲಿ ತೀರ್ಪು ಬಂದಿದೆ. ಉಳಿದ ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ’ ಎಂದು ಹೇಳಿದರು.

‘ಜನಪ್ರತಿನಿಧಿಗಳ ವಿರುದ್ಧ ದಾಖಲಾಗುವ ಪ್ರಕರಣಗಳನ್ನು ತ್ವರಿತವಾಗಿ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶವಿದೆ. ತ್ವರಿತವಾಗಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಯಿತು’ ಎಂದರು.

ತನಿಖಾ ತಂಡದಲ್ಲಿದ್ದ ಐಪಿಎಸ್‌ ಅಧಿಕಾರಿ ಸುಮನ್‌ ಡಿ. ಪನ್ನೇಕರ್ ಮಾತನಾಡಿ, ‘ಒತ್ತಡ ಬಂದಿದ್ದರೆ ಕೆಳಹಂತದವರೆಗೂ ಬರಬೇಕಿತ್ತು. ಅಂತಹ ಸಂದರ್ಭ ಬಂದಿರಲಿಲ್ಲ. ಸಾಕ್ಷ್ಯಾಧಾರ ಹಾಗೂ ಹೇಳಿಕೆಗಳನ್ನು ಆಧರಿಸಿ ತನಿಖೆ ನಡೆಸಿದ್ದೆವು’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅಶೋಕ್‌ ಎನ್‌. ನಾಯಕ್‌ ಹಾಗೂ ತನಿಖಾ ತಂಡದ ಅಧಿಕಾರಿಗಳು ಹಾಜರಿದ್ದರು.

ಸಂತ್ರಸ್ತೆಯ ಹೇಳಿಕೆ ದೃಢೀಕರಿಸಲು ಜೈವಿಕ ತಾಂತ್ರಿಕ ಡಿಜಿಟಲ್‌ ಮೊಬೈಲ್‌ ಹಾಗೂ ವೈಜ್ಞಾನಿಕ ಪುರಾವೆಗಳನ್ನು ಸಂಗ್ರಹಿಸುವ ಮೂಲಕ ತನಿಖೆ ನಡೆಸಿತ್ತು
ಬಿ.ಕೆ.ಸಿಂಗ್‌ ಮುಖ್ಯಸ್ಥ ಎಸ್‌ಐಟಿ
ವೈಜ್ಞಾನಿಕ ವಿಧಾನ ಅನುಸರಿಸಿ ಪ್ರಕರಣದ ತನಿಖೆ ನಡೆಸಿದ್ದರಿಂದಲೇ ಸಂತ್ರಸ್ತೆಗೆ ನ್ಯಾಯ ಕೊಡಿಸಲು ಕೊಡಲು ಸಾಧ್ಯವಾಯಿತು
ಸುಮನ್‌ ಡಿ. ಪನ್ನೇಕರ್‌ ಎಸ್ಐಟಿ ಸದಸ್ಯೆ

100ಕ್ಕೂ ಹೆಚ್ಚು ಪೆನ್‌ಡ್ರೈವ್‌ ಖರೀದಿ 

‘ಪೆನ್‌ಡ್ರೈವ್‌ ಹಂಚಿಕೆ ಪ್ರಕರಣದ ತನಿಖೆ ಬಹುತೇಕ ಮುಕ್ತಾಯವಾಗಿದೆ. 15 ದಿನಗಳ ಒಳಗಾಗಿ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು’ ಎಂದು ಬಿ.ಕೆ. ಸಿಂಗ್ ಹೇಳಿದುರ. ‘ಪೆನ್‌ಡ್ರೈವ್‌ ಹಂಚಿಕೆ ಪ್ರಕರಣದ ತನಿಖೆಯನ್ನೂ ಎಸ್‌ಐಟಿಯೇ ನಡೆಸುತ್ತಿದೆ. ಆ ಪ್ರಕರಣದಲ್ಲೂ ಶೀಘ್ರದಲ್ಲೇ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು. ಸಂತ್ರಸ್ತೆಯರ ವಿಡಿಯೊ ಹಂಚಿಕೆ ಮಾಡಲು 100ಕ್ಕೂ ಹೆಚ್ಚು ಪೆನ್‌ಡ್ರೈವ್‌ ಖರೀದಿ ಮಾಡಲಾಗಿದೆ. ಹೊಸ ಲ್ಯಾಪ್‌ಟಾಪ್‌ ಸಹ ಖರೀದಿಸಲಾಗಿದೆ. ಎಲ್ಲದಕ್ಕೂ ಸಾಕ್ಷ್ಯಾಧಾರಗಳು ಸಿಕ್ಕಿವೆ’ ಎಂದು ಬಿ.ಕೆ.ಸಿಂಗ್ ಹೇಳಿದರು. 

ಇನ್ನೂ ದೂರು ಕೊಡಲು ಅವಕಾಶ

‘ಪ್ರಜ್ವಲ್‌ ರೇವಣ್ಣನಿಂದ ಇನ್ನೂ ಹಲವರು ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎನ್ನುವ ಮಾಹಿತಿ ತನಿಖಾ ತಂಡಕ್ಕೆ ಸಿಕ್ಕಿದೆ. ಅಂತಹವರು ದೂರು ನೀಡಿದರೆ ತನಿಖೆ ನಡೆಸುತ್ತೇವೆ’ ಎಂದು ಎಸ್‌ಐಟಿ ಅಧಿಕಾರಿಗಳು ಕೋರಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.