
ಸಮಾರಂಭದಲ್ಲಿ ಜೋಗಿ, ಎಂ.ಎಸ್. ಆಶಾದೇವಿ ಮತ್ತು ಸುಂದರ್ ಸಾರುಕೈ ಭಾಗವಹಿಸಿದ್ದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಲೇಖಕಿ ಪ್ರತಿಭಾ ನಂದಕುಮಾರ್ ಅವರು ತಮ್ಮ ಕಾವ್ಯದಲ್ಲಿ ವ್ಯವಸ್ಥೆಯ ಕುರಿತ ವಾಸ್ತವವನ್ನು ದರ್ಶನ ಮಾಡಿಸಿದ್ದಾರೆ. ಇದರಿಂದ ಹಲವರ ಕೆಂಗಣ್ಣಿಗೂ ಗುರಿಯಾಗಿರುವ ಅವರಿಗೆ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸೂಕ್ತ ಸ್ಥಾನಮಾನ ದೊರೆತಿಲ್ಲ’ ಎಂದು ಸಾಹಿತ್ಯ ಕ್ಷೇತ್ರದ ಪ್ರಮುಖರು ಅಭಿಪ್ರಾಯಪಟ್ಟರು.
ಅಂಕಿತ ಪುಸ್ತಕ, ಬಹುರೂಪಿ, ವಸಂತ ಪ್ರಕಾಶನ, ಚಾರುಮತಿ ಪ್ರಕಾಶನ, ಎಂ.ಎಂ. ಪಬ್ಲಿಕೇಷನ್ ಹಾಗೂ ಮಿಂಚುಳ್ಳಿ ಪ್ರಕಾಶನ ಜಂಟಿಯಾಗಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಪ್ರತಿಭಾ ನಂದಕುಮಾರ್’ ಕಾವ್ಯ ಕುರಿತ ಸಮಾರಂಭದಲ್ಲಿ, ಅವರ ‘ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ’, ‘ಶಾಪಗ್ರಸ್ತ ಕವಿ’, ‘ಪ್ರತಿಭಾ ಉವಾಚ’, ‘ಕಾವ್ಯದಾಹ ಜೀವನ ಮೋಹ’, ‘ಇಳಿದು ಬರುವುದಿಲ್ಲ ತಾಯಿ’ ಹಾಗೂ ‘ಒಂದು ಹೆಣ್ಣು ಒಂಟೆಯ ಹತ್ಯೆ’ ಪುಸ್ತಕಗಳು ಜನಾರ್ಪಣೆಯಾದವು.
ತತ್ವಜ್ಞಾನಿ ಸುಂದರ್ ಸಾರುಕೈ, ‘ಪ್ರತಿಭಾ ಅವರ ಕಾವ್ಯವನ್ನು ತತ್ವಜ್ಞಾನದ ದೃಷ್ಟಿಯಿಂದ ನೋಡಬೇಕು. ವಿಶಿಷ್ಟ ಶೈಲಿಯ ಬರವಣಿಗೆ ರೂಢಿಸಿಕೊಂಡಿರುವ ಅವರ ಕಾವ್ಯದಲ್ಲಿ ತತ್ವ, ಅನುಭವ ಅಡಗಿದೆ. ತತ್ವಜ್ಞಾನದಲ್ಲಿ ದೇಹ ಮತ್ತು ಭಾಷೆ ಮುಖ್ಯ’ ಎಂದು ಹೇಳಿದರು.
ವಿಮರ್ಶಕಿ ಎಂ.ಎಸ್. ಆಶಾದೇವಿ, ‘ಪ್ರತಿಭಾ ಅವರು ಅತ್ಯುತ್ತಮ ಕಾವ್ಯ ರಚಿಸಿದರೂ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಎಲ್ಲವೂ ಸಿಗಲಿಲ್ಲ. ಯುಗ ಪ್ರವರ್ತಕ ಕವಿಗಳ ಸಾಲಿನಲ್ಲಿ ಅವರನ್ನು ಏಕೆ ನಿಲ್ಲಿಸಲಾಗುತ್ತಿಲ್ಲ ಎನ್ನುವುದು ಪ್ರಶ್ನೆಯಾಗಿದೆ. ಅವರ ಕಾವ್ಯದ ಬಗ್ಗೆ ಚರ್ಚೆಯೂ ಅಷ್ಟಾಗಿ ನಡೆದಿಲ್ಲ. ಅವರ ಕಾವ್ಯ ಸರಿಯಾದ ಪ್ರಶ್ನೆ ಕೇಳಿ, ಸರಿಯಾದ ಉತ್ತರ ಧ್ವನಿಸುತ್ತಾ ಹೋಗುತ್ತದೆ’ ಎಂದರು.
ಪತ್ರಕರ್ತ ಗಿರೀಶ್ ರಾವ್ ಹತ್ವಾರ್ (ಜೋಗಿ), ‘ಕವಿಗಳು ಹಳಬರಾದಂತೆ ಅವರ ಕಾವ್ಯ ಮಾಸುತ್ತಾ ಹೋಗುತ್ತದೆ. ಆದರೆ, ಪ್ರತಿಭಾ ಅವರ ಮೊದಲ ಪದ್ಯ ಈಗಲೂ ಸಕಾಲಿಕ. ಅವರ ರೀತಿ ಅವರ ಕಾವ್ಯವೂ ಪ್ರತಿಕ್ರಿಯಿಸುತ್ತದೆ. ಅವರ ಪದ್ಯ ನಿರಾಸೆ ಮೂಡಿಸುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.
ಪ್ರಕಾಶಕರಾದ ಪ್ರಕಾಶ್ ಕಂಬತ್ತಳ್ಳಿ, ಜಿ.ಎನ್. ಮೋಹನ್, ಮುರಳಿ ಶ್ರೀನಿವಾಸನ್, ವಿದ್ಯಾರಣ್ಯ ಬಿ.ಎಸ್., ಎಂ.ಸಿ.ನರೇಂದ್ರ ಹಾಗೂ ಸೂರ್ಯ ಕೀರ್ತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.