ADVERTISEMENT

ನಿರಾಶ್ರಿತರ ಕೇಂದ್ರವಾದ ಆರೋಗ್ಯ ಕೇಂದ್ರ: ಎಎಪಿ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 16:34 IST
Last Updated 19 ಜನವರಿ 2022, 16:34 IST
   

ಬೆಂಗಳೂರು: ‘ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರು ಯಲಹಂಕ ವ್ಯಾಪ್ತಿಯ ದೊಡ್ಡಬೆಟ್ಟಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನಿರಾಶ್ರಿತರ ಕೇಂದ್ರವನ್ನಾಗಿ ಪರಿವರ್ತಿಸುತ್ತಿದ್ದಾರೆ. ರಾಜಕೀಯ ದುರುದ್ದೇಶದಿಂದ ಅವರು ಈ ರೀತಿ ನಡೆದುಕೊಳ್ಳುತ್ತಿದ್ದಾರೆ’ ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ಬೆಂಗಳೂರು ಘಟಕದ ಉಪಾಧ್ಯಕ್ಷಬಿ.ಟಿ.ನಾಗಣ್ಣ ದೂರಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ದೊಡ್ಡಬೆಟ್ಟಹಳ್ಳಿ ಆರೋಗ್ಯ ಕೇಂದ್ರವು ಮೂರು ವರ್ಷಗಳಿಂದ ಮುಚ್ಚಲ್ಪಟ್ಟಿತ್ತು. ಆರೋಗ್ಯ ಕೇಂದ್ರವನ್ನು ಪುನರಾರಂಭಿಸಲುಆಮ್‌ ಆದ್ಮಿ ಪಾರ್ಟಿಯು ಪಾಲಿಕೆ ಅಧಿಕಾರಿಗಳಿಗೆ ಒತ್ತಾಯಿಸಿತ್ತು. ಪಾಳು ಬಿದ್ದಿದ್ದ ಕಟ್ಟಡವನ್ನು ಸ್ವಚ್ಛಗೊಳಿಸಿ ಕೊಡಲಾಗಿತ್ತು. ಆದರೆ, ಈಗ ಆರೋಗ್ಯ ಕೇಂದ್ರವನ್ನು ನಿರಾಶ್ರಿತರ ಕೇಂದ್ರವನ್ನಾಗಿ ಪರಿವರ್ತಿಸಲಾಗುತ್ತಿದೆ’ ಎಂದು ದೂರಿದರು.

‘ಶಾಸಕ ಎಸ್‌.ಆರ್‌.ವಿಶ್ವನಾಥ್‌ ಈ ವಿಚಾರವನ್ನು ರಾಜಕೀಯ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಆರೋಗ್ಯ ಕೇಂದ್ರ ಪುನರಾರಂಭಿಸಿದರೆ, ಎಎಪಿಗೆ ಮನ್ನಣೆ ಸಿಗುತ್ತದೆ ಎಂಬ ಕಾರಣಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ. ಅವರ ಕೀಳು ಮಟ್ಟದ ರಾಜಕೀಯದಿಂದ ಇಲ್ಲಿನ ಜನರು ಆರೋಗ್ಯ ಸೌಲಭ್ಯಗಳಿಂದ ವಂಚಿತರಾಗುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಎಎಪಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಸುಹಾಸಿನಿ ಫಣಿರಾಜ್‌, ‘ಸ್ಥಳೀಯ ಶಾಸಕರನ್ನು ಎದುರು ಹಾಕಿಕೊಂಡು ಆರೋಗ್ಯ ಕೇಂದ್ರ ನಡೆಸಲು ಸಾಧ್ಯವಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ₹4 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಆರೋಗ್ಯ ಕೇಂದ್ರದಿಂದ ಜನರಿಗೆ ಯಾವುದೇ ಸೇವೆ ಸಿಗದಂತೆ ಮಾಡುತ್ತಿದ್ದಾರೆ. ಇದನ್ನು ಆರೋಗ್ಯ ಕೇಂದ್ರವಾಗಿಯೇ ಮುಂದುವರಿಸಿ, ನಿರಾಶ್ರಿತರ ಕೇಂದ್ರವನ್ನು ಬೇರೆ ಕಡೆ ತೆರೆಯಬೇಕು’ ಎಂದು ಆಗ್ರಹಿಸಿದರು.

ಎಸ್‌.ಆರ್‌.ವಿಶ್ವನಾಥ್‌ ಪ್ರತಿಕ್ರಿಯಿಸಿ, ‘ನಿರಾಶ್ರಿತರಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಬೇಕು ಎಂದು ಕೋರ್ಟ್‌ ಹೇಳಿತ್ತು. ನಿರಾಶ್ರಿತರು ರಸ್ತೆ ಬದಿಯಲ್ಲಿ ಮಲಗುತ್ತಿದ್ದರು. ಅಪಘಾತದಿಂದ ಕೆಲವು ಮಂದಿ ಮೃತಪಟ್ಟಿದ್ದಾರೆ. ಹೀಗಾಗಿ, ಮಾನವೀಯತೆಯ ನೆಲೆಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.