ADVERTISEMENT

ವಸಿಷ್ಠ ಸೊಸೈಟಿ ವಂಚನೆ ಪ್ರಕರಣ: ಸಿಬಿಐ ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 17:44 IST
Last Updated 7 ಅಕ್ಟೋಬರ್ 2021, 17:44 IST

ಬೆಂಗಳೂರು: ‘ಹನುಮಂತನಗರದ ವಸಿಷ್ಠ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವಂಚನೆ ಪ್ರಕರಣ ಬೆಳಕಿಗೆ ಬಂದು ಆರು ತಿಂಗಳು ಕಳೆದರೂ ಸರಿಯಾಗಿ ತನಿಖೆ ನಡೆದಿಲ್ಲ. ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು’ ಎಂದುಕೆಪಿಸಿಸಿ ವೈದ್ಯಕೀಯ ಘಟಕದ ಪ್ರಧಾನ ಕಾರ್ಯದರ್ಶಿ ಶಂಕರ್ ಗುಹಾ ದ್ವಾರಕನಾಥ್ ಆಗ್ರಹಿಸಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಸೊಸೈಟಿಯಲ್ಲಿ ₹500 ಕೋಟಿಯಷ್ಟು ವಂಚನೆ ನಡೆದಿದೆ. ಇಲ್ಲಿಠೇವಣಿ ಇಟ್ಟಿರುವ ಬಹುತೇಕರು 70 ವರ್ಷ ಮೇಲ್ಪಟ್ಟವರು. ಇವರೆಲ್ಲ ತಮ್ಮ ಹಣ ಕೈಸೇರುವುದೋ ಇಲ್ಲವೋ ಎಂಬ ಆತಂಕದಲ್ಲಿದ್ದಾರೆ. ಕೂಡಲೇ ಸ್ವತಂತ್ರ ಸಂಸ್ಥೆಯಿಂದ ಸೊಸೈಟಿಯ ಆಡಿಟ್ ನಡೆಸಬೇಕು ಹಾಗೂ ಸೊಸೈಟಿಯನ್ನು ಸೂಪರ್‌ಸೀಡ್ ಮಾಡಬೇಕು’ ಎಂದು ಒತ್ತಾಯಿಸಿದರು.

‘ಸೊಸೈಟಿ ಅಧ್ಯಕ್ಷರ ಕುಟುಂಬಕ್ಕೆ ₹100 ಕೋಟಿಗಳಷ್ಟು ಸಾಲ ನೀಡಲಾಗಿದೆ. ಯಾವುದೇ ದಾಖಲೆಗಳನ್ನು ಪಡೆಯದೆ, ಅವರ ಮಗನ ಹೆಸರಿನಲ್ಲೇ ಹೆಚ್ಚಿನ ಸಾಲ ನೀಡಲಾಗಿದೆ. ಬ್ಯಾಂಕ್ ಕಟ್ಟಡದಲ್ಲೇ ಇರುವ ಸಣ್ಣ ಕಚೇರಿಗೆ ₹37 ಕೋಟಿ ಸಾಲ ನೀಡಲಾಗಿದೆ’ ಎಂದು ಆರೋಪಿಸಿದರು.

ADVERTISEMENT

‘ಈ ಹಗರಣದ ತನಿಖೆಯನ್ನು ಸದ್ಯ ಸಿಐಡಿಗೆ ವಹಿಸಲಾಗಿದೆ. ಆದರೆ, ರಾಜಕೀಯ ಒತ್ತಡಗಳಿಂದಾಗಿ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುವ ಸಾಧ್ಯತೆ ಕಡಿಮೆ. ಹಾಗಾಗಿ, ಈ ಪ್ರಕರಣವನ್ನು ಕೂಡಲೇ ಸಿಬಿಐಗೆ ವಹಿಸುವುದು ಸೂಕ್ತ. ಈ ಬಗ್ಗೆ ಸರ್ಕಾರ ಮಧ್ಯಪ್ರವೇಶಿಸಿ, ಗ್ರಾಹಕರಿಗೆ ಹಣ ವಾಪಸ್ ಕೊಡಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.