ADVERTISEMENT

ಕೇಂದ್ರ ಸಚಿವರ ಮೇಲೆ ಒತ್ತಡ

ಮೇಕೆದಾಟು ಯೋಜನೆ; ಕೇಂದ್ರ ದಿಂದ ಒಪ್ಪಿಗೆ ಕೊಡಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2019, 19:36 IST
Last Updated 16 ಡಿಸೆಂಬರ್ 2019, 19:36 IST

ಬೆಂಗಳೂರು: ಬೆಂಗಳೂರು ನಗರದ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ರೂಪಿಸಿರುವ ಮೇಕೆದಾಟು ಅಣೆಕಟ್ಟೆ ನಿರ್ಮಾಣ ಯೋಜನೆಗೆ ಶೀಘ್ರ ಕೇಂದ್ರ ಸರ್ಕಾರದಿಂದ ಒಪ್ಪಿಗೆ ಕೊಡಿಸುವಂತೆಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ.

ನಗರಕ್ಕೆ ಸೋಮವಾರ ಭೇಟಿನೀಡಿದ್ದ ಸಚಿವರ ಜತೆ ಮುಖ್ಯಮಂತ್ರಿ ಚರ್ಚಿಸಿದರು.ಮೇಕೆದಾಟು ಯೋಜನೆ ಪೂರ್ಣಗೊಂಡರೆ ನಗರಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಒದಗಿಸಲು ಅನುಕೂಲವಾಗುತ್ತದೆ. ಯಾವುದೇ ರೀತಿಯಲ್ಲೂ ವಿವಾದ ತಲೆದೋರದಂತೆ ಕಾನೂನು ವ್ಯಾಪ್ತಿಯಲ್ಲೇ ಒಪ್ಪಿಗೆ ಕೊಡಿಸುವಂತೆ ಮನವಿ ಮಾಡಿದರು. ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ.

ಗೆಜೆಟ್ ಪ್ರಕಟಣೆಗೆ ಆಗ್ರಹ:

ADVERTISEMENT

ಮಹದಾಯಿ ಹಾಗೂ ಕೃಷ್ಣಾ ನದಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಮಂಡಳಿ ನೀಡಿರುವ ತೀರ್ಪನ್ನು ಗೆಜೆಟ್‌ನಲ್ಲಿ ಪ್ರಕಟಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಲ್ಲಿ (ಪಿಎಂಕೆಎಸ್‌ವೈ) ರಾಜ್ಯ ಸರ್ಕಾರ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ತುಂಗಾ ಮೇಲ್ದಂಡೆ, ಭೀಮಾ ಏತ ನೀರಾವರಿ, ಕಾರಂಜಾ, ರಾಮೇಶ್ವರ ಏತ ನೀರಾವರಿ, ನಾರಾಯಣಪುರ ಎಡದಂಡೆ ಕಾಲುವೆ ಯೋಜನೆಗಳನ್ನು ಪೂರ್ಣಗೊಳಿಸಬೇಕಿದೆ. ಇದಕ್ಕಾಗಿ₹439 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಹಣ ಬಿಡುಗಡೆಮಾಡುವುದಾಗಿ ಶೆಖಾವತ್ ಭರವಸೆ ನೀಡಿದರು.

ನದಿ ಜೋಡಣೆ:

ಕೃಷ್ಣಾ, ಕಾವೇರಿ, ಗೋದಾವರಿ ಮತ್ತು ಪೆನ್ನಾರ್ ನದಿಗಳ ಜಲಾನಯನ ಪ್ರದೇಶಗಳಲ್ಲಿನ ನದಿಗಳ ಜೋಡಣೆ ಮಾಡಿದರೆ ರಾಜ್ಯಕ್ಕೆ ನೀರಿನ ಲಭ್ಯತೆ ಹೆಚ್ಚಲಿದೆ. ಈ ಕಾರ್ಯಕ್ಕೆ ಶೀಘ್ರ ಚಾಲನೆ ಕೊಡುವಂತೆ ಯಡಿಯೂರಪ್ಪ ಮನವಿ ಮಾಡಿದರು. ‘ಇದು ಪ್ರಧಾನಿ ನರೇಂದ್ರ ಮೋದಿ ಅವರ ಆದ್ಯತೆಯ ವಿಷಯವಾಗಿದ್ದು, ನದಿ ಜೋಡಣೆ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.