ADVERTISEMENT

ಜಾಗತಿಕ ಹೂಡಿಕೆದಾರರ ಸಮಾವೇಶ: ಇಂದು ಪ್ರಧಾನಿ ಮೋದಿಯಿಂದ ವರ್ಚುವಲ್‌ ಉದ್ಘಾಟನೆ

3 ದಿನ ಉದ್ಯಮದ ಹಬ್ಬ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2022, 19:53 IST
Last Updated 1 ನವೆಂಬರ್ 2022, 19:53 IST
   

ಬೆಂಗಳೂರು: ಪ್ರತಿಷ್ಠಿತ ಜಾಗತಿಕ ಹೂಡಿಕೆದಾರರ ಸಮಾವೇಶ ನಗರದ ಅರಮನೆ ಮೈದಾನದಲ್ಲಿ ಬುಧವಾರದಿಂದ (ನ.2 ರಿಂದ 4) ಆರಂಭಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್‌ ಆಗಿ ಇದರ ಉದ್ಘಾಟನೆ ನೆರವೇರಿಸಲಿದ್ದಾರೆ.

ಕೋವಿಡ್‌ ಸಂಕಷ್ಟದಿಂದ ಹೊರ ಬಂದಿರುವುದರಿಂದ ಪೂರ್ಣ ಪ್ರಮಾಣದಲ್ಲಿ ಈ ಸಮಾವೇಶ ನಡೆಯಲಿದ್ದು,ವಿಶ್ವದ ಹಲವು ರಾಷ್ಟ್ರಗಳ ಪ್ರತಿನಿಧಿಗಳು, ಉದ್ಯಮಿಗಳು ಭಾಗವಹಿಸಲಿದ್ದಾರೆ. ಇದರಿಂದಾಗಿ ರಾಜ್ಯಕ್ಕೆ ₹5 ಲಕ್ಷ ಕೋಟಿ ಬಂಡವಾಳ ಹರಿದು ಬರುವ ವಿಶ್ವಾಸವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವ್ಯಕ್ತಪಡಿಸಿದರು.

ದೇಶ– ವಿದೇಶಗಳ ಉದ್ಯಮ ಕ್ಷೇತ್ರಗಳ ದಿಗ್ಗಜರು ಭಾಗವಹಿಸಲಿದ್ದಾರೆ. ಈ ಬಾರಿ ಸಮಾವೇಶಕ್ಕೆ ‘ಬಿಲ್ಡ್‌ ಫಾರ್‌ ವರ್ಲ್ಡ್’ ಎಂಬ ಘೋಷ ವಾಕ್ಯವನ್ನು ಇಡಲಾಗಿದೆ. ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಕೇಂದ್ರ ಸಚಿವರಾದ ನಿತಿನ್‌ ಗಡ್ಕರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಭಾಗವಹಿಸಲಿದ್ದಾರೆ.

ADVERTISEMENT

ಜಾಗತಿಕ ಹೂಡಿಕೆದಾರರ ಸಮಾವೇಶದ ಸಿದ್ಧತೆ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರ ಜತೆ ಮಾತ ನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಇದು ಇಡೀ ಜಗತ್ತಿನ ಗಮನವನ್ನು ಸೆಳೆಯಲಿದೆ. ಜಗತ್ತಿನ ಹೂಡಿಕೆಯೂ ಇಲ್ಲಿಗೆ ಬರುತ್ತಿದೆ. ಕರ್ನಾಟಕದಲ್ಲಿ ಒಳ್ಳೆಯ ವಾತಾವರಣವಿದೆ. ಮುಂದಿನ ಐದು ವರ್ಷಗಳ ಬೆಳವಣಿಗೆಗೆ ಒಂದು ಭದ್ರ ಬುನಾದಿಯನ್ನು ಹಾಕಲಿದೆ’ ಎಂದು ವಿಶ್ವಾಸ
ವ್ಯಕ್ತಪಡಿಸಿದರು.

‘ಬೆಂಗಳೂರು ಬಿಟ್ಟು ಇತರ ನಗರಗಳಲ್ಲಿ ಬಂಡವಾಳ ಹೂಡಲು ಉದ್ಯಮಿಗಳು ಆಸಕ್ತಿ ತೋರಿಸುತ್ತಿದ್ದಾರೆ. ರಾಮನಗರ, ಹುಬ್ಬಳ್ಳಿ–ಧಾರವಾಡ, ಬಳ್ಳಾರಿ, ಕಲಬುರಗಿ, ಮೈಸೂರು ಹೀಗೆ ಎಲ್ಲ ಕಡೆ ಕೈಗಾರಿಕೆಗಳು ಬರುತ್ತಿವೆ. ಅ.28 ರಂದು ಹುಬ್ಬಳ್ಳಿಯಲ್ಲಿ ಎಫ್‌.ಎಂ.ಸಿ.ಜಿ ಕ್ಲಸ್ಟರ್‌ ಉದ್ಘಾಟಿಸಲಾಗಿದೆ. ಈ ಪ್ರದೇಶದಲ್ಲಿ ಸುಮಾರು ₹10 ಸಾವಿರ ಕೋಟಿ ಹೂಡಿಕೆಯಾಗಿದೆ ಒಂದು ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ’ ಎಂದು
ಹೇಳಿದರು.

ಪ್ರಮುಖ ಉದ್ಯಮಿಗಳ ಭಾಷಣ

ಜೆಎಸ್‌ಡ್ಬ್ಯೂ ಅಧ್ಯಕ್ಷ ಸಜ್ಜನ್ ಜಿಂದಾಲ್, ಸ್ಟೆರ್ಲೈಟ್‌ ಪವರ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪ್ರತೀಕ್ ಅಗರ್‌ವಾಲ್‌, ಅದಾನಿ ಪೋರ್ಟ್‌ ಮತ್ತು ಎಸ್‌ಇಝಡ್‌ನ ಕರಣ್‌ ಗೌತಮ್ ಅದಾನಿ, ಭಾರ್ತಿ ಎಂಟರ್‌ಪ್ರೈಸಸ್‌ನ ರಾಜನ್ ಭಾರ್ತಿ ಮಿತ್ತಲ್, ವಿಪ್ರೊ ಅಧ್ಯಕ್ಷ ರಿಶದ್ ಪ್ರೇಮ್‌ಜಿ, ಕಿರ್ಲೋಸ್ಕರ್‌ ಸಿಸ್ಟಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ವಿಕ್ರಂ ಕಿರ್ಲೋಸ್ಕರ್‌, ಆದಿತ್ಯ ಬಿರ್ಲಾ ಗ್ರೂಪ್‌ನ ಅಧ್ಯಕ್ಷ ಕೆ.ಎಂ.ಬಿರ್ಲಾ ವಿಶೇಷ ಭಾಷಣ. ಕೇಂದ್ರ ಸಚಿವರಾದ ಪೀಯೂಷ್‌ ಗೋಯಲ್, ನಿರ್ಮಲಾ ಸೀತಾರಾಮನ್‌ ಅವರಿಂದ ಪ್ರಧಾನ ಭಾಷಣ.

ಗುರುವಾರ ನಡೆಯುವ ‘ಲಿಂಗ ಸಮಾನತೆ’ ಕುರಿತ ಗೋಷ್ಠಿಯಲ್ಲಿ ಮಹಿಳಾ ಉದ್ಯಮಿಗಳಾದ ಸೇಲ್ಸ್‌ಫೋರ್ಸ್‌ ಇಂಡಿಯಾದ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ, ಬಯೋಕಾನ್‌ ಅಧ್ಯಕ್ಷೆ ಕಿರಣ್‌ ಮಜುಂದಾರ್‌ ಷಾ, ಗೋದ್ರೆಜ್‌ ಕನ್ಸ್ಯೂಮರ್‌ ಪ್ರಾಡಕ್ಟ್ಸ್‌ನ ನಿಸಬಾ ಗೋದ್ರೆಜ್‌, ಐಎನ್‌ಕೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿ ಪಾತುರಿ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರೂ ವಿಷಯ ಮಂಡಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.