ADVERTISEMENT

25 ವರ್ಷಕ್ಕೇ ಪ್ರಾಂಶುಪಾಲ!

ಕರಡು ನಿಯಮ:ಲೋಪ ಎತ್ತಿ ತೋರಿಸಿದ ಶಿಕ್ಷಕರ ಸಂಘ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 19:55 IST
Last Updated 12 ಫೆಬ್ರುವರಿ 2020, 19:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಸರ್ಕಾರಿ ಪದವಿ ಕಾಲೇಜುಗಳ ಪ್ರಾಂಶುಪಾಲರು ಮತ್ತು ಸಹಾಯಕ ಪ್ರಾಧ್ಯಾಪಕರ ನೇಮಕಾತಿಗಾಗಿ ಸರ್ಕಾರ ಹೊರಡಿಸಿರುವ ಕರಡು ನಿಯಮಗಳಲ್ಲಿ ಹಲವು ಲೋಪದೋಷಗಳಿದ್ದು,ಕನಿಷ್ಠ ವಯಸ್ಸು 25 ಎಂದು ನಮೂದಿಸಿದ್ದು ಹಾಸ್ಯಾಸ್ಪದ’ ಎಂದುಸರ್ಕಾರಿ ಕಾಲೇಜು ಶಿಕ್ಷಕರ ಸಂಘದ ಅಧ್ಯಕ್ಷ ಡಾ.ಟಿ.ಎಂ.ಮಂಜುನಾಥ್‌ ಹೇಳಿದ್ದಾರೆ.

‘ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮಾರ್ಗಸೂಚಿಯಂತೆ ಪ್ರಾಂಶುಪಾಲರ ನೇಮಕಾತಿಗೆ ಸಂದರ್ಶನ ನಡೆಸಬೇಕು ಎಂದು ಹೇಳಲಾಗಿದೆ. ಆದರೆ ಇದಕ್ಕೆ ವಿರುದ್ಧವಾಗಿಕರಡು ನಿಯಮಗಳಲ್ಲಿ ಲಿಖಿತ ಪರೀಕ್ಷೆಗೆ ತಿಳಿಸಲಾಗಿದೆ. ಒಬಿಸಿಯವರಿಗೆ ಮೀಸಲಾತಿ ಕಲ್ಪಿಸುವಲ್ಲಿ ಆದಾಯ ಮಿತಿಯನ್ನು ₹ 8 ಲಕ್ಷದಿಂದ ಹೆಚ್ಚಿಸದೆ ಇರುವುದರಿಂದ ಅವರಿಗೆ ಅವಕಾಶ ತಪ್ಪಿಹೋಗುವ ಅಪಾಯ ಇದೆ’ ಎಂದು ಅವರು ಅಭಿ‍‍ಪ್ರಾಯಪಟ್ಟಿದ್ದಾರೆ.

‘ಪ್ರಾಂಶುಪಾಲರ ನೇಮಕಕ್ಕೆ ಪಿಎಚ್‌.ಡಿ.ಕಡ್ಡಾಯ. ಆದರೆ ಷರತ್ತಿನಲ್ಲಿಪಿಎಚ್.ಡಿ. ಪದವಿಗೆ ಮುಂಗಡ ವೇತನ ಬಡ್ತಿ ಮಂಜೂರಾಗಿದ್ದಲ್ಲಿ, ಮುಂದೆ ಅಕಾಡೆಮಿಕ್‌ ಪರ್ಫಾಮೆನ್ಸ್‌ ಇಂಡಿಕೇಟರ್‌ನ(ಎಪಿಐ) ಯಾವುದೇ ಸೌಲಭ್ಯಗಳಿಗೆ ಬಳಸಿಕೊಳ್ಳುವಂತಿಲ್ಲ ಎಂದು ತಿಳಿಸಲಾಗಿದೆ. ಇದು ಮತ್ತೊಂದು ದೊಡ್ಡ ಲೋಪ’ ಎಂದು ಹಲವು ಪ್ರಾಧ್ಯಾಪಕರು ದೂರಿದ್ದಾರೆ.

ADVERTISEMENT

‘ಕನಿಷ್ಠ ವಯೋಮಿತಿ, ಮೀಸಲಾತಿಯಂತಹ ಲೋಪಗಳನ್ನು ಉದ್ದೇಶಪೂರ್ವಕವಾಗಿಯೇ ಕರಡಿನಲ್ಲಿ ಉಳಿಸಿ, ಗಮನ ಬೇರೆಡೆಗೆ ಸೆಳೆಯುವ ಪ್ರಯತ್ನ ನಡೆದಂತಿದೆ. ಸಾರ್ವಜನಿಕರಿಂದ ವ್ಯಕ್ತವಾಗುವ ಆಕ್ಷೇಪಗಳನ್ನು ಗಂಭೀರವಾಗಿ ಪರಿಗಣಿಸಿ, ಅವುಗಳನ್ನು ಸರಿಪಡಿ
ಸುವ ಹಾಗೂ ಶೀಘ್ರ ನೇಮಕಾತಿ ಪ್ರಕ್ರಿಯೆ ನಡೆಯುವಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

2009ರಿಂದೀಚೆಗೆ ಪದವಿ ಕಾಲೇಜುಗಳ ಪ್ರಾಂಶುಪಾಲರ ನೇಮಕಾತಿ ನಡೆದಿಲ್ಲ. 2017ರಿಂದೀಚೆಗೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ನಡೆದಿಲ್ಲ. ಹೀಗಾಗಿ ಬಹಳ ದಿನಗಳ ಬಳಿಕ ಸರ್ಕಾರದಿಂದ ಹೊರಬಿದ್ದಿರುವ ಈ ನಿಯಮಗಳಲ್ಲೇ ಇರುವ ದೊಡ್ಡ ಲೋಪಗಳ ಬಗ್ಗೆ ವ್ಯಾಪಕ ಟೀಕೆ ಕೇಳಿಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.