ADVERTISEMENT

ಪತ್ರಕರ್ತರಿಗೆ ನಿವೇಶನ ನೀಡಲು ಆದ್ಯತೆ: ಡಿ.ಕೆ. ಶಿವಕುಮಾರ್‌

ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2025, 16:01 IST
Last Updated 3 ಫೆಬ್ರುವರಿ 2025, 16:01 IST
‘ಪ್ರಜಾವಾಣಿ’ಯ ಪ್ರಭು ಬ. ಅಡವಿಹಾಳ, ಶಶಿಕಾಂತ್ ಎಸ್. ಶೆಂಬಳ್ಳಿ, ಕೆ. ಓಂಕಾರ ಮೂರ್ತಿ, ಡಿ.ಎಂ. ಕುರ್ಕೆ ಪ್ರಶಾಂತ್, ಸಂಧ್ಯಾ ಹೆಗಡೆ ಅವರು ಸೋಮವಾರ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸ್ವೀಕರಿಸಿದರು.
‘ಪ್ರಜಾವಾಣಿ’ಯ ಪ್ರಭು ಬ. ಅಡವಿಹಾಳ, ಶಶಿಕಾಂತ್ ಎಸ್. ಶೆಂಬಳ್ಳಿ, ಕೆ. ಓಂಕಾರ ಮೂರ್ತಿ, ಡಿ.ಎಂ. ಕುರ್ಕೆ ಪ್ರಶಾಂತ್, ಸಂಧ್ಯಾ ಹೆಗಡೆ ಅವರು ಸೋಮವಾರ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸ್ವೀಕರಿಸಿದರು.   

ಬೆಂಗಳೂರು: ‘ಸರ್ಕಾರದ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಪತ್ರಕರ್ತರಿಗೆ ಆದ್ಯತೆ ಮೇರೆಗೆ ನಿವೇಶನ ನೀಡಲು ಕಾರ್ಯಕ್ರಮ ರೂಪಿಸಲಾಗುತ್ತಿದೆ. ಸದ್ಯದಲ್ಲಿಯೇ ಅದರ ಬಗ್ಗೆ ಮಾಹಿತಿ ನೀಡಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿಯ 2023 ಮತ್ತು 2024ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ವಿತರಿಸುವ ಯೋಜನೆ ಜಾರಿ ಮಾಡಲಾಗಿದೆ. ಆರೋಗ್ಯ ವಿಮೆ ಒದಗಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಜೊತೆಗೆ ಪತ್ರಕರ್ತರು ಗೌರವಯುತವಾಗಿ ಬದುಕಲು ನಿವೇಶನ ಅಗತ್ಯ. ಯಾರ್ಯಾರಿಗೋ ನಿವೇಶನಗಳನ್ನು ಮೀಸಲಿಡುತ್ತೇವೆ. ಪತ್ರಕರ್ತರಿಗೂ ನಿವೇಶನ ಮೀಸಲಿಡಬೇಕು’ ಎಂದು ಹೇಳಿದರು. 

ADVERTISEMENT

ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನಗಳಲ್ಲಿ ಮಾತ್ರವಲ್ಲ, ಖಾಸಗಿ ಬಡಾವಣೆಗಳಲ್ಲಿ ನಿವೇಶನಗಳಿಗೆ ಅನುಮೋದನೆ ನೀಡುವಾಗ ಅದರಲ್ಲಿ ಪತ್ರಕರ್ತರಿಗೆ ನಿಗದಿತ ಪ್ರಮಾಣದ ನಿವೇಶನ ಮೀಸಲಿಡಬೇಕು ಎಂಬ ಷರತ್ತು ವಿಧಿಸಬೇಕು ಎಂದರು.

‘ಕರ್ನಾಟಕದಲ್ಲಿ ಮಾಧ್ಯಮಗಳಿಗೆ ಇರುವಷ್ಟು ಸ್ವಾತಂತ್ರ್ಯ ದೇಶದ ಬೇರೆ ಯಾವುದೇ ರಾಜ್ಯಗಳಲ್ಲಿ ಇಲ್ಲ. ಸಾಮಾನ್ಯರನ್ನು ದೊಡ್ಡ ನಾಯಕರನ್ನಾಗಿ ಮಾಡುವ, ದೊಡ್ಡವರನ್ನು ಹಳ್ಳಕ್ಕೆ ಹಾಕುವ ಶಕ್ತಿ ಮಾಧ್ಯಮಕ್ಕೆ ಇದೆ. ಸುಳ್ಳು ಸುದ್ದಿಗಳನ್ನು ನಿಯಂತ್ರಿಸುವುದು ಹೇಗೆ ಎಂಬ ಬಗ್ಗೆ ನೀವೇ ಚಿಂತನೆ ನಡೆಸಬೇಕು. ಸತ್ಯವನ್ನು ಗೌರವಿಸುವ ಕೆಲಸ ಮಾಡಬೇಕು’ ಎಂದು ಹೇಳಿದರು.

‘ಟಿಎಸ್ಆರ್ ಪ್ರಶಸ್ತಿ, ಮೊಹರೆ ಹಣಮಂತರಾಯ ಪ್ರಶಸ್ತಿ ಪ್ರಶಸ್ತಿ ಸಹಿತ ವಿವಿಧ ಪ್ರಶಸ್ತಿಗಳನ್ನು ಹಿಂದಿನ ಸರ್ಕಾರ ನೀಡಿರಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಎಲ್ಲ ಪ್ರಶಸ್ತಿ ಪ್ರದಾನ ನಡೆಯುತ್ತಿದೆ’ ಎಂದರು.

ಮುಖ್ಯಮಂತ್ರಿಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಮಾತನಾಡಿ, ‘ಪತ್ರಕರ್ತರಿಗೆ ಆರೋಗ್ಯ ವಿಮೆ ಒದಗಿಸುವ ಯೋಜನೆಯ ಬಗ್ಗೆ ಈಗಾಗಲೇ ಎರಡು ಬಾರಿ ಸಭೆ ನಡೆಸಿ ಚರ್ಚಿಸಲಾಗಿದೆ. ಕೆಲವೇ ದಿನಗಳಲ್ಲಿ ಜಾರಿಗೆ ಬರಲಿದೆ’ ಎಂದು ತಿಳಿಸಿದರು.

ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನುಂ ಮಾತನಾಡಿ, ‘ವಾರ್ಷಿಕ ಪ್ರಶಸ್ತಿಯ ಗೌರವಧನವನ್ನು ₹ 25 ಸಾವಿರದಿಂದ ₹ 50 ಸಾವಿರಕ್ಕೆ ಹೆಚ್ಚಿಸಲಾಗಿದೆ. ಜೀವಮಾನದ ಸಾಧನೆ ಪ್ರಶಸ್ತಿಯ ಮೊತ್ತವನ್ನು ₹ 1 ಲಕ್ಷಕ್ಕೆ ಏರಿಸಲಾಗಿದೆ’ ಎಂದು ವಿವರಿಸಿದರು.

ವಾರ್ತಾ ಇಲಾಖೆಯ ಆಯುಕ್ತ ಹೇಮಂತ್‌ ನಿಂಬಾಳ್ಕರ್‌, ಮುಖ್ಯಮಂತ್ರಿಯವರ ಕಾರ್ಯದರ್ಶಿ ಬಿ.ಬಿ. ಕಾವೇರಿ, ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಹನಾ ಎಂ. ಹಾಗೂ ಅಕಾಡೆಮಿ ಸದಸ್ಯರು ಭಾಗವಹಿಸಿದ್ದರು.

86 ಮಂದಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ

‘ಪ್ರಜಾವಾಣಿ’ಯ ಶಶಿಕಾಂತ್ ಶೆಂಬೆಳ್ಳಿ ಸಂಧ್ಯಾ ಹೆಗಡೆ ಕೆ. ಓಂಕಾರಮೂರ್ತಿ ಡಿ.ಎಂ. ಕುರ್ಕೆ ಪ್ರಶಾಂತ್ ಪ್ರಭು ಬ. ಅಡವಿಹಾಳ ‘ಡೆಕ್ಕನ್‌ ಹೆರಾಲ್ಡ್‌’ನ ಮಧು ಜವಳಿ ಶಿಲ್ಪಾ ಪಿ. ಸೇರಿದಂತೆ 86 ಪತ್ರಕರ್ತರಿಗೆ 2023 ಮತ್ತು 2024ನೇ ಸಾಲಿನ ಮಾಧ್ಯಮ ಅಕಾಡೆಮಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

‘ಇಂದು ಸಂಜೆ’ ಪತ್ರಿಕೆಯ ಪ್ರಧಾನ ವರದಿಗಾರ  ಅ.ಚ.ಶಿವಣ್ಣ ಮತ್ತು ‘ವಾರ್ತಾಭಾರತಿ’ಯ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.