ADVERTISEMENT

ಕನ್ನಡ ನಾಮಫಲಕ ಅಭಿಯಾನ: ನಾಮಫಲಕ ಕಡ್ಡಾಯಕ್ಕೆ ನಿಯಮ ತಿದ್ದುಪಡಿ –ಮಂಜುನಾಥ ಪ್ರಸಾದ್

ಶುದ್ಧ ಕನ್ನಡ ನಾಮಫಲಕ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 10:49 IST
Last Updated 27 ಜನವರಿ 2021, 10:49 IST
ಕಾರ್ಯಕ್ರಮದಲ್ಲಿ ಟಿ.ಎಸ್‌.ನಾಗಾಭರಣ ಅವರು ಗೌರವ್‌ ಗುಪ್ತ ಹಾಗೂ ಎನ್‌.ಮಂಜುನಾಥ ಪ್ರಸಾದ್‌ ಅವರ ಜೊತೆ ಚರ್ಚಿಸಿದರು
ಕಾರ್ಯಕ್ರಮದಲ್ಲಿ ಟಿ.ಎಸ್‌.ನಾಗಾಭರಣ ಅವರು ಗೌರವ್‌ ಗುಪ್ತ ಹಾಗೂ ಎನ್‌.ಮಂಜುನಾಥ ಪ್ರಸಾದ್‌ ಅವರ ಜೊತೆ ಚರ್ಚಿಸಿದರು   

ಬೆಂಗಳೂರು: ‘ಎಲ್ಲ ಅಂಗಡಿ ಮುಂಗಟ್ಟುಗಳಲ್ಲಿ ಅಳವಡಿಸುವ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡುವುದನ್ನು ಕಡ್ಡಾಯಗೊಳಿಸಲು ಬಿಬಿಎಂಪಿ ಜಾಹೀರಾತು ಬೈಲಾಗಳಿಗೆ ತಿದ್ದುಪಡಿ ತರಲಾಗುತ್ತದೆ’ ಎಂದು ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಬಿಬಿಎಂಪಿ ಜಂಟಿಯಾಗಿ ನಗರದಲ್ಲಿ ಹಮ್ಮಿಕೊಂಡಿರುವ ‘ಶುದ್ಧ ಕನ್ನಡ ನಾಮಫಲಕ ಅಭಿಯಾನ’ಕ್ಕೆ ಚಾಲನೆ ನೀಡುವ ಕಾರ್ಯಕ್ರಮದ ಬಳಿಕ ಬುಧವಾರ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

‘ಎಲ್ಲ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಶೇ 67ರಷ್ಟಾದರೂ ಪ್ರಾತಿನಿಧ್ಯವಿರಬೇಕು. ಶೇ 33ರಷ್ಟು ಹಿಂದಿ, ಇಂಗ್ಲಿಷ್‌ ಅಥವಾ ಇತರ ಭಾಷೆ ಬಳಸಬಹುದು. ಕನ್ನಡ ಭಾಷೆಗೆ ಆದ್ಯತೆ ನೀಡದಿದ್ದರೆ ಅಂಗಡಿ ಮಾಲೀಕರಿಗೆ ಬಿಬಿಎಂಪಿಯಿಂದ ನೀಡಲಾದ ಉದ್ದಿಮೆ ಪರವಾನಗಿ ರದ್ದು ಮಾಡುತ್ತೇವೆ ಎಂದು ಪಾಲಿಕೆ ಈ ಹಿಂದೆ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಕೆಲವು ಅಂಗಡಿ ಮಾಲೀಕರು ಹೈಕೋರ್ಟ್‌ ಮೊರೆ ಹೋಗಿದ್ದರು. ಈ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಹಾಗಾಗಿ ಅಂಗಡಿ ಮುಂಗಟ್ಟುಗಳ ನಾಮ ಫಲಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡುವುದನ್ನು ಜಾಹೀರಾತು ಬೈಲಾದಲ್ಲೇ ಕಡ್ಡಾಯ ಮಾಡುತ್ತಿದ್ದೇವೆ’ ಎಂದು ಆಯುಕ್ತರು ಸ್ಪಷ್ಟಪಡಿಸಿದರು.

ADVERTISEMENT

‘ಜಾಹೀರಾತು ಬೈಲಾ ತಿದ್ದುಪಡಿ ಜಾರಿಯಾದ ಬಳಿಕ ಕಾನೂನಾತ್ಮಕ ಸಮಸ್ಯೆ ಇರುವುದಿಲ್ಲ. ಆಮೇಲೆ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ನಿಯಮದ ಅನುಷ್ಠಾನ ಸುಲಭ. ಈ ನಿಯಮ ಉಲ್ಲಂಘಿಸುವ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬಹುದು. ಈ ನಿಯಮ ಜಾರಿಗೊಳಿಸುವಲ್ಲಿ ವಿಫಲರಾಗುವ ಅಧಿಕಾರಿಗಳ ವಿರುದ್ಧವೂ ಕ್ರಮಕೈಗೊಳ್ಳಲು ಅವಕಾಶ ಸಿಗಲಿದೆ’ ಎಂದರು.

‘ಬಿಬಿಎಂಪಿ ವತಿಯಿಂದ ಅಳವಡಿಸಿರುವ ಕೆಲವು ಮಾರ್ಗಸೂಚಿ ಫಲಕಗಳಲ್ಲಿ ಬಡಾವಣೆಗಳ ಹೆಸರುಗಳಲ್ಲಿ ಅಕ್ಷರಗಳು ತಪ್ಪಾಗಿರುವುದನ್ನು ಕನ್ನಡ ಜಾಗೃತಿ ಸಮಿತಿಯವರು ಗಮನಕ್ಕೆ ತಂದಿದ್ದಾರೆ. ಇಂತಹ ಲೋಪಗಳನ್ನು ಸರಿಪಡಿಸಲು ಮೂರು ದಿನಗಳಲ್ಲಿ ಕ್ರಮಕೈಗೊಳ್ಳುವಂತೆ ಪ್ರತಿ ವಿಧಾನಸಭಾ ಕ್ಷೇತ್ರದ ಕಾರ್ಯಪಾಲಕ ಎಂಜಿನಿಯರ್‌ಗೆ ಹಾಗೂ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ತಿಳಿಸಿದರು.

‘ಬಿಬಿಎಂಪಿಯಲ್ಲಿ ಹೊರಡಿಸುವ ಪ್ರತಿಯೊಂದು ಸುತ್ತೋಲೆಯೂ ಕನ್ನಡದಲ್ಲಿ ಇರುತ್ತದೆ. ಆದರೆ, ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕಾದ ಸುತ್ತೋಲೆಗಳು ಮಾತ್ರ ಇಂಗ್ಲಿಷ್‌ನಲ್ಲೂ ಇರುತ್ತವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ, ‘ಕರ್ನಾಟಕದಲ್ಲೇ ಕನ್ನಡವೇ ಸಾರ್ವಭೌಮ. ಬೆಂಗಳೂರಿನದು ವಿಶಿಷ್ಟ ಪರಂಪರೆ. ಈ ನಗರವನ್ನು ಕಟ್ಟಿದಾಗಲೇ ಬೇರೆ ಬೇರೆ ರಾಜ್ಯಗಳ ಜನ ಇಲ್ಲಿಗೆ ಬಂದು ನೆಲೆಸಿದ್ದಾರೆ. ಇಲ್ಲಿನದು ಒಗ್ಗೂಡಿ ಬೆಳೆಯುವ ಸಂಸ್ಕೃತಿ. ಇಲ್ಲಿ ನೆಲೆಸಿರುವ ಅನ್ಯಭಾಷಿಕರಿಗೂ ಕನ್ನಡ ಕಲಿಸಬೇಕು’ ಎಂದರು.

‘ಬಿಬಿಎಂಪಿಯೂ ಕನ್ನಷ ಭಾಷೆಯನ್ನು ತನ್ನದಾಗಿಸಿಕೊಳ್ಳುವ ಮೂಲಕ ತನ್ನತನವನ್ನು ಕಾಪಾಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

–0–

ವಾಹನದ ಮೂಲಕ ಜಾಗೃತಿ

‘ಶುದ್ಧ ಕನ್ನಡ ನಾಮಫಲಕ ಜಾಗೃತಿ ಅಭಿಯಾನ’ದ ಅಂಗವಾಗಿ ಜಾಗೃತಿ ವಾಹನವು ನಗರದ ವಿವಿಧೆಡೆ ಸಂಚರಿಸಿ ಸಾರ್ವಜನಿಕರಲ್ಲಿ ಭಾಷೆಯ ಬಗ್ಗೆ ಜಾಗೃತಿ ಮೂಡಿಸಲಿದೆ. ಕನ್ನಡ ಬಾವುಟದ ಕೆಂಪು-ಹಳದಿ ಬಣ್ಣದ ವಾಹನವು ಸಂಚರಿಸುವಲ್ಲೆಲ್ಲ ಕನ್ನಡದ ಘೋಷಣೆ ಮೊಳಗಿಸುವ ಮೂಲಕ ಭಾಷೆಯ ಮಹತ್ವವನ್ನು ಸಾರಲಿದೆ. ಅನ್ಯ ಭಾಷಿಕರಿಗೂ ಕನ್ನಡ ಲಿಪಿ, ಕನ್ನಡ ಸಂಸ್ಕೃತಿಯ ಅರಿವು ಮೂಡಿಸಲಿದೆ.

–0–

ಶುದ್ಧ ಕನ್ನಡ ನಾಮಫಲಕ ಅಭಿಯಾನ ಕೇವಲ ರಸ್ತೆ ಹಾಗೂ ಅಂಗಡಿಗಳಿಗೆ ಸೀಮಿತವಲ್ಲ. ಇದರ ಮೂಲಕ ಸಂಸ್ಕೃತಿಯನ್ನು ತಿಳಿಸಿ, ಕನ್ನಡ ಮನಸುಗಳನ್ನು ಕಟ್ಟುತ್ತಿದ್ದೇವೆ. ಮೂರು ನಾಲ್ಕು ತಿಂಗಳಲ್ಲಿ ಬೆಂಗಳೂರು ಕನ್ನಡ ಮಯವಾಗಲಿದೆ.

–ಟಿ.ಎಸ್‌.ನಾಗಾಭರಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

–0–

ಬೆಂಗಳೂರಿನಲ್ಲಿ ಅನ್ಯ ಭಾಷಿಕರಿಗೆ ಕನ್ನಡ ಲಿಪಿ ಮತ್ತು ಭಾಷೆ ಬಗ್ಗೆ ಅರಿವು ಮೂಡಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ. ಇದಕ್ಕೆ ಪಾಲಿಕೆಯಿಂದ ಎಲ್ಲ ರೀತಿಯ ಸಹಕಾರ ನೀಡುತ್ತೇವೆ

ಗೌರವ ಗುಪ್ತ, ಬಿಬಿಎಂಪಿ ಆಡಳಿತಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.