ADVERTISEMENT

ಜೈಲಿನಲ್ಲಿ ಹುಟ್ಟುಹಬ್ಬ: ಕೈದಿಗಳ ಸ್ಥಳಾಂತರಕ್ಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 16:34 IST
Last Updated 14 ಅಕ್ಟೋಬರ್ 2025, 16:34 IST
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ 
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ    

ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಸರ್ಜಾಪುರದ ರೌಡಿ ಶೀಟರ್‌ ಶ್ರೀನಿವಾಸ್‌ ಅಲಿಯಾಸ್‌ ಗುಬ್ಬಚ್ಚಿ ಸೀನ ಹಾಗೂ ಸಹಚರರ ವಿರುದ್ಧ ದಾಖಲಾಗಿದ್ದ ಪ್ರಕರಣ ಸಂಬಂಧ ನ್ಯಾಯಾಲಯದಿಂದ ಅನುಮತಿ ಪಡೆದು, 12 ಮಂದಿ ವಿಚಾರಣಾಧೀನ ಕೈದಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರಿಸಲು ಕಾರಾಗೃಹ ಇಲಾಖೆ ಮುಂದಾಗಿದೆ.

ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಶ್ರೀನಿವಾಸ್ ಸೆಪ್ಟೆಂಬರ್ 9 ರಂದು ಹುಟ್ಟು ಹಬ್ಬದ ಪ್ರಯುಕ್ತ ಕೇಕ್ ಕತ್ತರಿಸಿ ಸಹ ಕೈದಿಗಳೊಂದಿಗೆ ಸಂಭ್ರಮಿಸಿದ್ದ ಫೋಟೊ ಮತ್ತು ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ಶ್ರೀನಿವಾಸ್​ನಿಂದ ಕೊಲೆಯಾದ ವೆಂಕಟೇಶ್‌ ಅವರ ಪತ್ನಿ ನೀಡಿದ ದೂರಿನ ಮೇಲೆ ಇಬ್ಬರನ್ನು ಅಮಾನತು ಮಾಡಿ, ಐವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ದಕ್ಷಿಣ ವಲಯದ ಡಿಐಜಿ ಕೆ.ಸಿ. ದಿವ್ಯಶ್ರೀ ಶಿಫಾರಸು ಮಾಡಿದ್ದರು.

ADVERTISEMENT

ಜೈಲಿನ ನಿಯಮ ಉಲ್ಲಂಘಿಸಿ, ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿಕೊಂಡಿದ್ದ ಶ್ರೀನಿವಾಸ ಸೇರಿ 12 ಮಂದಿ ವಿಚಾರಣಾಧೀನ ಕೈದಿಗಳನ್ನು ಆಡಳಿತ ಹಾಗೂ ಭದ್ರತಾ ದೃಷ್ಟಿಯಿಂದ, ನ್ಯಾಯಾಲಯದಿಂದ ಅನುಮತಿ ಪಡೆದು ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಆರೋಪಿ ಶ್ರೀನಿವಾಸ್, ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆನಂದ್ ಬೆಳಗಾವಿ, ಶೇಖರ್, ಪ್ರವೀಣ್ -ವಿಜಯಪುರ, ಸೂರ್ಯ, ಮಿಥುನ್- ಧಾರವಾಡ, ಪ್ರೀಕ್ಷಿತ, ಪ್ರಜ್ವಲ್- ಶಿವಮೊಗ್ಗ ಚೇತನ್, ಅರವಿಂದ್, ಕಾರ್ತಿಕ್ ಅವರನ್ನು ಕಲಬುರಗಿ ಜೈಲಿಗೆ ಸ್ಥಳಾಂತರಿಸಲು ಅಧಿಕಾರಿಗಳು ಶಿಫಾರಸು ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.