ADVERTISEMENT

ಶಕ್ತಿ ಯೋಜನೆಗೆ ವಿರೋಧ: ಖಾಸಗಿ ಸಾರಿಗೆ ಒಕ್ಕೂಟದಿಂದ ಸೆ.11ಕ್ಕೆ ಬೆಂಗಳೂರು ಬಂದ್

ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಆರೋಪ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2023, 10:23 IST
Last Updated 1 ಸೆಪ್ಟೆಂಬರ್ 2023, 10:23 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿ ಮಾತಿಗೆ ತಪ್ಪಿದ ಸರ್ಕಾರದ ನಡೆಯನ್ನು ಖಂಡಿಸಿ, ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೆ.11ರಂದು ಬೆಂಗಳೂರಿನಲ್ಲಿ ಸಾರಿಗೆ ಬಂದ್‌ ಮಾಡಲು ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ನಿರ್ಧರಿಸಿದೆ.

‘ಬೇಡಿಕೆ ಈಡೇರಿಸಲು ಜುಲೈ 27ರಂದು ಬಂದ್‌ ನಡೆಸಲು ಕರೆ ನೀಡಲಾಗಿತ್ತು. ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸಬೇಕು. ಇಲ್ಲವೇ ರಸ್ತೆ ತೆರಿಗೆಯನ್ನು ಸಂಪೂರ್ಣ ರದ್ದು ಮಾಡಬೇಕು ಎಂಬ ಬೇಡಿಕೆಯೂ ಸೇರಿದಂತೆ 30 ಬೇಡಿಕೆಗಳನ್ನು ಮುಂದಿಟ್ಟಿದ್ದೆವು. ಅದರಲ್ಲಿ 28 ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಸಾರಿಗೆ ಸಚಿವರು ಭರವಸೆ ನೀಡಿದ್ದರು. ಹಾಗಾಗಿ ಬಂದ್‌ ಕರೆ ವಾಪಸ್‌ ಪಡೆಯಲಾಗಿತ್ತು. ಆದರೆ ಸಾರಿಗೆ ಸಚಿವರು ವಚನ ಭ್ರಷ್ಟರಾಗಿ ನಮಗೆ ದ್ರೋಹ ಬಗೆದಿದ್ದಾರೆ. ಯಾವುದೇ ಬೇಡಿಕೆಗಳನ್ನು ಈಡೇರಿಸಿಲ್ಲ. ಅದನ್ನು ಖಂಡಿಸಿ, ನಮ್ಮ ಬೇಡಿಕೆ ಈಡೇರಿಸಲು ಆಗ್ರಹಿಸಿ ಸೆ.11ರಂದು ಬೆಂಗಳೂರಿನಲ್ಲಿ ಸಾರಿಗೆ ಬಂದ್‌ ಮಾಡಲಾಗುವುದು’ ಖಾಸಗಿ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ಎಸ್‌. ನಟರಾಜ್‌ ಶರ್ಮ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಆಟೊ, ಟ್ಯಾಕ್ಸಿ, ಏರ್‌ಪೋರ್ಟ್‌ ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್‌, ಕಾರ್ಪೊರೇಟ್‌ ವಾಹನಗಳು, ಸ್ಕೂಲ್‌ ಬಸ್‌, ಫ್ಯಾಕ್ಟ್ರಿ ಬಸ್‌, ಸ್ಟೇಜ್‌ ಕ್ಯಾರೇಜ್‌ ಬಸ್‌ ಚಾಲಕರ ಸಂಘಗಳು ಸೇರಿದಂತೆ 32 ಸಂಘಟನೆಗಳು ಸೇರಿ ಮುಷ್ಕರ ಹಮ್ಮಿಕೊಳ್ಳಲಾಗಿದೆ. .10ರ ರಾತ್ರಿ 12ರಿಂದ ಸೆ.11ರ ರಾತ್ರಿ 12ರವರೆಗೆ ಮುಷ್ಕರ ಇರಲಿದೆ ಎಂದು ಮಾಹಿತಿ ನೀಡಿದರು.

ಬೇಡಿಕೆಗಳು:

ಅಕ್ರಮವಾಗಿ ಚಲಿಸುತ್ತಿರುವ ರ‍್ಯಾಪಿಡೊ ಬೈಕ್‌ಟ್ಯಾಕ್ಸಿಗಳನ್ನು ನಿಷೇಧಿಸಬೇಕು. ಎಲೆಕ್ಟ್ರಿಕ್‌ ಆಟೊರಿಕ್ಷಾಗಳಿಗೆ ರಹದಾರಿ ನೀಡಬೇಕು. ರ‍್ಯಾಪಿಡೊ, ಓಲಾ, ಉಬರ್‌, ಇನ್ನಿತರ ಆನ್‌ಲೈನ್‌ ಕಂಪನಿಗಳಿಗೆ ಇ–ರಿಕ್ಷಾಗಳ ನೇರ ನೋಂದಣಿ ಮಾಡುವುದನ್ನು ನಿಷೇಧಿಸಬೇಕು. ಬಿಳಿ ಫಲಕ ಹೊಂದಿರುವ ವಾಹನಗಳಲ್ಲಿ ಬಾಡಿಗೆ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕು. ಓಲಾ, ಉಬರ್‌, ರೆಡ್‌ಬಸ್‌ ನಂತಹ ಆನ್‌ಲೈನ್‌ ಕಂಪನಿಗಳು ನಿಗದಿಯಾಗಿರುವ ಶೇ 5ಕ್ಕಿಂತ ಹೆಚ್ಚು ಕಮಿಷನ್‌ ಪಡೆಯದಂತೆ ನಿರ್ಬಂಧಿಸಬೇಕು.

ವಿಮಾನ ನಿಲ್ದಾಣಕ್ಕೆ ಏಕರೂಪ ದರ ನಿರ್ಧರಿಸಬೇಕು. ವಾಹನಗಳಿಗೆ ಜೀವಿತಾವಧಿ ತೆರಿಗೆ ವಿಧಿಸುವುದನ್ನು ಕೈಬಿಡಬೇಕು. ಚಾಲಕರಿಗೆ ವಸತಿ, ಕಾರು ಖರೀದಿಗೆ ಸಬ್ಸಿಡಿ ನೀಡಬೇಕು. ಚಾಲಕರಿಗೆ ₹ 10 ಸಾವಿರ ಮಾಸಿಕ ಪರಿಹಾರ ಧನಸಹಾಯ ನೀಡಬೇಕು. ಅಸಂಘಟಿತ ವಾಣಿಜ್ಯ ಚಾಲಕರ ಮತ್ತು ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ನೇರ ಸಾಲ ಸೌಲಭ್ಯ ಯೋಜನೆಯಡಿ ₹ 2 ಲಕ್ಷವರೆಗೆ ಸಾಲ ಒದಗಿಸಬೇಕು. ಚಾಲಕರ ಮಕ್ಕಳಿಗೆ ವಿದ್ಯಾರ್ಥಿವೇತನ ಒದಗಿಸಬೇಕು.

ಅಂತರ್‌ರಾಜ್ಯ ಪ್ರವಾಸಿ ವಾಹನಗಳ ಪರಸ್ಪರ ಒಪ್ಪಂದಕ್ಕೆ ಚಾಲನೆ ನೀಡಬೇಕು. ಸರ್ಕಾರಿ ವಾಹನಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಅಧಿಕ ಪ್ರಯಾಣಿಕರನ್ನು ಒಯ್ಯಬಾರದು. ಖಾಸಗಿ ವಾಹನಗಳನ್ನು ಕಿಲೋಮೀಟರ್‌ ಆಧಾರದಲ್ಲಿ ಸರ್ಕಾರವೇ ಬಾಡಿಗೆ ಪಡೆಯಬೇಕು. ಟೂರಿಸ್ಟ್‌, ಕಾಂಟ್ರಾಕ್ಟ್‌ ಕ್ಯಾರೇಜ್‌ ಬಸ್‌ಗಳಿಗೆ ರಸ್ತೆ ತೆರಿಗೆ ಕಡಿತಗೊಳಿಸಬೇಕು ಎಂಬುದು ಸಂಘಟನೆಗಳ ಪ್ರಮುಖ ಬೇಡಿಕೆಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.