ಪ್ರಿಯಾಂಕ್ ಖರ್ಗೆ
ಬೆಂಗಳೂರು: ಅನಲಿಟಿಕ್ಸ್ ಇಂಡಿಯಾ ಮ್ಯಾಗಜಿನ್ ನಡೆಸಿದ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ (ಎಐ) ವಲಯದ ಭಾರತದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಒಂಬತ್ತನೇ ಸ್ಥಾನ ಪಡೆದಿದ್ದಾರೆ.
ಭಾರತದ ವಿಜ್ಞಾನಿಗಳು ಮತ್ತು ಸಂಶೋಧಕರು, ನವೋದ್ಯಮ ಸಂಸ್ಥಾಪಕರು, ತಂತ್ರಜ್ಞಾನ ಪರಿಣತರು, ನೀತಿ ನಿರೂಪಕರು, ಸಾರ್ವಜನಿಕ ವಲಯದ ನಾಯಕರು ಎಐ ಬಗ್ಗೆ ಹೇಗೆ ಕಾರ್ಯಪ್ರವೃತ್ತವಾಗಿದ್ದಾರೆ ಎನ್ನುವುದನ್ನು ಮಾನದಂಡವಾಗಿಟ್ಟುಕೊಂಡು ಈ ಆಯ್ಕೆ ಮಾಡಲಾಗಿದೆ.
ಪ್ರಿಯಾಂಕ್ ಖರ್ಗೆ ಭಾರತದ ಎಐ ಪ್ರಭಾವಶಾಲಿ ನೀತಿ ನಿರೂಪಕರಲ್ಲಿ ಒಬ್ಬರು. ದೂರದೃಷ್ಟಿಯೊಂದಿಗೆ ಖರ್ಗೆ ಅವರು ಕರ್ನಾಟಕದ ಎಐ ನೀತಿ ರೂಪಿಸಿ ಕಾರ್ಯಗತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನಾವೀನ್ಯ ಮತ್ತು ತಂತ್ರಜ್ಞಾನದ ಬೆಳವಣಿಗೆಯನ್ನು ವಿಕೇಂದ್ರೀಕರಿಸುವ ಗುರಿಯೊಟ್ಟಿಗೆ ಬೆಂಗಳೂರು ನಗರದಾಚೆಗೂ ಇದನ್ನು ವಿಸ್ತರಿಸುವ ಪ್ರಯತ್ನ ಮಾಡಿದ್ದಾರೆ. ಅವರ ಆಡಳಿತವು ಯುವ-ಕೇಂದ್ರಿತ ಮತ್ತು ಎಲ್ಲರನ್ನೂ ಒಳಗೊಳ್ಳುವಂತಿದೆ ಎಂದು ತಿಳಿಸಲಾಗಿದೆ.
ಡಿಜಿಟಲ್ ನಾವೀನ್ಯದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿ ಎಐನ ಭಾರತದ ಮೊದಲ ಶ್ರೇಷ್ಠತೆಯ ಕೇಂದ್ರವನ್ನು ಪ್ರಾರಂಭಿಸುವಲ್ಲಿ ಪ್ರಿಯಾಂಕ್ ಅವರು ಉಸ್ತುವಾರಿ ವಹಿಸಿದ ಕಾರಣಕ್ಕೆ ಅವರನ್ನು ಆಯ್ಕೆಗೆ ಪರಿಗಣಿಸಲಾಗಿದೆ.
ಕೇಂದ್ರ ಸಚಿವ ಪೀಯೂಷ್ ಗೋಯಲ್, ತೆಲಂಗಾಣ ಐಟಿ ಮತ್ತು ಬಿಟಿ ಸಚಿವ ಡಿ.ಶ್ರೀಧರ ಬಾಬು ಕೂಡ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿರುವ ಪ್ರಮುಖರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.