ಬಂಧನ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಗೆ ಬೆದರಿಕೆ ಹಾಕಿದ ಹಾಗೂ ವಂಚಕರ ಪರ ಮಧ್ಯಸ್ಥಿಕೆ ವಹಿಸಿದ ಆರೋಪದ ಮೇಲೆ ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಬಿ.ಸಿ.ಮೈಲಾರಪ್ಪ ಅವರನ್ನು ಹೈದರಾಬಾದ್‌ನ ಜ್ಯುಬಿಲಿ ಹಿಲ್ಸ್ ಪೊಲೀಸರು ಈಚೆಗೆ ಬಂಧಿಸಿದ್ದು, ಒಂದು ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ ನಂತರ ಬಿಡುಗಡೆಯಾಗಿದ್ದಾರೆ.
ತೆಲಂಗಾಣದ ನಂದಗಿರಿ ಹಿಲ್ಸ್‌ನ ರಿಯಲ್ ಎಸ್ಟೇಟ್ ಉದ್ಯಮಿ ಕೆ.ಶಶಿಧರ ರೆಡ್ಡಿ ಅವರು 2023 ಫೆಬ್ರುವರಿಯಲ್ಲಿ ನೀಡಿದ್ದ ವಂಚನೆ, ಜೀವ ಬೆದರಿಕೆ ದೂರಿನ ಹಿನ್ನೆಲೆಯಲ್ಲಿ ತೆಲಂಗಾಣ ಪೊಲೀಸರು ಮೈಲಾರಪ್ಪ ಅವರನ್ನು ಈಚೆಗೆ ಬಂಧಿಸಿದ್ದರು.
ಶಶಿಧರ ರೆಡ್ಡಿ ತಮ್ಮ ಒಡೆತನದ ಶ್ರಿವೆನ್ ಇನ್‌ಫ್ರಾ ಹೆಸರಿನಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಪ್ರಕರಣದ ಮುಖ್ಯ ಆರೋಪಿ ಸುರೇಂದ್ರ ರೆಡ್ಡಿ ಅವರಿಂದ ಯಲಹಂಕದ ಬಳಿಯ ಹೊಸಳ್ಳಿ ಬಳಿ ಇರುವ 11.30 ಎಕರೆ ಜಮೀನು ಖರೀದಿಸಿದ್ದರು.
ಮಾತುಕತೆಯ ವೇಳೆ ಮುಂಗಡವಾಗಿ ನೀಡಿದ್ದ ₹50 ಲಕ್ಷ ಸೇರಿ, ಒಟ್ಟು ₹5.35 ಕೋಟಿ ಪಾವತಿಸಿದ್ದರು. ಸುರೇಂದ್ರ ರೆಡ್ಡಿ ಅವರು ನೀಡಿದ್ದ ಜಮೀನಿನ ದಾಖಲೆಗಳನ್ನು ಪರಿಶೀಲಿಸಿದಾಗ ನಕಲಿ ಎನ್ನುವುದು ದೃಢಪಟ್ಟಿತ್ತು.
ಹಣ ವಾಪಸ್ ಕೇಳಿದಾಗ ಮಧ್ಯ ಪ್ರವೇಶಿಸಿದ್ದ ಮೈಲಾರಪ್ಪ ಆರೋಪಿಗಳ ಪರವಾಗಿ ತಮ್ಮ ಪ್ರಭಾವ ಬಳಸಿದ್ದರು. ಬೆದರಿಕೆ ಹಾಕಿದ್ದರು ಎಂದು ಅವರನ್ನೂ ಸೇರಿಸಿ, ಪ್ರಕರಣ ದಾಖಲಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.