
ಬೆಂಗಳೂರು: ನೀವು ವಾಸಿಸುವ ಪ್ರದೇಶ ಹಸಿರಿನಿಂದ ಎಷ್ಟು ಸಮೃದ್ಧವಾಗಿದೆ ಎಂದು ತಿಳಿದುಕೊಳ್ಳಬೇಕೇ? ಅಲ್ಲಿ ಯಾವ ಯಾವ ಪ್ರಭೇದಗಳ ಮರಗಳಿವೆ, ಅವುಗಳ ಸ್ಥಿತಿಗತಿ ಹೇಗಿದೆ ಎಂಬ ಮಾಹಿತಿ ಬೇಕೆ?
ನಗರದ ಮರ ಗಿಡಗಳ ಸಮಗ್ರ ಚಿತ್ರಣವನ್ನು ಮೊಬೈಲ್ ಆ್ಯಪ್ ಬಳಸಿ ದಾಖಲೀಕರಿಸಿ ಸಾರ್ವಜನಿಕರಿಗೆ ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ‘ಪ್ರಾಜೆಕ್ಟ್ ವೃಕ್ಷ ಫೌಂಡೇಷನ್’ ಹೆಜ್ಜೆ ಇಟ್ಟಿದೆ. ಪಟ್ಟಾಭಿರಾಮನಗರ ವಾರ್ಡ್‌ನಲ್ಲಿ ಬೀದಿ ಬದಿಯ ಮರ–ಗಿಡಗಳ ಸಚಿತ್ರ ಮಾಹಿತಿಯನ್ನು ಕಲೆ ಹಾಕಿರುವ ‘ವೃಕ್ಷ’ ತಂಡ ಅದನ್ನು ಸಂಸ್ಥೆಯು ವೆಬ್‌ಸೈಟ್‌ನಲ್ಲಿ (https://vruksha.com) ಅಳವಡಿಸಿದೆ.
ಜಯನಗರದ ಎಸ್‌ಎಸ್‌ಎಂಆರ್‌ವಿ ಕಾಲೇಜಿನ ಸಹಯೋಗದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಈ ವೆಬ್‌ಸೈಟ್ ಲೋಕಾರ್ಪಣೆ ಮಾಡಲಾಯಿತು.
ಏನೇನು ಮಾಹಿತಿ?: ವಾರ್ಡ್‌ನ ಪ್ರತಿಯೊಂದು ಬೀದಿಯಲ್ಲೂ ಸಾರ್ವಜನಿಕ ಸ್ಥಳದಲ್ಲಿರುವ ಎಲ್ಲ ಗಿಡ ಮರಗಳ ಮಾಹಿತಿ ವೆಬ್‌ಸೈಟ್‌ನಲ್ಲಿದೆ. ಮರವಿರುವ ಜಾಗವನ್ನು ಹಸಿರು ಬಣ್ಣದಿಂದ, ಗಿಡವಿರುವ ಜಾಗವನ್ನು ಹಳದಿ ಬಣ್ಣದಿಂದ ತೋರಿಸಲಾಗಿದೆ. ನಿರ್ದಿಷ್ಟ ಸಸ್ಯವು ಯಾವ ಪ್ರಬೇಧಕ್ಕೆ ಸೇರಿದೆ, ಅದರ ಹೆಸರೇನು, ಅದು ಯಾವ ರಸ್ತೆಯಲ್ಲಿದೆ, ರಸ್ತೆಯ ಯಾವ ಪಾರ್ಶ್ವದಲ್ಲಿದೆ, ಮರದ ಸುತ್ತಳತೆ ಎಷ್ಟು, ಎತ್ತರವೆಷ್ಟು ಎಂಬ ಮಾಹಿತಿಯನ್ನೂ ವೆಬ್‌ಸೈಟ್‌ನಲ್ಲಿ ಪಡೆಯಬಹುದು.
ಮರ ಇರುವ ಜಾಗದಲ್ಲೇ ನಿಂತು, ಜಿಪಿಎಸ್‌ನಲ್ಲಿ ಸ್ಥಳವನ್ನು ಗುರುತಿಸಿಯೂ ಅಲ್ಲಿರುವ ಮರದ ಬಗ್ಗೆ ಮಾಹಿತಿ ತಿಳಿಯ
ಬಹುದು. ಗಿಡ ನೆಡಲು ಯೋಗ್ಯವಾದ ಖಾಲಿ ಜಾಗ ಎಲ್ಲೆಲ್ಲಿ ಇದೆ ಎಂಬ ಮಾಹಿತಿಯನ್ನೂ ಕಲೆಹಾಕಿ ಅದನ್ನು ಕೆಂಪು
ಬಣ್ಣದಿಂದ ಗುರುತು ಮಾಡಲಾಗಿದೆ.
ಮರವು ರೋಗಗ್ರಸ್ತವಾಗಿದೆಯೇ, ಕೊಂಬೆಗಳನ್ನು ತೆರವುಗೊಳಿಸಬೇಕೇ, ಅದು ವಿದ್ಯುತ್ ಮಾರ್ಗದ ಬಳಿ ಇದೆಯೇ, ಅದರ ಬುಡಕ್ಕೆ ಸಿಮೆಂಟ್ ಹಾಕಿ ಬೇರುಗಳಿಗೆ ನೀರು ಮತ್ತು ಪೋಷಕಾಂಶ ಸಿಗದಂತೆ ಮಾಡಲಾಗಿದೆಯೇ... ಮುಂತಾದ ವಿವರಣೆ ನೀಡುವುದಕ್ಕೂ ಅವಕಾಶ ಕಲ್ಪಿಸಲಾಗಿದೆ. ಒಮ್ಮೆ ಅಪ್‌ಲೋಡ್ ಮಾಡಿದ ಮಾಹಿತಿಗೆ ಪೂರಕ ವಿಚಾರಗಳನ್ನು ಸೇರಿಸುವುದಕ್ಕೂ ಅವಕಾಶ ಇದೆ.
ಏನುಪಯೋಗ?: ‘ನಗರದಲ್ಲಿ ದಿನೇ ದಿನೇ ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇರುವ ಮರಗಳನ್ನಾದರೂ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ಮಾಹಿತಿ ತುಂಬಾ ಉಪಯುಕ್ತ’ ಎನ್ನುತ್ತಾರೆ ಪ್ರಾಜೆಕ್ಟ್ ವೃಕ್ಷ ಪ್ರತಿಷ್ಠಾನದ ಸಂಸ್ಥಾಪಕರಾಗಿರುವ ಸಸ್ಯ ವೈದ್ಯ ವಿಜಯ್ ನಿಶಾಂತ್.
‘ಕೆಲವರು ಮರಗಳನ್ನು ರಾತ್ರೋ ರಾತ್ರಿ ಕಡಿದು ಆ ಸ್ಥಳವನ್ನು ಮುಚ್ಚಿ ಬಿಡುತ್ತಾರೆ. ಅಲ್ಲೊಂದು ಮರವಿತ್ತು ಎನ್ನುವುದಕ್ಕೂ ಯಾವುದೇ ಸಾಕ್ಷ್ಯ ಇರುವುದಿಲ್ಲ. ನಾವು ಅಭಿವೃದ್ಧಿಪಡಿಸಿರುವ ಮೊಬೈಲ್ ಆ್ಯಪ್ ಬಳಸಿ ಎಲ್ಲ ಮರದ ಕುರಿತ ಸಮಗ್ರ ಮಾಹಿತಿಯನ್ನು ದಾಖಲಿಸಬಹುದು. ನಾವು ಮರದ ಚಿತ್ರ ಸಮೇತ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಮೊದಲೇ ಅಪ್‌ಲೋಡ್ ಮಾಡಿರುವುದರಿಂದ ಅದನ್ನು ಯಾರಾದರೂ ಕಡಿದರೆ ಪ್ರಶ್ನೆ ಮಾಡಲು ಸಾಕ್ಷ್ಯ ನಮ್ಮ ಬಳಿ ಇರುತ್ತದೆ’ ಎಂದರು.
‘ರೋಗಗ್ರಸ್ತವಾದ ಮರಗಳನ್ನು ಕೆಲವೊಮ್ಮೆ ಕಡಿಯಬೇಕಾಗುತ್ತದೆ. ಅಭಿವೃದ್ಧಿ ಕಾರ್ಯಗಳಿಗೆ ಗಿಡ–ಮರಗಳನ್ನು ತೆರವುಗೊಳಿಸಬೇಕಾಗುತ್ತದೆ. ಮರಗಳ ಸಮಗ್ರ ಮಾಹಿತಿ ಲಭ್ಯವಿದ್ದರೆ ಅವುಗಳನ್ನು ಕಡಿಯುವುದಕ್ಕೆ ಅನುಮತಿ ನೀಡುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ತೀರ್ಮಾನ ತೆಗೆದುಕೊಳ್ಳುವುದು ಸುಲಭ’ ಎಂದು ಅವರು ವಿವರಿಸಿದರು.
ಮರಗಳ ಮಾಹಿತಿ ಕಲೆ ಹಾಕುವ ಸಮೀಕ್ಷೆಯನ್ನು ಪ್ರತಿಷ್ಠಾನವು ಸ್ವಯಂ ಸೇವಕರ ಹಾಗೂ ಜನರ ನೆರವಿನಿಂದಲೇ ನಡೆಸಿದೆ. ಈ ಸಲುವಾಗಿ ವಿಶೇಷ ಆ್ಯಪ್ ತಯಾರಿಸುವ ವೆಚ್ಚವನ್ನೂ ಪ್ರತಿಷ್ಠಾನವೇ ಭರಿಸಿದೆ.
‘ಪಾಲಿಕೆಯಿಂದಲೇ ನಡೆಯಲಿ ಸಮೀಕ್ಷೆ’
‘ನಾವು ನಗರದ ಹಸಿರನ್ನು ಉಳಿಸುವ ಕಾಳಜಿಯಿಂದ ಪಟ್ಟಾಭಿರಾಮನಗರದ ವಾರ್ಡ್‌ನ ಗಿಡಮರಗಳ ಮಾಹಿತಿ ಕಲೆಹಾಕಿದ್ದೇವೆ. ನಾವು ಅಭಿವೃದ್ಧಿಪಡಿಸಿರುವ ಆ್ಯಪ್ ಬಳಸಿ ಪಾಲಿಕೆ ವತಿಯಿಂದ ಎಲ್ಲ ವಾರ್ಡ್‌ಗಳ ಸಸ್ಯಗಳ ಸಮೀಕ್ಷೆ ನಡೆಸಬೇಕು. ಈ ಆ್ಯಪ್ ಬಳಸಿ ಕೇವಲ 20 ತಿಂಗಳಿನಲ್ಲಿ ಎಲ್ಲ ವಾರ್ಡ್‌ಗಳ ಮರಗಳ ಸಮೀಕ್ಷೆ ಪೂರ್ಣಗೊಳಿಸಬಹುದು. ಇದರಿಂದ ಎಲ್ಲೆಲ್ಲಿ ಗಿಡ ನೆಟ್ಟು ಬೆಳೆಸಲು ಅವಕಾಶ ಇದೆ ಎಂಬ ಮಾಹಿತಿಯೂ ಲಭಿಸುತ್ತದೆ. ನಗರದ ಸಮಗ್ರ ಹಸಿರೀಕರಣಕ್ಕೆ ವ್ಯವಸ್ಥಿತವಾಗಿ ಯೋಜನೆ ರೂಪಿಸಲು ಇದು ನೆರವಾಗುತ್ತದೆ’ ಎಂದು ವಿಜಯ್ ನಿಶಾಂತ್ ತಿಳಿಸಿದರು.
*
ಜನರನ್ನು ಒಗ್ಗೂಡಿಸುವ ಹಾಗೂ ನಮ್ಮದು ಎಂಬ ಭಾವನೆ ಮೂಡಿಸುವ ಮಹಾನ್ ಶಕ್ತಿ ಗಿಡಮರಗಳಿಗಿದೆ. ನಾವು ತೋರಿಸುವ ಪ್ರೀತಿಗೆ ಅವುಗಳೂ ಸ್ಪಂದಿಸುತ್ತವೆ.
-ಎಂ.ಎನ್.ವೆಂಕಟಾಚಲಯ್ಯ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ
*
ಸಿಸಿಟಿವಿ ಕ್ಯಾಮೆರಾ ಸುರಕ್ಷತೆ ಕಾಪಾಡಲು ಹೇಗೆ ನೆರವಾಗುತ್ತದೆಯೋ, ಅದೇ ರೀತಿ ವೃಕ್ಷ ಪ್ರತಿಷ್ಠಾನ ಕಲೆಹಾಕಿರುವ ಸಸ್ಯಗಳ ಮಾಹಿತಿ ಹಸಿರು ಸಂರಕ್ಷಣೆಯಲ್ಲಿ ಮಹತ್ತರ ಪಾತ್ರ ವಹಿಸಲಿದೆ.
-ಸೌಮ್ಯಾ ರೆಡ್ಡಿ, ಶಾಸಕಿ, ಜಯನಗರ ಕ್ಷೇತ್ರ
**
ಅಂಕಿ ಅಂಶ
3,500-ಪಟ್ಟಾಭಿರಾಮನಗರ ವಾರ್ಡ್‌ನಲ್ಲಿ ಸಮೀಕ್ಷೆಗೆ ಒಳಪಡಿಸಿದ ಮರಗಳು
85 -ಪ್ರಭೇದಗಳ ಸಸ್ಯಗಳನ್ನು ಗುರುತಿಸಲಾಗಿದೆ
3.5 ಚ.ಕಿ.ಮೀ -ಸಮೀಕ್ಷೆ ನಡೆಸಿದ ಪ್ರದೇಶದಲ್ಲಿ ವಿಸ್ತೀರ್ಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.