ADVERTISEMENT

ಆಸ್ತಿ ತೆರಿಗೆ ರಿಯಾಯಿತಿ: ಪ್ರಸ್ತಾವ ಸಲ್ಲಿಸಲು ಸೂಚನೆ

ಹೋಟೆಲ್‌, ರೆಸಾರ್ಟ್‌, ರೆಸ್ಟೊರೆಂಟ್‌ಗಳ ಆಸ್ತಿ ತೆರಿಗೆಯಲ್ಲಿ ಶೇ 50 ಕಡಿತ?

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2021, 16:46 IST
Last Updated 18 ನವೆಂಬರ್ 2021, 16:46 IST
ಬಿಬಿಎಂಪಿ
ಬಿಬಿಎಂಪಿ   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಹೋಟೆಲ್‌, ರೆಸಾರ್ಟ್‌, ರೆಸ್ಟೋರೆಂಟ್‌ಗಳು ಮತ್ತು ಮನರಂಜನಾ ಪಾರ್ಕ್‌ಗಳಿಗೆ 2021–22ನೇ ಸಾಲಿನ ಆಸ್ತಿ ತೆರಿಗೆಯಲ್ಲಿ ಶೇ 50ರಷ್ಟು ರಿಯಾಯಿತಿ ನೀಡುವ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆಯು ಬಿಬಿಎಂಪಿಗೆ ಸೂಚನೆ ನೀಡಿದೆ.

ಹೋಟೆಲ್‌, ರೆಸಾರ್ಟ್‌, ರೆಸ್ಟೋರೆಂಟ್‌ಗಳು ಮತ್ತು ಮನರಂಜನಾ ಪಾರ್ಕ್‌ಗಳು ಕೋವಿಡ್‌ ಲಾಕ್‌ಡೌನ್‌ನಿಂದಾಗಿ ನಷ್ಟ ಅನುಭವಿಸಿದ್ದರಿಂದ ಇವುಗಳಿಗೆ ಆಸ್ತಿ ತೆರಿಗೆಯಲ್ಲಿ ಶೇ 50ರಷ್ಟು ರಿಯಾಯಿತಿ ನೀಡುವ ಕುರಿತು ಪ್ರವಾಸೋದ್ಯಮ ಇಲಾಖೆಯು ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ 2021ರ ಜೂನ್ 16ರಂದು ಹಾಗೂ ಜೂನ್‌ 24ರಂದು ನಡೆದ ಸಭೆಗಳಲ್ಲಿ ಈ ಕುರಿತು ಚರ್ಚೆ ನಡೆದಿದೆ. ಈ ಕುರಿತು ಮಾರ್ಗಸೂಚಿ ರೂಪಿಸಲು ನಗರಾಭಿವೃದ್ಧಿ ಇಲಾಖೆಯನ್ನು ಪ್ರವಾಸೋದ್ಯಮ ನಿರ್ದೇಶಕರು ಕೋರಿದ್ದರು.

ಬಿಬಿಎಂಪಿ ಹೊರತು ಇತರ ಪ್ರದೇಶಗಳಲ್ಲಿನ ಹೋಟೆಲ್‌, ಅತಿಥಿಗೃಹ, ಹೋಂಸ್ಟೇ, ರೆಸ್ಟೋರೆಂಟ್‌, ಲಾಡ್ಜ್‌, ಫಾರ್ಮ್ ಸ್ಟೇ, ಹೆರಿಟೇಜ್‌ ಹೋಂ, ಅಪಾರ್ಟ್‌ಮೆಂಟ್ ಹೋಟೆಲ್‌, ಟೈಂ ಷೇರ್‌ ಘಟಕ, ಹೌಸ್‌ ಬೋಟ್‌, ಟೆಂಟ್‌ ಹೌಸ್‌ ಸೇರಿ ಒಟ್ಟು 10,970 ಉದ್ದಿಮೆಗಳಿವೆ. 2021–22ನೇ ಸಾಲಿನಲ್ಲಿ ಇವುಗಳಿಂದ ₹36.54 ಕೋಟಿ ಆಸ್ತಿ ತೆರಿಗೆ ಹಾಗು ಶೇ 26 ಸೆಸ್‌ ಮೊತ್ತ ₹ 9.49 ಕೋಟಿ ಸಂಗ್ರಹವಾಗಬೇಕಿದೆ. ತೆರಿಗೆ ಮತ್ತು ಸೆಸ್ ಮೊತ್ತದಲ್ಲಿ ಶೇ 50ರಷ್ಟು ರಿಯಾಯಿತಿ ನೀಡಿದರೆ ಸ್ಥಳೀಯ ಸಂಸ್ಥೆಗಳು ₹ 23.02 ಕೋಟಿಯನ್ನು ನಷ್ಟ ಅನುಭವಿಸಬೇಕಾಗುತ್ತದೆ.

ADVERTISEMENT

ರಾಜ್ಯದ ಹೋಟೆಲ್‌, ಹೋಟೆಲ್‌, ರೆಸಾರ್ಟ್‌, ರೆಸ್ಟೋರೆಂಟ್‌ಗಳು ಮತ್ತು ಮನರಂಜನಾ ಪಾರ್ಕ್‌ಗಳ ಆಸ್ತಿ ತೆರಿಗೆ ಸಂಗ್ರಹದಿಂದ ವರ್ಷಕ್ಕೆ ₹ 100 ಕೋಟಿ ಸಂಗ್ರಹವಾಗುತ್ತದೆ. ಇದರಲ್ಲಿ ಬಿಬಿಎಂಪಿ ವ್ಯಾಪ್ತಿಯ ಪಾಲು ₹ 80 ಕೋಟಿ ಎಂದು ಅಂದಾಜಿಸಲಾಗಿದೆ. ಈ ಕುರಿತು ನಿಖರ ವಿವರಗಳೊಂದಿಗೆ ಅಭಿಪ್ರಾಯ ನೀಡುವಂತೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಅವರು ಬಿಬಿಎಂಪಿ ಮುಖ್ಯ ಆಯುಕ್ತರ ಗೌರವ ಗುಪ್ತ ಅವರಿಗೆ ಇದೇ 17ರಂದು ಬರೆದ ಪತ್ರದಲ್ಲಿ ಸೂಚಿಸಿದ್ದಾರೆ.

ಅಂಕಿ ಅಂಶ

1,081

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಸಾಮಾನ್ಯ ಹೋಟೆಲ್‌ಗಳು

49

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ತಾರಾ ಹೋಟೆಲ್‌ಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.