ADVERTISEMENT

ಆಸ್ತಿ ತೆರಿಗೆ ಪಾವತಿ: ಮೇ ಅಂತ್ಯದವರೆಗೂ ರಿಯಾಯಿತಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 21:19 IST
Last Updated 7 ಏಪ್ರಿಲ್ 2020, 21:19 IST

ಬೆಂಗಳೂರು: ಆಸ್ತಿ ತೆರಿಗೆ ಪಾವತಿ ವೇಳೆ ಶೇ 5ರಷ್ಟು ರಿಯಾಯಿತಿ ಪಡೆಯುವ ಅವಕಾಶವನ್ನು ಮೇ 31ರವರೆಗೆ
ವಿಸ್ತರಿಸಲಾಗಿದೆ. ಬಿಬಿಎಂಪಿ ಹೊರತುಪಡಿಸಿ ಉಳಿದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ತೆರಿಗೆದಾರರಿಗೆ ಈ ಸೌಲಭ್ಯ ಸಿಗಲಿದೆ.

ಆಸ್ತಿ ತೆರಿಗೆಯನ್ನು ಏಪ್ರಿಲ್‌ ತಿಂಗಳಲ್ಲೇ ಪಾವತಿಸುವವರಿಗೆ ಪ್ರತಿವರ್ಷವೂ ಶೇ 5ರಷ್ಟು ರಿಯಾಯಿತಿ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಕೊರೊನಾ ಸೋಂಕು ಹಬ್ಬುವುದನ್ನು ತಡೆಯಲು ಇದೇ 14ರವರೆಗೆ ಲಾಕ್‌ಡೌನ್‌ ಜಾರಿಯಲ್ಲಿದೆ. ಜನರು ಮನೆಯಿಂದ ಹೊರಬಾರದಂತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರ ಸೂಚಿಸಿದೆ. ಆಸ್ತಿ ತೆರಿಗೆ ಪಾವತಿಸಲು ಜನ ಹೆಚ್ಚಿನ ಸಂಖ್ಯೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಕಚೇರಿಗಳಿಗೆ ಭೇಟಿ ನೀಡಿದರೆ ಜನಜಂಗುಳಿ ಉಂಟಾಗುವ ಅಪಾಯವೂ ಇದೆ. ಹಾಗಾಗಿ ತೆರಿಗೆಯಲ್ಲಿ ರಿಯಾಯಿತಿ ಪಡೆಯುವ ಅವಧಿ ವಿಸ್ತರಿಸುವಂತೆ ಅನೇಕ ಸ್ಥಳೀಯ ಸಂಸ್ಥೆಗಳು ಪೌರಾಡಳಿತ ನಿರ್ದೇಶನಾಲಯವನ್ನು ಕೋರಿದ್ದವು. ಈ ಹಿನ್ನೆಲೆಯಲ್ಲಿ ನಿರ್ದೇಶನಾಲಯವು ಮಂಗಳವಾರ ಈ ಕುರಿತು ಆದೇಶ ಹೊರಡಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲೂ ಮೇ 31ರ ವರೆಗೆ ಆಸ್ತಿ ತೆರಿಗೆ ಪಾವತಿಸುವವರಿಗೆ ರಿಯಾಯಿತಿ ನೀಡಬೇಕು ಎಂಬ ಬೇಡಿಕೆ ಇದೆ. ಆದರೆ, ಈ ಕುರಿತು ಪಾಲಿಕೆ ಆಯುಕ್ತರು ಇನ್ನೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.