ADVERTISEMENT

ಖಾಸಗಿ ಬಸ್ ಚಾಲಕರ ಪರವಾನಗಿ ರದ್ಧತಿಗೆ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 26 ಜನವರಿ 2024, 22:51 IST
Last Updated 26 ಜನವರಿ 2024, 22:51 IST
   

ಬೆಂಗಳೂರು: ಮದ್ಯ ಕುಡಿದು ಬಸ್ ಚಲಾಯಿಸುತ್ತಿದ್ದ 9 ಚಾಲಕರನ್ನು ಪತ್ತೆ ಮಾಡಿರುವ ಸಂಚಾರ ಪೊಲೀಸರು, ಅವರೆಲ್ಲರ ಚಾಲನಾ ಪರವಾನಗಿ ರದ್ದುಪಡಿಸಲು ಸಾರಿಗೆ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದಾರೆ.

ಪಾನಮತ್ತರಾಗಿ ವಾಹನ ಚಾಲನೆ ಮಾಡುವುದರಿಂದ ನಗರದಲ್ಲಿ ಅಪಘಾತಗಳು ಸಂಭವಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಪಾನಮತ್ತ ಚಾಲಕರ ಪತ್ತೆಗಾಗಿ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮೆಜೆಸ್ಟಿಕ್, ಯಶವಂತಪುರ ಹಾಗೂ ಇತರೆ ಪ್ರದೇಶಗಳಲ್ಲಿ ಗುರುವಾರ ರಾತ್ರಿ 8 ಗಂಟೆಯಿಂದ 11.30 ಗಂಟೆಯವರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಖಾಸಗಿ ಬಸ್‌ಗಳ 881 ಚಾಲಕರನ್ನು ತಪಾಸಣೆಗೆ ಒಳಪಡಿಸಿದರು. ಈ ಪೈಕಿ 9 ಚಾಲಕರು ಮದ್ಯ ಕುಡಿದಿದ್ದು ಕಂಡುಬಂತು.

ADVERTISEMENT

‘ನಗರದಿಂದ ಹೊರ ಜಿಲ್ಲೆ ಹಾಗೂ ರಾಜ್ಯಗಳಿಗೆ ಹೋಗುವ ಖಾಸಗಿ ಬಸ್‌ಗಳ ಚಾಲಕರು ಮದ್ಯ ಕುಡಿದು ಚಾಲನೆ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದಿತ್ತು. ವಿಶೇಷ ಕಾರ್ಯಾಚರಣೆ ನಡೆಸಿದಾಗ 9 ಚಾಲಕರು ಸಿಕ್ಕಿಬಿದ್ದರು. ಇವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಜೊತೆಗೆ, ಎಲ್ಲರ ಚಾಲನಾ ಪರವಾನಗಿ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್ ಎಂ.ಎನ್. ಅನುಚೇತ್ ತಿಳಿಸಿದರು.

‘2023ರಲ್ಲಿ ಖಾಸಗಿ ಬಸ್‌ಗಳಿಂದ 24 ಕಡೆ ಅಪಘಾತಗಳು ಸಂಭವಿಸಿದ್ದು, ಸಾವು–ನೋವುಗಳು ಉಂಟಾಗಿವೆ. ರಸ್ತೆ ಸುರಕ್ಷತೆ ಹೆಚ್ಚಿಸಲು ಇಂಥ ವಿಶೇಷ ಕಾರ್ಯಾಚರಣೆ ಮುಂದುವರಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.