ADVERTISEMENT

ಪುರುಷರಲ್ಲಿ ಪ್ರಾಸ್ಟೇಟ್‌ ಕ್ಯಾನ್ಸರ್‌ ಹೆಚ್ಚಳ

2 ಸಾವಿರಕ್ಕೂ ಅಧಿಕ ಜನರಲ್ಲಿ ಮೂತ್ರಕೋಶದ ಕಂಠ ಕ್ಯಾನ್ಸರ್ * ಬಿಪಿಎಲ್‌ ಕುಟುಂಬದ ರೋಗಿಗಳಿಗೆ ಉಚಿತ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2020, 23:14 IST
Last Updated 11 ಮಾರ್ಚ್ 2020, 23:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬದಲಾದ ಜೀವನ ಶೈಲಿ ಹಾಗೂ ಆನುವಂಶಿಕ ಕಾರಣದಿಂದ ಬರುವ ಮೂತ್ರಕೋಶದ ಕಂಠ ಕ್ಯಾನ್ಸರ್ (ಪ್ರಾಸ್ಟೇಟ್‌ ಕ್ಯಾನ್ಸರ್‌) ಪ್ರಕರಣಗಳ ಸಂಖ್ಯೆ ನಗರದಲ್ಲಿ ಹೆಚ್ಚುತ್ತಿದೆ. ಹಾಗಾಗಿ ಈ ಮಾದರಿಯ ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ಒದಗಿಸಲು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಬ್ರಾಕಿಥೆರಪಿ ಘಟಕವನ್ನು ಅಂತರರಾಷ್ಟ್ರೀಯ ದರ್ಜೆಗೆ ಏರಿಸಲಾಗಿದೆ.

ಪ್ರಾಸ್ಟೇಟ್‌ ಕ್ಯಾನ್ಸರ್‌ ನಾಲ್ಕು ಹಂತಗಳಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲವರಲ್ಲಿ ಎರಡು ಹಂತಗಳಲ್ಲಿ ಕಾಣಿಸಿಕೊಂಡರೆ, ಮತ್ತೆ ಕೆಲವರಲ್ಲಿ ಮೂರನೇ ಹಂತ ತಲುಪಿದಾಗ ಕಂಡು ಬರುತ್ತದೆ. ಪದೆ ಪದೇ ಮೂತ್ರ ವಿಸರ್ಜನೆ, ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳು
ವುದು, ಕಾಲು ನೋವು ಬರುವುದು ಈ ರೋಗದ ಲಕ್ಷಣಗಳು. ಈ ಕಾಯಿಲೆ 60 ವರ್ಷ ಮೇಲ್ಪಟ್ಟ ಶೇ 40 ರಷ್ಟು ಮಂದಿಯಲ್ಲಿ ಕಂಡು ಬರುತ್ತಿದೆ. ಶೇ 80 ರಷ್ಟು ಮಂದಿ 3 ಮತ್ತು 4ನೇ ಹಂತ ತಲುಪಿದಾಗ ತಪಾಸಣೆಗೆ ದಾಖಲಾಗುತ್ತಿದ್ದಾರೆ. 3ನೇ ಹಂತ ತಲುಪಿದ್ದರೆ ಸರ್ಜರಿ ಹಾಗೂ ರೇಡಿಯೇಷನ್‌ ಎರಡೂ ಮಾಡಿಸಬೇಕಾಗುತ್ತದೆ. 4ನೇ ಹಂತದಲ್ಲಿದ್ದರೆ ಹಾರ್ಮೋನ್ ಥೆರಪಿ ಮಾಡುವ ಮೂಲಕ ನಿಯಂತ್ರಣಕ್ಕೆ ತರಬಹುದು. ಜೊತೆಗೆ ಕಿಮೋಥೆರಪಿಯನ್ನೂ ಮಾಡಬೇಕಾಗುತ್ತದೆ.

ರಾಜ್ಯದಲ್ಲಿ 2019ರಲ್ಲಿ 2,188 ಮಂದಿಯಲ್ಲಿ ಪ್ರಾಸ್ಟೇಟ್‌ ಕ್ಯಾನ್ಸರ್‌ ಪತ್ತೆಯಾಗಿದೆ. ಅದರಲ್ಲಿ 382 ಪ್ರಕರಣಗಳು ನಗರದಲ್ಲೇ ವರದಿಯಾಗಿವೆ. ಈ ರೀತಿ ಸಮಸ್ಯೆಯ ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಅತ್ಯಾಧುನಿಕ ಬ್ರಾಕಿಥೆರಪಿ ಯಂತ್ರ ಅಳವಡಿಸಲಾಗಿದೆ. ಬಾಬಾ ಆಟೋಮಿಕ್ ರಿಸರ್ಚ್‌ ಸೆಂಟರ್ ಸಹಯೋಗದಲ್ಲಿ ಘಟಕ ನಿರ್ವಹಣೆ ಮಾಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ₹ 3 ಲಕ್ಷದಿಂದ ₹ 4 ಲಕ್ಷ ಪಾವತಿಸಬೇಕಾದ ಈ ಚಿಕಿತ್ಸೆಯನ್ನು ಕಿದ್ವಾಯಿ‌ಯಲ್ಲಿ ಬಿಪಿಎಲ್‌ ಕುಟುಂಬದ ರೋಗಿಗಳಿಗೆ ಉಚಿತವಾಗಿ ನೀಡಲಾಗುತ್ತಿದೆ.

ADVERTISEMENT

ಆಂಕೋಲಾಜಿಸ್ಟ್‌ಗಳಾದ ಡಾ.ಲೋಕೇಶ್, ಡಾ.ತನ್ವೀರ್, ಡಾ.ಸಿದ್ದಣ್ಣ, ಡಾ.ನವೀನ್ ಮತ್ತು ಡಾ.ತೇಜಸ್ವಿನಿ ಈ ಚಿಕಿತ್ಸೆಯನ್ನು ನೀಡುತ್ತಿದ್ದಾರೆ.

ಚಿಕಿತ್ಸೆ ದಿನವೇ ಬಿಡುಗಡೆ: ‘ಕ್ಯಾನ್ಸರ್ ಪೀಡಿತ ಭಾಗದ ಮೇಲೆ ವಿಕಿರಣಗಳನ್ನು ಹಾಯಿಸಿ, ಬ್ರಾಕಿಥೆರಪಿ ಚಿಕಿತ್ಸೆ ನೀಡಲಾಗುತ್ತದೆ. ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಸಂಭವಿಸುವುದಿಲ್ಲ. ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿಯು ಆಸ್ಪತ್ರೆಗೆ ತೆರಳಿ, ಏಳರಿಂದ ಎಂಟು ವಾರಗಳು ನಿರಂತರ ರೇಡಿಯೇಷನ್‌ ಥೆರಪಿ ‍ಪಡೆದುಕೊಳ್ಳಬೇಕಾಗಿದೆ. ಆದರೆ, ಬ್ರಾಕಿಥೆರಪಿ ಚಿಕಿತ್ಸೆಯನ್ನು ಆಸ್ಪತ್ರೆಯ ಕಾರ್ಯಾಚರಣೆ ಕೊಠಡಿಯಲ್ಲಿಯೇ ನೀಡಲಾಗುತ್ತದೆ. ರೋಗಿಯು ಅದೇ ದಿನ ಆಸ್ಪತ್ರೆಯಿಂದಲೂ ಬಿಡುಗಡೆ ಹೊಂದಬಹುದು’ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ. ರಾಮಚಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.