ಕೆ.ಆರ್.ಪುರ: ಮಿಟ್ಟಗಾನಹಳ್ಳಿ- ಕಣ್ಣೂರು ಕಲ್ಲಿನ ಕ್ವಾರಿಯಲ್ಲಿ ನಗರದ ತ್ಯಾಜ್ಯವನ್ನು ಸುರಿಯುವುದನ್ನು ವಿರೋಧಿಸಿ ಕಣ್ಣೂರು ಮತ್ತು ಮಿಟ್ಟಗಾನಹಳ್ಳಿ, ಬಂಡೆ ಹೊಸೂರು, ಕಾಡುಸೊಣ್ಣಪ್ಪನಹಳ್ಳಿ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು. ಕಲ್ಲಿನ ಕ್ವಾರಿಯೊಳಗೆ ಕಸದ ವಾಹನಗಳು ಪ್ರವೇಶಿಸದಂತೆ ರಸ್ತೆಗೆ ಅಡ್ಡಲಾಗಿ ಕಲ್ಲು, ಮಣ್ಣು ಸುರಿದು ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಿಬಿಎಂಪಿ ಅವೈಜ್ಞಾನಿಕವಾಗಿ ಕಸ ಸುರಿಯುತ್ತಿದ್ದು ಕಸದಿಂದ ರಾಸಾಯನಿಕ ಉತ್ಪತ್ತಿಯಾಗಿ ಸುತ್ತಮುತ್ತಲಿನ ಸುಮಾರು ಹತ್ತಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕೊಳವೆಬಾವಿ, ಕೆರೆ, ಕುಂಟೆಗಳಲ್ಲಿ ಕಲುಷಿತ ನೀರು ಸೇರುತ್ತಿದೆ. ಜಾನುವಾರುಗಳು ಸಾವಿಗೀಡಾಗಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಮಿಟ್ಟಗಾನಹಳ್ಳಿ ಕಣ್ಣೂರು ಕಲ್ಲುಕ್ವಾರಿಯಲ್ಲಿ 2016 ರಿಂದಲೂ ವೈಜ್ಞಾನಿಕವಾಗಿ ತ್ಯಾಜ್ಯ ಸುರಿಯುವುದಾಗಿ ಗ್ರಾಮಸ್ಥರ ಸಭೆಯಲ್ಲಿ ಹೇಳಲಾಗಿತ್ತು. ಆದರೆ ಕಸವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುತ್ತಿಲ್ಲ. ಅಲ್ಲಿ ಉತ್ಪತ್ತಿಯಾಗುತ್ತಿರುವ ಅಪಾಯಕಾರಿ ರಾಸಾಯನಿಕವನ್ನು ಸಂಸ್ಕರಣೆ ಮಾಡುತ್ತಿಲ್ಲ. ತ್ಯಾಜ್ಯದಿಂದಾಗಿ ಜೀವನ ನರಕಯಾತನೆ ಅನುಭವಿಸುವಂತಾಗಿದೆ ಎಂದು ದೂರಿದರು.
ಶಾಶ್ವತ ಪರಿಹಾರ ಭರವಸೆ ನೀಡುವವರಿಗೊ ಮಿಟ್ಟಗಾನಹಳ್ಳಿ ಕಸ ಸುರಿಯಲು ಅವಕಾಶ ನೀಡುವುದಿಲ್ಲ. ಸಮಸ್ಯೆಗಳನ್ನು ತ್ವರಿತವಾಗಿ ಸರಿಪಡಿಸಬೇಕು. ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್, ಬಿಬಿಎಂಪಿ ಆಯುಕ್ತರು ಎಂಟು ತಿಂಗಳ ಹಿಂದೆ ಭೇಟಿನೀಡಿ ಸಮಸ್ಯೆಗೆ ಪರಿಹಾರ ದೊರಕಿಸುವ ಭರವಸೆ ನೀಡಿದ್ದರು. ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ ಒದಗಿಸುವ ಆಶ್ವಾಸನೆ ಕೊಟ್ಟಿದ್ದರು. ಯಾವುದೂ ಈಡೇರಿಸಿಲ್ಲ ಎಂದು ಕಣ್ಣೂರು ಗ್ರಾಮ ಪಂಚಾಯತಿ ಅಧ್ಯಕ್ಷ ಅಶೋಕ್ ಅಸಮಾಧಾನ ವ್ಯಕ್ತಪಡಿಸಿದರು.
ಕಣ್ಣೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಲಲಿತ ದೇವರಾಜ್, ಸದಸ್ಯರಾದ ಬೈರೇಗೌಡ, ಚೈತ್ರಾ ರಾಘವೇಂದ್ರ, ಶೋಭಾ ಪ್ರಕಾಶ್, ಯಶೋಧಮ್ಮ ಶ್ರೀನಿವಾಸ್, ಕಲಾವತಿ ಶ್ರೀರಾಮ್, ಶಶಿಕಲಾ ಹರೀಶ್ ಮುಖಂಡರಾದ ಮೋಹನ್ ರೆಡ್ಡಿ, ಚಿಕ್ಕಗುಬ್ಬಿ ಹರೀಶ್ ಬ್ರಹ್ಮಾನಂದರೆಡ್ಡಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.