ADVERTISEMENT

ಬೆಂಗಳೂರು: ಉದ್ಯಮ ಸಮಾವೇಶದಲ್ಲಿ ಕನೇರಿ ಸ್ವಾಮೀಜಿ ವಿರುದ್ದ ಘೋಷಣೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 23:00 IST
Last Updated 30 ಜನವರಿ 2026, 23:00 IST
<div class="paragraphs"><p>ಕನೇರಿ ಶ್ರೀ</p></div>

ಕನೇರಿ ಶ್ರೀ

   

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ವೀರಶೈವ ಲಿಂಗಾಯತ ಜಾಗತಿಕ ಉದ್ಯಮ ಸಮಾವೇಶದಲ್ಲಿ ಮಹಾರಾಷ್ಟ್ರ ಕನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಅವರ ವಿರುದ್ದ ಧಿಕ್ಕಾರ ಕೂಗಿದ ಘಟನೆ ಶುಕ್ರವಾರ ನಡೆಯಿತು.

ಅಂತರರಾಷ್ಟ್ರೀಯ ಲಿಂಗಾಯತ ಯೂತ್ ಫೋರಂ‌ ಆಯೋಜಿಸಿರುವ ಸಮಾವೇಶದಲ್ಲಿ ಸಾವಯವ ಕೃಷಿ ಕುರಿತು ಉಪನ್ಯಾಸ ನೀಡಲು ಸ್ವಾಮೀಜಿ ಬಂದಿದ್ದರು. ಅವರು ಭಾಷಣ ಆರಂಭಿಸುತ್ತಿದ್ದಂತೆ ಕೆಲವರು ಸ್ವಾಮೀಜಿ ವಿರುದ್ದ ಘೋಷಣೆ ಕೂಗಿದರು.

ADVERTISEMENT

ಈ ವೇಳೆ ಸ್ವಾಮೀಜಿ ಭಾಷಣ ಮುಂದುವರಿಸಿ ಸರ್ವಜ್ಞರ ವಚನವೊಂದನ್ನು ಉಲ್ಲೇಖಿಸಿದರು. ಆಗ ಧಿಕ್ಕಾರ ಘೋಷಣೆ ಜೋರಾಯಿತು.

ಪ್ರತಿಭಟನೆಗೆ ಮುಂದಾದವರನ್ನು ಹೊರಕ್ಕೆ ಹೋಗುವಂತೆ ಸಂಘಟಕರು ಹಾಗೂ ಪೊಲೀಸರು ಸೂಚಿಸಿದರು. ಆದರೂ ಘೋಷಣೆ ಕೂಗುವುದು ನಿಲ್ಲಿಸಲಿಲ್ಲ. ಆಗ ಕಾರ್ಯಕ್ರಮದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. 

‘ಸ್ವಾಮೀಜಿ ಅವರು ಬಸವ ಅನುಯಾಯಿಗಳನ್ನು ತಾಲಿಬಾನಿಗಳು ಎಂದು ಜರಿದಿದ್ದಾರೆ. ಲಿಂಗಾಯತ ಮಠಾಧೀಶರ ವಿರುದ್ದ ಅಶ್ಲೀಲ ಪದಗಳನ್ನು ಬಳಸಿದ್ದಾರೆ. ಅಂತಹವರನ್ನು ಸಮಾವೇಶಕ್ಕೆ ಕರೆಯಬೇಡಿ ಎಂದು ತಿಳಿಸಿದರೂ ಏಕೆ ಆಹ್ವಾನಿಸಿದ್ದೀರಿ’ ಎಂದು ಪ್ರತಿಭಟನನಿರತರು ಪ್ರಶ್ನಿಸಿದರು.‌

ಕೊನೆಗೆ 20ಕ್ಕೂ ಹೆಚ್ಚು ಮಂದಿಯನ್ನು ವೇದಿಕೆ ಮುಂಭಾಗದಿಂದ ಹೊರಕ್ಕೆ ಕಳುಹಿಸಿದ ನಂತರ ಕಾರ್ಯಕ್ರಮ ಮುಂದುವರಿಯಿತು. ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಅವರು ಕೃಷಿ ಕುರಿತ ಭಾಷಣವನ್ನು ಮುಗಿಸಿದರು.

‘ಮೊದಲೇ ತೀರ್ಮಾನಿಸಿದಂತೆ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಅವರನ್ನು ಕೃಷಿ ಕುರಿತಾಗಿ ಮಾತನಾಡಲು ಆಹ್ವಾನಿಸಿದ್ದೇವೆ. ಅವರು ಆಗಮಿಸಿ ಅದೇ ವಿಷಯದ ಕುರಿತು ಮಾತನಾಡುತ್ತಿದ್ದರು. ಕೆಲವರು ವಿರೋಧ ವ್ಯಕ್ತಪಡಿಸಿದ್ದು ಕಂಡು ಬಂದಿತು. ಅಂತವರನ್ನು ಹೊರಕ್ಕೆ ಕಳುಹಿಸಲಾಯಿತು’ ಎಂದು ಸಂಘಟಕರೊಬ್ಬರು ತಿಳಿಸಿದರು.

ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಅವರು ಮೂರು ತಿಂಗಳ ಹಿಂದೆ ಅವಹೇಳನಕಾರಿಯಾಗಿ ಮಾತನಾಡಿದ್ದರು ಎಂದು ವಿಜಯಪುರ ಜಿಲ್ಲೆಯಿಂದ ಗಡಿಪಾರು ಮಾಡಲಾಗಿತ್ತು. ಈ ವಿಚಾರ ಕೋರ್ಟ್‌ ಮೆಟ್ಟಿಲೇರಿತ್ತು. ಕೋರ್ಟ್‌ ಕೂಡ ಸಂಯಮದಿಂದ ಮಾತನಾಡುವಂತೆ ಸ್ವಾಮೀಜಿ ಅವರಿಗೆ ಸೂಚಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.