ADVERTISEMENT

ದುರ್ವಾಸನೆ ಸಹಿಸಲಾಗದು: ದಾಸನಪುರ ಎಪಿಎಂಸಿ ವಿರುದ್ಧ ಜನರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಮೇ 2025, 20:03 IST
Last Updated 26 ಮೇ 2025, 20:03 IST
ಎಪಿಎಂಸಿಯ ಕಸವನ್ನು ರಸ್ತೆಯಲ್ಲಿ ಹಾಕಿರುವುದರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಎಪಿಎಂಸಿಯ ಕಸವನ್ನು ರಸ್ತೆಯಲ್ಲಿ ಹಾಕಿರುವುದರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.   

ನೆಲಮಂಗಲ: ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಎಪಿಎಂಸಿ ತರಕಾರಿ ಮಾರುಕಟ್ಟೆಯ ದುರ್ವಾಸನೆಯಿಂದಾಗಿ ಸ್ಥಳೀಯರು ವಾಸಮಾಡಲು ಆಗುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಹುಸ್ಕೂರು ರಸ್ತೆಯಿಂದ ದಾಸನಪುರ ಎಪಿಎಂಸಿ ಮಾರುಕಟ್ಟೆಗೆ ಹೋಗುವ ಮುಖ್ಯ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಲಾಯಿತು. ಸ್ಥಳಕ್ಕೆ ಅಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸುವ ತನಕ ರಸ್ತೆ ತೆರವು ಮಾಡುವುದಿಲ್ಲ ಎಂದು ಪಟ್ಟುಹಿಡಿದರು. ಪೊಲೀಸರು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.

ಪ್ರತಿಭಟನಾ ಸ್ಥಳಕ್ಕೆ ಬಂದ ಎಪಿಎಂಸಿ ಕಾರ್ಯದರ್ಶಿ ದೊರೆಸ್ವಾಮಿ ಅವರಿಗೆ ಪ್ರತಿಭಟನಾಕಾರರು ರಸ್ತೆ ಪಕ್ಕದಲ್ಲಿರುವ ಕಸದ ಸಮಸ್ಯೆ, ಶೌಚಾಲಯಗಳ ದುಸ್ಥಿತಿ, ಟ್ರಾಫಿಕ್ ಸಮಸ್ಯೆ, ಕಸದಿಂದ ಜನರಿಗೆ ಆಗುತ್ತಿರುವ ಸಮಸ್ಯೆಗಳ ವಿವರಿಸಿದರು. ಜೊತೆಗೆ ಸ್ಥಳಕ್ಕೆ ಕರೆದುಕೊಂಡು ಹೋಗಿ ಪರಿಸ್ಥಿತಿಯನ್ನು ಮನವರಿಕೆ ಮಾಡಿದರು. 

ADVERTISEMENT

ಎಪಿಎಂಸಿಯವರು ಗ್ರಾಮ ಪಂಚಾಯಿತಿಗೆ ತೆರಿಗೆ ಕಟ್ಟುವ ವಿಚಾರ ನ್ಯಾಯಾಲಯದಲ್ಲಿದೆ. ನ್ಯಾಯಾಲಯದ ಆದೇಶವನ್ನು ಆಧರಿಸಿ ಮುಂದುವರಿಯಲಾಗುವುದು. ರಸ್ತೆಯಲ್ಲಿ ಸುರಿಯುತ್ತಿರುವ ಕಸ ತೆರವುಗೊಳಿಸಲಾಗುವುದು. ಕಸ ಸುರಿಯದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ದೊರೆಸ್ವಾಮಿ ಭರವಸೆ ನೀಡಿದರು.

ಹುಸ್ಕೂರು ಗ್ರಾಮಪಂಚಾಯಿತಿ ಅಧ್ಯಕ್ಷ ಡಾ.ಬಿ.ರಮೇಶ್ ‘ಸಮಸ್ಯೆಗಳನ್ನು ಶಾಸಕ ಎಸ್.ಆರ್.ವಿಶ್ವನಾಥ್ ಸಮ್ಮುಖದಲ್ಲಿ ಬಗೆಹರಿಸುವುದಾಗಿ ತಿಳಿಸಿದ್ದಾರೆ. ಬಗೆಹರಿಯದಿದ್ದರೆ ಉಗ್ರ ಪ್ರತಿಭಟನೆ ಮಾಡಲಾಗುವುದು’ ಎಂದು ತಿಳಿಸಿದರು.

ವರ್ತಕ ಗೋವಿಂದ, ಹುಸ್ಕೂರು ಗ್ರಾಮ ಪಂಚಾಯಿತಿ ಪಿಡಿಒ ರಾಜೇಶ್, ಮಾದನಾಯಕನಹಳ್ಳಿ ಇನ್‌ಸ್ಪೆಕ್ಟರ್‌ ಮುರುಳಿಧರ್, ಸಬ್‌ಇನ್‌ಸ್ಪೆಕ್ಟರ್‌ ಜಯಂತಿ, ಎಂಪಿಎಂಸಿ ಅಧಿಕಾರಿ ಸುಮಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.