ADVERTISEMENT

ಬೆಂಗಳೂರು: ನೈಸ್‌ ಕಂಪನಿ ದೌರ್ಜನ್ಯ ಖಂಡಿಸಿ ಪ್ರತಿಭಟನೆ 21ಕ್ಕೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 16:14 IST
Last Updated 16 ಆಗಸ್ಟ್ 2025, 16:14 IST
   

ಬೆಂಗಳೂರು: ನೈಸ್‌ ಕಂಪನಿಯ ದೌರ್ಜನ್ಯ ಖಂಡಿಸಿ ಇದೇ 21ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ಪ್ರಾಂತ ರೈತ ಸಂಘ ತಿಳಿಸಿದೆ. 

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ, ‘ಕಳಂಕಿತ ನೈಸ್‌ ಕಂಪನಿಗೆ ಯಾವುದೇ ರೀತಿಯ ಕಾಮಗಾರಿಗಳು ನಡೆಸದಂತೆ ಸರ್ಕಾರ ನಿರ್ಬಂಧಿಸಬೇಕು. ಬಿಎಂಐಸಿ ಯೋಜನೆಯಲ್ಲಿ ನೈಸ್‌ ಕಂಪನಿಯ ಪಾಲುದಾರಿಕೆಯನ್ನು ರದ್ದುಗೊಳಿಸಬೇಕು. ನೈಸ್‌ ಕಂಪನಿಯ ಭೂ ಸ್ವಾಧೀನ ಹಾಗೂ ರಸ್ತೆ ನಿರ್ಮಾಣದ ಹಗರಣಗಳ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ರೈತರ ಒಪ್ಪಿಗೆ ಇಲ್ಲದ, ರೈತರ ಗಮನಕ್ಕೂ ಬಾರದಂತೆ ಭೂ ಸ್ವಾಧೀನ ಮಾಡಿಕೊಂಡಿರುವ ಎಲ್ಲ ಪ್ರಕರಣಗಳನ್ನು ರದ್ದುಪಡಿಸಬೇಕು. ನೈಸ್‌ ಅಕ್ರಮದ ಕುರಿತು ಸದನ ಸಮಿತಿ ಮತ್ತು ಸಂಪುಟ ಉಪಸಮಿತಿಗಳ ಶಿಫಾರಸುಗಳನ್ನು ಜಾರಿಗೊಳಿಸಬೇಕು. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಹಾಗೂ ನೈಸ್‌ ಕಂಪನಿಯ ಅಕ್ರಮ ಮೈತ್ರಿಯಿಂದ ಹಗಲು ದರೋಡೆ ಮಾಡಿರುವ ಎಲ್ಲ ಹೆಚ್ಚುವರಿ ಭೂಮಿಯನ್ನು ವಾಪಸ್‌ ಪಡೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಭೂ ಸ್ವಾಧೀನ ಪ್ರಕಟಣೆ ಹಾಗೂ ಕೋರ್ಟ್‌ ತೀರ್ಪುಗಳ ಹೆಸರಿನಲ್ಲಿ ರೈತರ ಮೇಲಿನ ನೈಸ್‌ ಕಂಪನಿಯ ದಬ್ಬಾಳಿಕೆ ಹಾಗೂ ದೌರ್ಜನ್ಯವನ್ನು ನಿಲ್ಲಿಸಬೇಕು. ಟೋಲ್‌ ಸಂಗ್ರಹಿಸುತ್ತಿರುವ ರಸ್ತೆಗೆ ಭೂಮಿ ಕಳೆದುಕೊಂಡ ರೈತರಿಗೆ ಒಪ್ಪಂದದಂತೆ ಹೆಚ್ಚಿನ ಪರಿಹಾರ ಹಾಗೂ ನಿವೇಶನಗಳನ್ನು ನೀಡಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.