ADVERTISEMENT

ಪ್ರಾಣಿ ತ್ಯಾಜ್ಯ ಸಂಸ್ಕರಣೆ ಘಟಕ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 19:59 IST
Last Updated 25 ಆಗಸ್ಟ್ 2025, 19:59 IST
ಪ್ರಾಣಿ ತ್ಯಾಜ್ಯ ಸಂಸ್ಕರಣೆ ಘಟಕ ಉದ್ಘಾಟನೆಗೆ ಅಡ್ಡಿಪಡಿಸಲು ಮುಂದಾದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪೋಲಿಸರ ನಡುವೆ ಮಾತಿನ ಚಕಮಕಿ ನಡೆಯಿತು
ಪ್ರಾಣಿ ತ್ಯಾಜ್ಯ ಸಂಸ್ಕರಣೆ ಘಟಕ ಉದ್ಘಾಟನೆಗೆ ಅಡ್ಡಿಪಡಿಸಲು ಮುಂದಾದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪೋಲಿಸರ ನಡುವೆ ಮಾತಿನ ಚಕಮಕಿ ನಡೆಯಿತು   

ಕೆ.ಆರ್.ಪುರ: ಕಾಂಗ್ರೆಸ್‌ ಕಾರ್ಯಕರ್ತರ ವಿರೋಧದ ನಡುವೆ ಬಂಡೆ ಹೊಸೂರು ಗ್ರಾಮದಲ್ಲಿ ನಿರ್ಮಿಸಿರುವ ಪ್ರಾಣಿ ತ್ಯಾಜ್ಯ ಸಂಸ್ಕರಣೆ ಘಟಕವನ್ನು ಸೋಮವಾರ ಉದ್ಘಾಟಿಸಲಾಯಿತು. 

ಘಟಕ ಉದ್ಘಾಟನೆ ವೇಳೆ ಶಾಸಕಿ ಮಂಜುಳಾ ಲಿಂಬಾವಳಿ, ಮಾಜಿ ಶಾಸಕ ಅರವಿಂದ ಲಿಂಬಾವಳಿಗೆ  ಕಾರ್ಯಕರ್ತರು ಅಡ್ಡಿಪಡಿಸಲು ಯತ್ನಿಸಿದರು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ, ಸಮಾಧಾನ ಪಡಿಸಿದರು.  

ಮಹದೇವಪುರ ಕ್ಷೇತ್ರದ ಕಣ್ಣೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಂಡೆ ಹೊಸೂರು ಗ್ರಾಮದಲ್ಲಿ ಬಿಬಿಎಂಪಿ ಸಹಯೋಗದಲ್ಲಿ ಬನಾ ಇಕೋ ವರ್ಕ್ ಸಂಸ್ಥೆ ನಿರ್ಮಿಸಿರುವ ಪ್ರಾಣಿ ಸಂಸ್ಕರಣೆ ಘಟಕವನ್ನು ಗ್ರಾಮ ಪಂಚಾಯಿತಿಯಿಂದ ಅಧಿಕೃತವಾಗಿ ಅನುಮತಿ ಪಡೆಯದೆ ನಿರ್ಮಿಸಲಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ದೂರಿದರು.

ADVERTISEMENT

‘ಈಗಾಗಲೇ ಪಕ್ಕದಲ್ಲಿಯೇ ಇರುವ ಮಿಟ್ಟಗಾನಹಳ್ಳಿ- ಕಣ್ಣೂರು ಕಸ ವಿಲೇವಾರಿ ಘಟಕದಿಂದ ಅನೇಕ ಸಮಸ್ಯೆಗಳು ಉದ್ಬವವಾಗಿವೆ. ಕಸದಿಂದ ಉತ್ಪತ್ತಿಯಾಗುವ ವಿಷಯುಕ್ತ ರಾಸಾಯನಿಕದಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ಜಲಮೂಲಗಳಿಗೆ ಕಂಟಕ ಎದುರಾಗಿದೆ’ ಎಂದು ಕಾಂಗ್ರೆಸ್ ಮುಖಂಡ ಬಿದರಹಳ್ಳಿ ವರುಣ್ ಆಕ್ರೋಶ ವ್ಯಕ್ತಪಡಿಸಿದರು.

‘ಅಧಿಕಾರಿಗಳಿಗೆ ಜನರ ಬಗ್ಗೆ ಕಾಳಜಿ ಇಲ್ಲದಂತಾಗಿದೆ. ಪಂಚಾಯಿತಿ ಅಧಿಕಾರಿಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಗ್ರಾಮ ಪಂಚಾಯಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳದೆ ಘಟಕ ನಿರ್ಮಿಸಲಾಗಿದೆ’ ಎಂದು ಕಾಂಗ್ರೆಸ್ ಮುಖಂಡ ಕಣ್ಣೂರು ನಾರಾಯಣಸ್ವಾಮಿ ಆರೋಪಿಸಿದರು.

ಮಾಜಿ ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ‘ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಮಾಂಸ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಒಣ ತ್ಯಾಜ್ಯ, ಹಸಿ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ನಂತೆ ಮಾಂಸ ತ್ಯಾಜ್ಯವನ್ನು ಸಂಸ್ಕರಣೆ ಮಾಡುವ ಉದ್ದೇಶದಿಂದ ಅಭಿವೃದ್ಧಿ ಪರವಾಗಿರುವ ಯೋಜನೆಯನ್ನು ಬನಾ ಇಕೋ ವರ್ಕ್ ಸಂಸ್ಥೆ ನಿರ್ಮಿಸಿದೆ. ಇದು ತುಂಬಾ ಉಪಯುಕ್ತ ಯೋಜನೆ. ಮೊದಲಿಗೆ ಕಣ್ಣೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಗ್ರಹಗೊಳ್ಳುವ ಮಾಂಸ ತ್ಯಾಜ್ಯವನ್ನು ಸಂಸ್ಕರಣೆ ಮಾಡಲು ಯೋಜನೆ ರೂಪಿಸಿದೆ. ಸಂಸ್ಕರಣಗೊಂಡ ಮಾಂಸ ತ್ಯಾಜ್ಯದಿಂದ ಆಹಾರದ ಪೊಟ್ಟಣ ತಯಾರಿಸಿ ನಾಯಿ ಮತ್ತು ಮೀನುಗಳಿಗೆ ಆಹಾರವಾಗಿ ನೀಡುವ ಕ್ರಮ ಘಟಕದಿಂದ ಆಗಲಿದೆ’ ಎಂದು ವಿವರಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.