ADVERTISEMENT

ಸ್ಮಶಾನ ಜಾಗದಲ್ಲಿ ರಸ್ತೆ: ಸ್ಥಳೀಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 20:21 IST
Last Updated 15 ಜೂನ್ 2022, 20:21 IST
ರಾಜರಾಜೇಶ್ವರಿನಗರದಲ್ಲಿ ಸ್ಮಶಾನದ ಜಾಗ ಉಳಿಸಲು ಒತ್ತಾಯಿಸಿ ಸ್ಥಳೀಯರು ಅಂಬೇಡ್ಕರ್ ಭಾವಚಿತ್ರದೊಂದಿಗೆ ಬುಧವಾರ ಪ್ರತಿಭಟನೆ ನಡೆಸಿದರು
ರಾಜರಾಜೇಶ್ವರಿನಗರದಲ್ಲಿ ಸ್ಮಶಾನದ ಜಾಗ ಉಳಿಸಲು ಒತ್ತಾಯಿಸಿ ಸ್ಥಳೀಯರು ಅಂಬೇಡ್ಕರ್ ಭಾವಚಿತ್ರದೊಂದಿಗೆ ಬುಧವಾರ ಪ್ರತಿಭಟನೆ ನಡೆಸಿದರು   

ಬೆಂಗಳೂರು: ರಾಜರಾಜೇಶ್ವರಿನಗರದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಸ್ಮಶಾನ ಜಾಗದಲ್ಲಿ ರಸ್ತೆ ನಿರ್ಮಿಸುವ ಕಾರ್ಯಕ್ಕೆ ಸ್ಥಳೀಯರು ತಡೆ ಒಡ್ಡಿ ಪ್ರತಿಭಟನೆ ನಡೆಸಿದರು.

‘ರಾಜರಾಜೇಶ್ವರಿನಗರದಿಂದ ಉತ್ತರಹಳ್ಳಿ ರಸ್ತೆಗೆ ಸಂಪರ್ಕ ಕಲ್ಪಿಸುವ ಕೆಂಚನಹಳ್ಳಿ ರಸ್ತೆಗೆ ಹೊಂದಿಕೊಂಡಂತೆ ಸ್ಮಶಾನವಿದ್ದು, ಆ ಜಾಗವನ್ನು ರಸ್ತೆ ವಿಸ್ತರಣೆಗೆ ಬಳಕೆ ಮಾಡಿಕೊಳ್ಳಲು ಯತ್ನಿಸಲಾಗಿದೆ’ ಎಂದು ಸ್ಥಳೀಯರು ಆರೋಪಿಸಿದರು.

ಜೆಸಿಬಿ ಮೂಲಕ ಆರಂಭಿಸಿದ್ದ ಕೆಲಸ ತಡೆದ ಪ್ರತಿಭಟನಕಾರರು, ಯಾವುದೇ ಕಾರಣಕ್ಕೂ ಈ ಜಾಗದಲ್ಲಿ ರಸ್ತೆ ಅಭಿವೃದ್ಧಿಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.

ADVERTISEMENT

‘ಹಲಗೆವಡೇರಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಮಾದಿಗ ಸಮುದಾಯದವರಿಗೆ ಸ್ಮಶಾನಕ್ಕೆಂದು ಮೀಸಲಿಟ್ಟಿದ್ದ 2 ಎಕರೆ ಜಾಗ ಇತ್ತು. ಒತ್ತುವರಿಯಾಗಿ ಈಗ ಅರ್ಧ ಎಕರೆಯಷ್ಟು ಜಾಗ ಮಾತ್ರ ಉಳಿದಿದೆ. ಅದನ್ನೂ ರಸ್ತೆ ವಿಸ್ತರಣೆಗೆ ಬಳಸಿಕೊಂಡರೆ ಸ್ಮಶಾನವೇ ಇಲ್ಲದಂತೆ ಆಗಲಿದೆ’ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ರಾಜೇಶ್ ಅವರುಹೇಳಿದರು.

‘ಈ ರಸ್ತೆಯಲ್ಲಿ ಈಗಾಗಲೇ ವೈಟ್‌ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿದೆ. ಆದರೂ ಸಂಚಾರ ದಟ್ಟಣೆ ನೆಪದಲ್ಲಿ ಸ್ಮಶಾನ ಜಾಗ ಪಡೆಯಲು ಶಾಸಕರು ಹೊರಟಿದ್ದಾರೆ. ಅದರ ಎದುರಿನಲ್ಲಿ ಶಾಸಕರ
ಕಚೇರಿ ಇದ್ದು, ಅದನ್ನು ಬಿಟ್ಟು ದಲಿತರ ಸ್ಮಶಾನದ ಜಾಗದಲ್ಲೇ ರಸ್ತೆ ನಿರ್ಮಿಸುವುದು ಸರಿಯಲ್ಲ’ ಎಂದು ಹೇಳಿದರು.

ಸ್ಥಳಕ್ಕೆ ಬಂದ ತೋಟಗಾರಿಕಾ ಸಚಿವ ಮುನಿರತ್ನ ಅವರು ಪ್ರತಿಭಟನಕಾರರ ಮನವೊಲಿಸಲು ಯತ್ನಿಸಿದರು. ಪ್ರತಿಭಟನಕಾರರು ಪಟ್ಟು ಸಡಿಲಿಸದೆ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು. ಬಳಿಕ ಕಾಮಗಾರಿಸ್ಥಗಿತಗೊಳಿಸಲು ಸಚಿವರು ಸೂಚಿಸಿದರು.

ಸ್ಥಳೀಯ ಮುಖಂಡರಾದ ಕೆ.ಸೋಮಶೇಖರ್, ಎಸ್. ದೇವರಾಜ್, ಜೆ.ಮುನಿರಾಜು, ಎಚ್.ಬಿ.ತಿಮ್ಮರಾಜು, ಎನ್.ರಾಜಕುಮಾರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಈ ಕುರಿತು ‘‍ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮುನಿರತ್ನ ಅವರು, ‘ರಸ್ತೆ ವಿಸ್ತರಣೆ ಆಗಬೇಕಿದ್ದು, ಅದಕ್ಕೆ ಸ್ಮಶಾನ ಜಾಗ ಬಳಕೆ ಮಾಡಿಕೊಳ್ಳುತ್ತಿಲ್ಲ. ಅದರ ಅಗತ್ಯವೂ ಇಲ್ಲ. ಸರ್ಕಾರಿಜಾಗದಲ್ಲಿ ರಸ್ತೆ ವಿಸ್ತರಣೆ ಮಾಡಲಾಗುವುದು’ ಎಂದು ಸ್ಪಷ್ಟ ಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.