ADVERTISEMENT

ವಿಧಾನಸೌಧ ಪೂರ್ವದ್ವಾರದಲ್ಲಿ ಗ್ರಂಥಪಾಲಕರ ಧರಣಿ

‘ಆಡಳಿತ ಶಕ್ತಿ ಕೇಂದ್ರ’ಗಳಲ್ಲಿ ಭದ್ರತೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 19:22 IST
Last Updated 25 ಜೂನ್ 2019, 19:22 IST

ಬೆಂಗಳೂರು: ವಿಧಾನಸೌಧದ ಪೂರ್ವ ದ್ವಾರದ ಎದುರು 50ಕ್ಕೂ ಹೆಚ್ಚು ಸಹಾಯಕ ಗ್ರಂಥಪಾಲಕರು ಮಂಗಳವಾರ ಮಧ್ಯಾಹ್ನ ದಿಢೀರ್‌ ಪ್ರತಿಭಟನೆ ನಡೆಸಿದರು.

ವಿಧಾನಸೌಧದ ಮೂರನೇ ಮಹಡಿಯ 332ನೇ ಸಂಖ್ಯೆ ಕೊಠಡಿಯಲ್ಲಿ (ಶೌಚಾಲಯ) ಚಿಕ್ಕಬಳ್ಳಾಪುರ ಜಿಲ್ಲೆಯ ಅನೂರು ಗ್ರಾಮ ಪಂಚಾಯಿತಿ ಸಹಾಯಕ ಗ್ರಂಥಪಾಲಕ ಆರ್. ರೇವಣ್ಣ ಕುಮಾರ್ ಸೋಮವಾರ ಮಧ್ಯಾಹ್ನ ಕತ್ತು ಹಾಗೂ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿ
ದ್ದರು. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸಹಾಯಕ ಗ್ರಂಥಪಾಲಕರು, ಕನಿಷ್ಠ ವೇತನ ಜಾರಿಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

‘ರಾಜ್ಯದಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 6,500 ಗ್ರಂಥಪಾಲಕರಿದ್ದೇವೆ. ಸರ್ಕಾರ ಕನಿಷ್ಠ ವೇತನ ಜಾರಿ ಮಾಡಿಲ್ಲ. ಕೇವಲ ಏಳು ಸಾವಿರ ಸಂಭಾವನೆ ನೀಡುತ್ತಿದೆ. ಇದರಲ್ಲಿ ಪತ್ನಿ, ಮಕ್ಕಳನ್ನು ಸಾಕಲು ಸಾಧ್ಯವಾಗುತ್ತಿಲ್ಲ. ನಾವು ಮಾನಸಿಕವಾಗಿ ನೊಂದಿದ್ದೇವೆ. ನಮ್ಮ ಸಹದ್ಯೋಗಿಯೊಬ್ಬ ವಿಧಾನಸೌಧದಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ.‌ ಕೂಡಲೇ ಸರ್ಕಾರ ಕನಿಷ್ಠ ವೇತನ ಜಾರಿ ಮಾಡಬೇಕು. ಇಲ್ಲವಾದರೆ ನಾವೆಲ್ಲರೂ ರಾಜೀನಾಮೆ ನೀಡುತ್ತೇವೆ’ ಎಂದು ಪ್ರತಿಭಟನೆಕಾರರು ಎಚ್ಚರಿಕೆ ನೀಡಿದರು.

ADVERTISEMENT

ಅನುಮತಿ ಪಡೆಯದೆ ಧರಣಿ ಕುಳಿತ ಪ್ರತಿಭಟನಾನಿರತರನ್ನು ಪೊಲೀಸರು ಲಾಠಿ ಬೀಸಿ ಚದುರಿಸಿದರು. ಕೆಲ‌ವರನ್ನು ವಶಕ್ಕೆ ಪಡೆದುಕೊಂಡರು. ಈ ಸಂದರ್ಭದಲ್ಲಿ ಕೆಲಹೊತ್ತು ಗೊಂದಲದ ವಾತಾವರಣ ಸೃಷ್ಟಿಯಾಯಿತು. ಕೆಂದ್ರ ವಿಭಾಗದ ಡಿಸಿಪಿ ದೇವರಾಜ್ ಸ್ಥಳಕ್ಕೆ ಬಂದು ಪರಿಸ್ಥಿತಿ ನಿಭಾಯಿಸಿದರು.

ರೇವಣ್ಣ ಕುಮಾರ್ ಚೇತರಿಕೆ: ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೇವಣ್ಣ ಕುಮಾರ್‌ ಚೇತರಿಸಿಕೊಳ್ಳುತ್ತಿದ್ದಾರೆ. ಕೃತ್ಯಕ್ಕೆ ಬಳಸಿದ ಬ್ಲೇಡ್‍ನ್ನು ರೇವಣ್ಣ ಕುಮಾರ್‌ ಶೌಚಾಲಯದ ಒಳಗೆ ಎಸೆದಿರುವುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.

ಭದ್ರತೆ ಹೆಚ್ಚಳ

ವಿಧಾನಸೌಧದ ಒಳಗೆ ಆತ್ಮಹತ್ಯೆ ಯತ್ನ ಪ್ರಕರಣದ ಹಿನ್ನೆಲೆಯಲ್ಲಿ ವಿಧಾನಸೌಧ ‌ಮತ್ತು ವಿಕಾಸಸೌಧಗಳ ಭದ್ರತೆ ಹೆಚ್ಚಿಸಲಾಗಿದೆ. ಎಲ್ಲ ಪ್ರವೇಶ ದ್ವಾರಗಳಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಪ್ರತಿಯೊಬ್ಬರನ್ನು ತೀವ್ರ ತಪಾಸಣೆಗೆ ಒಳಪಡಿಸಿ, ಗುರುತಿನ ಪತ್ರ ಪರಿಶೀಲಿಸಿ ಒಳಗೆ ಬಿಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.