ADVERTISEMENT

ನಗದು ರಹಿತ ಆರೋಗ್ಯ ಸೇವೆ ನೀಡಿ: ಸರ್ಕಾರಿ ನಿವೃತ್ತ ನೌಕರರ ಸಂಘ ಒತ್ತಾಯ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2025, 15:16 IST
Last Updated 4 ಏಪ್ರಿಲ್ 2025, 15:16 IST
ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ನೌಕರರು ಪಾಲ್ಗೊಂಡಿದ್ದರು. ಪ್ರಜಾವಾಣಿ ಚಿತ್ರ
ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ನೌಕರರು ಪಾಲ್ಗೊಂಡಿದ್ದರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ನಿವೃತ್ತ ನೌಕರರು ಹಾಗೂ ಕುಟುಂಬ ಪಿಂಚಣಿದಾರರಿಗೆ ನಗದು ರಹಿತ ಆರೋಗ್ಯ ಸೇವೆ ‘ಸಂಧ್ಯಾ ಕಿರಣ’ ಯೋಜನೆ ಜಾರಿ ಸೇರಿದಂತೆ ಏಳು ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಸರ್ಕಾರವನ್ನು ಆಗ್ರಹಿಸಿದೆ.

ನಗರದ ಅರಮನೆ ಮೈದಾನದಲ್ಲಿ ಶುಕ್ರವಾರ ನಡೆದ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಸಮಾವೇಶದಲ್ಲಿ ಏಳು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸುವ ಮನವಿ ಪತ್ರವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಸಲ್ಲಿಸಲಾಯಿತು. 

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಅಧ್ಯಕ್ಷ ಎಲ್‌. ಭೈರಪ್ಪ ಮಾತನಾಡಿ, ‘ರಾಜ್ಯದಲ್ಲಿ 4.50 ಲಕ್ಷ ನಿವೃತ್ತ ನೌಕರರು ಹಾಗೂ ಕುಟುಂಬ ಪಿಂಚಣಿದಾರರು ಇದ್ದಾರೆ. ಜೀವನದ ಸಂಧ್ಯಾ ಕಾಲದಲ್ಲಿರುವ ಇವರು, ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರಾಜ್ಯದ ಏಳನೇ ವೇತನ ಆಯೋಗದ ಶಿಫಾರಸಿನಂತೆ ಸಂಧ್ಯಾ ಕಿರಣ ಯೋಜನೆ ಜಾರಿಗೆ ತರಬೇಕು. 2–3 ವರ್ಷಗಳಿಂದಲೂ ಚರ್ಚೆ ನಡೆಸುತ್ತಿದ್ದು, ಕಡತ ಆರ್ಥಿಕ ಇಲಾಖೆಯ ಪರಿಶೀಲನೆಯಲ್ಲಿದೆ’ ಎಂದರು.

ADVERTISEMENT

ಅದೇ ರೀತಿ 70 ರಿಂದ 80 ವರ್ಷದೊಳಗಿನ ನೌಕರರಿಗೆ ಮೂಲ ಪಿಂಚಣಿಯಲ್ಲಿ ಶೇಕಡ 10ರಷ್ಟು ಹೆಚ್ಚಳ ಮಾಡಬೇಕು. ಛತ್ತೀಸಗಡ, ಪಂಜಾಬ್ ಸೇರಿದಂತೆ ಅನೇಕ ರಾಜ್ಯಗಳು ಈ ಸೌಲಭ್ಯ ನೀಡಿದ್ದು, ಕರ್ನಾಟಕವೂ ಇದನ್ನು ಜಾರಿ ಮಾಡಿ ವೃದ್ದಾಪ್ಯದಲ್ಲಿರುವ ನಿವೃತ್ತರಿಗೆ ಅನುಕೂಲ ಮಾಡಬೇಕು ಎಂದು ಮನವಿ ಮಾಡಿದರು.

ನಿವೃತ್ತ ನೌಕರರು ಮತ್ತು ಕುಟುಂಬ ಪಿಂಚಣಿದಾರರು ಮೃತಪಟ್ಟಾಗ ಶವ ಸಂಸ್ಕಾರಕ್ಕೆ ಅವರ ಕುಟುಂಬದವರಿಗೆ ₹10 ಸಾವಿರ ಮಂಜೂರು ಮಾಡಬೇಕು. ಕೆಎಸ್‌ಆರ್‌ಟಿಸಿ ಮತ್ತು ನಗರ ಸಾರಿಗೆ ಬಸ್‌ಗಳಲ್ಲಿ ಶೇಕಡ 25ರಿಂದ ಶೇಕಡ 50ರವರೆಗೆ ರಿಯಾಯಿತಿ ನೀಡಬೇಕು ಎಂದು ಒತ್ತಾಯಿಸಿದರು.

ಬೆಂಗಳೂರು ನಗರ, ಜಿಲ್ಲಾ, ತಾಲ್ಲೂಕು ಶಾಖೆಗಳ ಸರ್ಕಾರಿ ನಿವೃತ್ತ ನೌಕರರ ಸಂಘಗಳಿಗೆ ಸರ್ಕಾರದಿಂದ ರಿಯಾಯಿತಿ ದರದಲ್ಲಿ ನಿವೇಶನ ಮಂಜೂರು ಮಾಡಬೇಕು. ನಿವೃತ್ತರಿಗೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲು ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂಬ ಬೇಡಿಕೆಗಳನ್ನು ಸಲ್ಲಿಸಿದರು.

ಕುಣಿಗಲ್ ಶಾಸಕ ಡಾ.ಎಚ್.ಡಿ. ರಂಗನಾಥ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿದರು.

ಸಂಘದ ಪ್ರಧಾನ ಕಾರ್ಯದರ್ಶಿ ರಂಗೇಗೌಡ, ಖಜಾಂಚಿ ಎಸ್.ಎಂ. ಆನಂದಪ್ಪ, ಗೌರವಾಧ್ಯಕ್ಷ ಎಂ.ವಿ. ರಾಜಶೇಖರಯ್ಯ ಹಾಜರಿದ್ದರು.

'ಹಂತ ಹಂತವಾಗಿ ಬೇಡಿಕೆ ಈಡೇರಿಕೆ’
‘ರಾಜ್ಯ ಸರ್ಕಾರಿ ನಿವೃತ್ತ ನೌಕರರ ಮತ್ತು ಕುಟುಂಬ ಪಿಂಚಣಿದಾರರ ಬೇಡಿಕೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಹಂತ ಹಂತವಾಗಿ ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು. ಕೆಲವು ಬೇಡಿಕೆಗಳು ಪಕ್ಷದ ಪ್ರಣಾಳಿಕೆಯಲ್ಲೂ ಇದ್ದು ಸರ್ಕಾರ ಇವುಗಳನ್ನು ನಿಶ್ಚಿತವಾಗಿ ಈಡೇರಿಸುತ್ತದೆ. ಕೆಲವು ಹಣಕಾಸಿನ ವಿಷಯ ಆಗಿರುವುದರಿಂದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು. ಆರೋಗ್ಯ ವಿಮಾ ಸೌಲಭ್ಯ ನಿವೃತ್ತ ನೌಕರರು ಮತ್ತು ಕುಟುಂಬ ವರ್ಗದವರಿಗೆ ಕೆಎಸ್‌ಆರ್‌ಟಿಸಿ ಮತ್ತು ನಗರ ಸಾರಿಗೆ ಬಸ್‌ಗಳಲ್ಲಿ ಶೇಕಡ 25-50 ರಷ್ಟು ರಿಯಾಯಿತಿ ನೀಡಬೇಕು ಎಂಬಂತಹ ಬೇಡಿಕೆಗಳು ನ್ಯಾಯಯುತವಾಗಿವೆ. ಇವು ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆ ಎನಿಸುವುದಿಲ್ಲ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.