ADVERTISEMENT

ವಸತಿ ಸೌಲಭ್ಯ, ಆರ್ಥಿಕ ಬೆಂಬಲ ನೀಡಿ: ಲಿಂಗತ್ವ ಅಲ್ಪಸಂಖ್ಯಾತರ ಆಗ್ರಹ

ರೈನ್‌ಬೋ ಹಬ್ಬದಲ್ಲಿ ಸರ್ಕಾರಕ್ಕೆ ಲಿಂಗತ್ವ ಅಲ್ಪಸಂಖ್ಯಾತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಜೂನ್ 2025, 16:22 IST
Last Updated 28 ಜೂನ್ 2025, 16:22 IST
ಕಾರ್ಯಕ್ರಮದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಸಂವಿಧಾನದ ಪೀಠಿಕೆ ವಾಚಿಸಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಬಾಬು ಉಪಸ್ಥಿತರಿದ್ದರು.
ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಸಂವಿಧಾನದ ಪೀಠಿಕೆ ವಾಚಿಸಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಬಾಬು ಉಪಸ್ಥಿತರಿದ್ದರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸಮಾಜದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ನಾವು, ಬದುಕಿನ ಅನಿವಾರ್ಯತೆಗೆ ಭಿಕ್ಷಾಟನೆಯನ್ನು ಅವಲಂಬಿಸಿದ್ದೇವೆ. ಎಲ್ಲರಂತೆ ಜೀವನ ಸಾಗಿಸಲು ವಸತಿ, ಆರ್ಥಿಕ ಬೆಂಬಲ ಸೇರಿ ವಿವಿಧ ಸೌಲಭ್ಯಗಳನ್ನು ಒದಗಿಸಬೇಕು’ ಎಂದು ಲಿಂಗತ್ವ ಅಲ್ಪಸಂಖ್ಯಾತರು ಸರ್ಕಾರವನ್ನು ಆಗ್ರಹಿಸಿದರು. 

ಸಂಗಮ ಸ್ವಯಂ ಸೇವಾ ಸಂಸ್ಥೆ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರೈನ್‌ಬೋ ಹಬ್ಬದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಒಂದೆಡೆ ಸೇರಿ, ಸಮುದಾಯದವರು ಎದುರಿಸುವ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಿದರು.

ಸಭೆಯಲ್ಲಿ ಸಮುದಾಯದ ವಿವಿಧ ಬೇಡಿಕೆಗಳ ಬಗ್ಗೆ ಹಕ್ಕೊತ್ತಾಯ ಮಂಡಿಸಿದ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕಿ ನಿಶಾ ಗೂಳೂರು, ‘ಚುನಾವಣೆಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ನಿರ್ಣಾಯಕರಲ್ಲ ಎಂಬ ಕಾರಣಕ್ಕೆ ಈ ಸಮುದಾಯವನ್ನು ಜನಪ್ರತಿನಿಧಿಗಳು ಕಡೆಗಣಿಸುತ್ತಾ ಬಂದಿದ್ದಾರೆ. ಈ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರವು ನಿಗಮ ರಚಿಸಿ, ವಾರ್ಷಿಕ ₹ 200 ಕೋಟಿ ಮೀಸಲಿಡಬೇಕು. ವಸತಿ ರಹಿತ ಲಿಂಗತ್ವ ಅಲ್ಪಸಂಖ್ಯಾತರಿಗೆ ವಸತಿ ಸೌಲಭ್ಯ ಒದಗಿಸಬೇಕು’ ಎಂದು ಹೇಳಿದರು. 

ADVERTISEMENT

‘ಸರ್ಕಾರಿ ಉದ್ಯೋಗಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಶೇ 1 ರಷ್ಟು ಮೀಸಲಾತಿ ನೀಡಲಾಗಿದೆ. ಆದರೆ, ಪೊಲೀಸ್‌ ಸೇರಿ ವಿವಿಧ ಇಲಾಖೆಗಳಲ್ಲಿ ತರಬೇತಿ ಕೊರತೆ ಕಾರಣ ಉದ್ಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಮುದಾಯದವರಿಗೆ ಉದ್ಯೋಗಕ್ಕೆ ಅಗತ್ಯವಿರುವ ತರಬೇತಿಯನ್ನು ಒದಗಿಸಬೇಕು. ಉದ್ಯಮಶೀಲತೆಯಲ್ಲಿ ಯಶಸ್ವಿಯಾಗಲು ತಲಾ ₹ 2 ಲಕ್ಷ ಆರ್ಥಿಕ ನೆರವು ಒದಗಿಸಬೇಕು. ಮಾನವ ಹಕ್ಕುಗಳನ್ನು ರಕ್ಷಿಸಲು ಆಯೋಗವನ್ನು ಸ್ಥಾಪಿಸಬೇಕು’ ಎಂದು ಒತ್ತಾಯಿಸಿದರು. 

‘ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಸೌಲಭ್ಯ ಮತ್ತು ಶಸ್ತ್ರಚಿಕಿತ್ಸೆಯ ನಂತರ ಆರೈಕೆಗೆ ಹಣಕಾಸಿನ ನೆರವು ನೀಡಬೇಕು. ವಿವಿಧ ಆರೋಗ್ಯ ವಿಮಾ ಯೋಜನೆಗಳಲ್ಲಿ ಲಿಂಗ ಪರಿವರ್ತನೆ ಪ್ರಕ್ರಿಯೆ ಸೇರಿಸಬೇಕು. ಎಲ್ಲ ಲಿಂಗತ್ವ ಅಲ್ಪಸಂಖ್ಯಾತರಿಗೆ ಪಡಿತರ ಚೀಟಿಯನ್ನು ನೀಡಬೇಕು. ಸರ್ಕಾರಿ ಕಡತಗಳಲ್ಲಿ ‘ಮಂಗಳಮುಖಿ’ ಪದವನ್ನು ಕೈಬಿಟ್ಟು, ‘ಲಿಂಗತ್ವ ಅಲ್ಪಸಂಖ್ಯಾತರು’ ಎಂದೇ ಬಳಸಬೇಕು’ ಎಂದು ಆಗ್ರಹಿಸಿದರು. 

ಮನೆ ಸಿಗುತ್ತಿಲ್ಲ: ಲಿಂಗತ್ವ ಅಲ್ಪಸಂಖ್ಯಾತೆಯೂ ಆಗಿರುವ ಸಾಮಾಜಿಕ ಕಾರ್ಯಕರ್ತೆ ಅನಿ ಮಂಗಳೂರು, ‘ನಮ್ಮ ಸಮುದಾಯದವರನ್ನು ನೋಡುವ ದೃಷ್ಟಿ ಬೇರೆಯಿದೆ. ಸಮುದಾಯದವರಿಗೆ ಮನೆಗಳು ಬಾಡಿಗೆಗೆ ಸಿಗುತ್ತಿಲ್ಲ. ಯಾರೂ ಕೆಲಸವನ್ನು ನೀಡುತ್ತಿಲ್ಲ. ಆದ್ದರಿಂದ ಭಿಕ್ಷಾಟನೆ, ಲೈಂಗಿಕ ವೃತ್ತಿ ಅವಲಂಬಿಸುತ್ತಿದ್ದಾರೆ. ಸರ್ಕಾರವು ವಸತಿ ಸೇರಿ ವಿವಿಧ ಸೌಲಭ್ಯಗಳನ್ನು ಒದಗಿಸಬೇಕು. ಸಿನಿಮಾ, ಕಿರುತೆರೆ ಧಾರಾವಾಹಿಗಳಲ್ಲಿ ಸಮುದಾಯದ ಪ್ರತಿಭಾವಂತರಿಗೆ ಅವಕಾಶ ನೀಡಬೇಕು’ ಎಂದು ಹೇಳಿದರು. 

ಇದಕ್ಕೂ ಮೊದಲು ಲಿಂಗತ್ವ ಅಲ್ಪಸಂಖ್ಯಾತ ಮಕ್ಕಳನ್ನು ಒಪ್ಪಿಕೊಂಡ ಪೋಷಕರಿಗೆ ಮತ್ತು ಶೇ 1 ರಷ್ಟು ಮೀಸಲಾತಿ ಅಡಿಯಲ್ಲಿ ಸರ್ಕಾರಿ ಉದ್ಯೋಗ ಪಡೆದ ಸಿದ್ದಪ್ಪ ಹುಕ್ಕೇರಿ ಅವರನ್ನು ಸನ್ಮಾನಿಸಲಾಯಿತು. ಬಳಿಕ ಸಮುದಾಯದವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.