ಬೆಂಗಳೂರು: ಬಿಡಿಎ ನಿರ್ಮಿಸಿರುವ ಬಡಾವಣೆಗಳಿಗೆ ಮೂಲಸೌಕರ್ಯ ಒದಗಿಸಿ, ಪೂರ್ಣ ಪ್ರಮಾಣದ ಅಭಿವೃದ್ಧಿ ಮಾಡಿ ನಿವೇಶನಗಳನ್ನು ಹಂಚಿದ ನಂತರವಷ್ಟೇ ಹೊಸ ಬಡಾವಣೆಗಳನ್ನು ನಿರ್ಮಾಣ ಮಾಡಬೇಕು ಎಂದು ಶಾಸಕ ಎಸ್. ಸುರೇಶ್ ಕುಮಾರ್ ಒತ್ತಾಯಿಸಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಅವರು, ‘ಈಗಾಗಲೇ ನಿರ್ಮಾಣವಾಗಿರುವ ಬಡಾವಣೆಗಳಿಗೆ ಮೂಲಸೌಕರ್ಯಗಳನ್ನು ಒದಗಿಸಲು ವಿಫಲವಾಗಿದ್ದರೂ ಮತ್ತಷ್ಟು ಹೊಸ ಬಡಾವಣೆಗಳನ್ನು ನಿರ್ಮಿಸಲು ಹೊರಟಿದ್ದೀರಿ. ಈಗಿರುವ ಬಡಾವಣೆಗಳನ್ನೇ ನಿರ್ವಹಿಸಲು ಸಾಧ್ಯವಾಗದಿದ್ದಾಗ, ಹೊಸ ಬಡಾವಣೆಗಳನ್ನು ನಿರ್ಮಾಣ ಮಾಡುವ ಸಾಮರ್ಥ್ಯ ಬಿಡಿಎಗೆ ಅರ್ಥಾತ್ ಸರ್ಕಾರಕ್ಕೆ ಇದೆಯೇ? ಬೆಂಗಳೂರು ಅಭಿವೃದ್ಧಿ ಸಚಿವರಾದ ನಿಮಗೆ ಈ ವಿಷಯಗಳ ಕುರಿತು ಸಂವೇದನೆ ಬೇಕಲ್ಲವೇ’ ಎಂದು ಪ್ರಶ್ನಿಸಿದ್ದಾರೆ.
‘ಶಿವರಾಮ ಕಾರಂತ ಬಡಾವಣೆಯಲ್ಲಿ 30 ಸಾವಿರ ನಿವೇಶನಗಳ ಹಂಚಿಕೆಗೆ ಮುನ್ನವೇ ಎರಡನೇ ಹಂತಕ್ಕೆ ಸರ್ವೆ ಶುರುವಾಗಿದೆ. ಮೊದಲ ಹಂತದಲ್ಲೇ ಕಾಮಗಾರಿ ಪೂರ್ಣಗೊಳ್ಳಲು ಮೂರು ತಿಂಗಳು ಗಡುವು ನೀಡಲಾಗಿದೆ. ನಿವೇಶನ ಹಂಚಿಕೆ ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥ್ಯವಾಗದಿದ್ದರೂ, ಸುಮಾರು 12 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತದೆ ಎಂದು ಬಿಡಿಎ ಮೂಲಗಳು ತಿಳಿಸಿವೆ’ ಎಂದಿದ್ದಾರೆ.
‘ಶಿವರಾಮ ಕಾರಂತ ಬಡಾವಣೆ ಮಾತ್ರವಲ್ಲ, ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆ, ಕೆಂಪೇಗೌಡ ಬಡಾವಣೆ, ಅರ್ಕಾವತಿ ಬಡಾವಣೆಗಳನ್ನು ನಿರ್ಮಿಸಲು ರೈತರಿಂದ ಪಡೆದುಕೊಂಡ ಭೂಮಿಗೆ ಇಲ್ಲಿಯವರೆಗೂ ಪರಿಹಾರ ನೀಡಿಲ್ಲ. ಬಡಾವಣೆಗಳಲ್ಲಿ ಪೂರ್ಣಪ್ರಮಾಣದ ಅಭಿವೃದ್ಧಿ ಮಾಡಿಲ್ಲ, ಮೂಲಸೌಕರ್ಯಗಳಿಲ್ಲದೆ ನಿವೇಶನದಾರರು ಮನೆ ಕಟ್ಟಿಕೊಳ್ಳಬೇಕಾದ ಸ್ಥಿತಿ ಇದೆ. ಈ ಎಲ್ಲ ಬಡಾವಣೆಗಳಲ್ಲಿ ಶೇ 30ರಿಂದ 40ರಷ್ಟು ನಿವೇಶನಗಳು ಖಾಲಿ ಇವೆ. ಹೀಗಿರುವಾಗ ಹೊಸ ಬಡಾವಣೆಗಳ ನಿರ್ಮಾಣದ ಅಗತ್ಯವಿದೆಯೇ’ ಎಂದು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.