ADVERTISEMENT

BDA | ಬಿಬಿಸಿ ಯೋಜನೆ ರದ್ದತಿಗೆ ಬಿಗಿಪಟ್ಟು; ರೈತರ ಕಾನೂನು ಹೋರಾಟ

ಕೆ.ಎಸ್.ಸುನಿಲ್
Published 2 ಜನವರಿ 2026, 23:14 IST
Last Updated 2 ಜನವರಿ 2026, 23:14 IST
<div class="paragraphs"><p>ಬಿಡಿಎ</p></div>

ಬಿಡಿಎ

   

ಬೆಂಗಳೂರು: ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್ (ಪೆರಿಫೆರಲ್ ರಿಂಗ್ ರಸ್ತೆ– 1, ಬಿಬಿಸಿ) ಯೋಜನೆಗೆ ಸರ್ಕಾರ ರೂಪಿಸಿರುವ ಪರಿಹಾರ ವಿರೋಧಿಸಿ ಸಾವಿರಕ್ಕೂ ಅಧಿಕ ಮಂದಿ ಆಕ್ಷೇಪಣೆ ಸಲ್ಲಿಸಿರುವುದರ ಜತೆಗೆ ಕಾನೂನು ಹೋರಾಟವನ್ನೂ ಮುಂದುವರಿಸಿದ್ದಾರೆ.

‘2013ರ ಭೂಸ್ವಾಧೀನ ಕಾಯ್ದೆ ಪ್ರಕಾರ ಪರಿಹಾರ ನೀಡಬೇಕು, ಇಲ್ಲವಾದರೆ ಯೋಜನೆಯನ್ನು ರದ್ದುಗೊಳಿಸಬೇಕು’ ಎಂದು ಭೂ ಮಾಲೀಕರು ಬಿಗಿಪಟ್ಟು ಹಿಡಿದಿದ್ದಾರೆ. 

ADVERTISEMENT

ಯೋಜನೆಗೆ 2,418 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಸುಮಾರು ಐದು ಸಾವಿರ ಕುಟುಂಬಗಳು ಭೂಮಿ ಕಳೆದುಕೊಳ್ಳಲಿದ್ದು, ಕೆಲ ಕುಟುಂಬಗಳು ಪೂರ್ಣ ಅಥವಾ ಭಾಗಶಃ ಭೂಮಿ ಕಳೆದುಕೊಳ್ಳುವ ಸಾಧ್ಯತೆ ಇದೆ. ಈ ಪೈಕಿ ಸಾವಿರಕ್ಕೂ ಹೆಚ್ಚು ರೈತರು ಯೋಜನೆ ವಿರೋಧಿಸಿ ಆಕ್ಷೇಪಣೆ ಸಲ್ಲಿಸಿದ್ದಾರೆ.

ಬಿಬಿಸಿ ಯೋಜನೆಗೆ 2007ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದ್ದು, ಈವರೆಗೂ ಯೋಜನೆ ಅನುಷ್ಠಾನಗೊಂಡಿಲ್ಲ. ಹಳೆಯ ಪೆರಿಫೆರಲ್ ರಿಂಗ್ ರಸ್ತೆ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಬಿಡಿಎ ಕಾಯ್ದೆ–1894ರ ಸೆಕ್ಷನ್ 27ರ ಪ್ರಕಾರ ಐದು ವರ್ಷಗಳ ಅವಧಿ ಮುಗಿದಿರುವ ಕಾರಣ ಪಿಆರ್‌ಆರ್ ಭಾಗ -1 ಯೋಜನೆಯನ್ನು ರದ್ದುಗೊಳಿಸಿ, ಎಲ್ಲ ಭೂ ಮಾಲೀಕರಿಗೆ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಬೇಕು. ಇಲ್ಲವಾದರೆ ಬಿಡಿಎ ಕಾಯ್ದೆಯನ್ನು ತಕ್ಷಣ ತಿದ್ದುಪಡಿ ಮಾಡಿ, ಕೇಂದ್ರ ಸರ್ಕಾರದ 2013ರ ಭೂ ಸ್ವಾಧೀನ ಕಾಯ್ದೆ ಪ್ರಕಾರ ಪರಿಹಾರ ನೀಡಿ, ರಸ್ತೆ ನಿರ್ಮಿಸುವಂತೆ ರೈತರು ಒತ್ತಾಯಿಸಿದ್ದಾರೆ.  

ಬಿಡಿಎ ಮೇಲೆ ಆರ್ಥಿಕ ಹೊರೆ ಕಡಿಮೆ ಮಾಡಲು ಈ ಯೋಜನೆಯಲ್ಲಿ ಭೂಮಿ ಕಳೆದುಕೊಳ್ಳುವ ರೈತರಿಗೆ ನಾಲ್ಕು ರೀತಿಯಲ್ಲಿ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ. ಮಾರುಕಟ್ಟೆ ದರದಲ್ಲಿ ನಗರ ಭಾಗದಲ್ಲಿ ಎರಡು ಪಟ್ಟು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮೂರು ಪಟ್ಟು ನಗದು ಪರಿಹಾರ ಅಥವಾ ವರ್ಗಾಯಿಸಬಹುದಾದ ಹಕ್ಕು (ಟಿಡಿಆರ್) ಅಥವಾ ನೆಲ ವಿಸ್ತೀರ್ಣ ಅನುಪಾತ ( ಎಫ್ಎಆರ್) ಅಥವಾ ಶೇ 35ರಷ್ಟು ವಾಣಿಜ್ಯ ಭೂಮಿಯನ್ನು ಪಡೆಯಬಹುದು. ಒಂದು ವೇಳೆ ವಾಣಿಜ್ಯ ಭೂಮಿ ಬೇಡ, ವಸತಿ ಪ್ರದೇಶದಲ್ಲಿ ಜಾಗ ಬೇಕು ಎಂದರೆ ಬಿಡಿಎ ನಿರ್ಮಿಸುತ್ತಿರುವ ನೂತನ ಬಡಾವಣೆಗಳಲ್ಲಿ ಶೇ 40ರಷ್ಟು ಜಾಗ ನೀಡಲಾಗುತ್ತದೆ.

ಪರಿಹಾರ ಸೂತ್ರ ತಿರಸ್ಕರಿಸಿರುವ ರೈತರು, ಕೇಂದ್ರ ಸರ್ಕಾರದ 2013ರ ಭೂಸ್ವಾಧೀನ ಕಾಯ್ದೆ ಅಡಿ ಪರಿಹಾರ ನಿಗದಿ ಮಾಡಬೇಕು ಹಾಗೂ ಮಾರುಕಟ್ಟೆ ಬೆಲೆಗಿಂತ ಎರಡು ಪಟ್ಟು ಪರಿಹಾರ ನೀಡುವುದರ ಜತೆಗೆ ಪುನರ್ವಸತಿ ಕಲ್ಪಿಸಬೇಕು. ಮೆಟ್ರೊ, ರೈಲ್ವೆ ಸೇರಿ ಅನೇಕ ಸರ್ಕಾರಿ ಇಲಾಖೆಗಳು ಕೇಂದ್ರ ಭೂಸ್ವಾಧೀನ ಕಾಯ್ದೆಯಡಿ ಪರಿಹಾರ ನೀಡುತ್ತಿವೆ. ಬಿಬಿಸಿ ಯೋಜನೆ ಸಂತ್ರಸ್ತರಿಗೆ ಈ ಕಾಯ್ದೆ ಅನ್ವಯಿಸುವುದಿಲ್ಲವೇ ಎಂದು ಭೂ ಮಾಲೀಕರು ಪ್ರಶ್ನಿಸಿದ್ದಾರೆ.

‘ಸರ್ಕಾರದ ಪರಿಹಾರ ಸೂತ್ರ ಸರಿಯಿಲ್ಲ. 2016ರ ಮಾರ್ಗಸೂಚಿ ಆಧರಿಸಿ ಪರಿಹಾರ ನಿಗದಿ ಮಾಡಿರುವುದು ಕಾನೂನುಬಾಹಿರವಾಗಿದೆ. 20 ಗುಂಟೆಗಿಂತ ಒಳಗೆ ಭೂಮಿ ಕಳೆದುಕೊಳ್ಳುವವರಿಗೆ ನಗದು ಪರಿಹಾರ ಮಾತ್ರ ನೀಡಲಾಗುತ್ತದೆ. ಇದರಲ್ಲಿ 2003– 2005ರ ಅವಧಿಯ ಮಾರುಕಟ್ಟೆ ದರ ನಿಗದಿಪಡಿಸಲಾಗಿದೆ. ಇದರಿಂದ ಸಣ್ಣ ರೈತರಿಗೆ, ನಿವೇಶನದಾರರಿಗೆ, ಮನೆ ಕಳೆದುಕೊಂಡವರಿಗೆ ಸಹಾಯವಾಗುವುದಿಲ್ಲ. ಬಿಡಿಎ ನಿರ್ಮಿಸುತ್ತಿರುವ ನೂತನ ಬಡಾವಣೆಗಳಲ್ಲಿ ಶೇ 40ರಷ್ಟು ಜಾಗ ಅಥವಾ ಶೇ 35ರಷ್ಟು ವಾಣಿಜ್ಯ ಭೂಮಿ ನೀಡಲಾಗುತ್ತದೆ. ಆದರೆ, ಬಿಬಿಸಿ ಯೋಜನೆಗೆ ವಶಪಡಿಸಿಕೊಳ್ಳುತ್ತಿರುವ ಭೂಮಿ ಅಭಿವೃದ್ಧಿ ಹೊಂದಿದೆ. ಹಾಗಾಗಿ ಸೂಕ್ತ ಪರಿಹಾರ ನೀಡಬೇಕು’ ಎಂದು ರೈತರ ಮುಖಂಡ ಶ್ರೀನಿವಾಸ್ ಆಗ್ರಹಿಸಿದ್ದಾರೆ.

‘ಬಿಬಿಸಿ ಯೋಜನೆಯಲ್ಲಿ 65 ಮೀಟರ್ ರಸ್ತೆ ನಿರ್ಮಿಸಿ, ಉಳಿದ 35 ಮೀಟರ್ ಜಾಗದಲ್ಲಿ ವಾಣಿಜ್ಯ ಭೂಮಿ ಕೊಡುವುದಾಗಿ ಬಿಡಿಎ ಹೇಳಿದೆ. ಸ್ವಾಧೀನಪಡಿಸಿಕೊಂಡ 65 ಮೀಟರ್‌ ರಸ್ತೆಗೆ ಏಕೆ ಪರಿಹಾರ ನೀಡುತ್ತಿಲ್ಲ?. ಅಲ್ಲದೆ, ಟಿಡಿಆರ್ ಅಥವಾ ಎಫ್ಎಆರ್ ನಿಂದ ರೈತರಿಗೆ ಅನುಕೂಲವಿಲ್ಲ. ಟಿಡಿಆರ್ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡಿಲ್ಲ. ಪರಿಹಾರ ಆಯ್ಕೆಗಳು ಸಂವಿಧಾನ ವಿರೋಧಿಯಾಗಿದೆ. ಕೇಂದ್ರ ಸರ್ಕಾರದ 2013ರ ಭೂ ಸ್ವಾಧೀನ ಮತ್ತು ಪುನರ್ವಸತಿ ಕಾಯ್ದೆಗೂ ವಿರುದ್ಧವಾಗಿದೆ. ಹಲವು ಯೋಜನೆಗಳಲ್ಲಿ ಹೊಸ ಕಾಯ್ದೆ ಅಳವಡಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರೂ ಸರ್ಕಾರ ಪಾಲಿಸುತ್ತಿಲ್ಲ’ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರ್ಥಿಕ ನೆರವು ನೀಡದಂತೆ ಮನವಿ

ಬಿಬಿಸಿ ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನಕ್ಕೆ ಬಿಡಿಎ ತಯಾರಿ ನಡೆಸಿರುವ ನಡುವೆಯೇ ಹಣಕಾಸು ನೆರವು ತಡೆ ಹಿಡಿಯುವಂತೆ ಪಿಆರ್‌ಆರ್‌ ರೈತ ಹಾಗೂ ನಿವೇಶನದಾರರ ಸಂಘವು ವಸತಿ ಮತ್ತು ನಗರಾಭಿವೃದ್ಧಿ ನಿಗಮ (ಹುಡ್ಕೊ)ಕ್ಕೆ ಮನವಿ ಮಾಡಿದೆ.

ಯೋಜನೆಯಲ್ಲಿರುವ ಕಾನೂನು ಆರ್ಥಿಕ ಮತ್ತು ಕಾರ್ಯಾಚರಣೆಯ ಲೋಪದೋಷಗಳು ಅಪಾಯಗಳ ಬಗ್ಗೆ ತಿಳಿಸುವ ಮೂಲಕ ಯೋಜನೆಗೆ ಹಣಕಾಸು ನೆರವು ನೀಡುವುದನ್ನು ತಡೆಹಿಡಿಯುವಂತೆ ಒತ್ತಾಯಿಸಿ ಪತ್ರ ಬರೆಯಲಾಗಿದೆ.  ಮೊದಲ ಹಂತದಲ್ಲಿ 350 ಎಕರೆ ಸ್ವಾಧೀನಕ್ಕೆ ನೋಟಿಸ್‌ ನೀಡಲು ಸಿದ್ಧತೆ ನಡೆಸಿದೆ. ಭೂ ಮಾಲೀಕರ ಹಿತಾಸಕ್ತಿ ಕಡೆಗಣಿಸಿ ಪ್ರಕರಣ ನ್ಯಾಯಾಲಯದಲ್ಲಿದ್ದರೂ ಸ್ವಾಧೀನಕ್ಕೆ ಮುಂದಾದ ಬೆನ್ನಲ್ಲೆ ಬಾಧಿತ ಭೂ ಮಾಲೀಕರು ರೈತರು ನಿವೇಶನದಾರರು ಯೋಜನೆಗೆ ಹಣಕಾಸು ನೆರವು ಒದಗಿಸುತ್ತಿರುವ ಹುಡ್ಕೊ ಮೊರೆಹೋಗಿದೆ.

ಈ ಯೋಜನೆಯು 2007ರ ಅಂತಿಮ ಅಧಿಸೂಚನೆಯ ಆಧಾರದ ಮೇಲೆ ಮೂಲ ಸ್ವಾಧೀನ ಯೋಜನೆ ಕಾನೂನುಬದ್ಧವಾಗಿ (ಬಿಡಿಎ ಕಾಯ್ದೆ –1976ರ ಸೆಕ್ಷನ್ 27ರ ಅಡಿ) ಮುಕ್ತಾಯಗೊಂಡಿದೆ. ಪಿಆರ್‌ಆರ್ ಭೂಮಿಗಳಿಗೆ ಮಾರ್ಗದರ್ಶಿ ಮೌಲ್ಯವನ್ನು 2016ರಲ್ಲಿ ಕೃತಕವಾಗಿ ಶೇಕಡ 50ಕ್ಕಿಂತ ಹೆಚ್ಚು ಕಡಿಮೆ ಮಾಡಲಾಗಿದೆ. ಎಲ್‌ಎಆರ್‌ಆರ್ ಕಾಯ್ದೆ–2013ರಡಿ ಪರಿಹಾರಕ್ಕಾಗಿ ಒತ್ತಾಯಿಸಲಾಗಿದೆ.

ಯೋಜನೆಯ ಅಂದಾಜು ವೆಚ್ಚ ₹27 ಸಾವಿರ ಕೋಟಿಗೂ ಅಧಿಕವಾಗಲಿದ್ದು ಸಾರ್ವಜನಿಕ–ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಸಾಧ್ಯವಾಗುವುದಿಲ್ಲ ಎಂದು ಪತ್ರದಲ್ಲಿ ವಿವರಿಸಲಾಗಿದೆ. ‘ಬಿಬಿಸಿ ಕಾನೂನುಬದ್ಧವಾಗಿ ಮುಕ್ತಾಯಗೊಂಡ ಯೋಜನೆಯಾಗಿದೆ. ಸೂಕ್ತ ಪರಿಹಾರ ಸೂತ್ರಗಳನ್ನು ನೀಡದ ಬಿಡಿಎ ಭೂಮಾಲೀಕರ ನಿವೇಶನದಾರರ ಭವಿಷ್ಯ ಹಿತಾಸಕ್ತಿ ಕಡೆಗಣಿಸಿ ಭೂಸ್ವಾಧೀನಕ್ಕೆ ನಿರ್ಧರಿಸಿತ್ತು. ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಯಾವ ಕಾರಣಕ್ಕೆ ಆರ್ಥಿಕ ನೆರವು ನೀಡಬಾರದು ಎಂಬುದನ್ನು ‌ಹುಡ್ಕೊಗೆ ಬರೆದ ಪತ್ರದಲ್ಲಿ ವಿವರಿಸಲಾಗಿದೆ ’ ಎಂದು ಸಂಘದ ಅಧ್ಯಕ್ಷ ಶ್ರೀನಿವಾಸ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.