ADVERTISEMENT

ಬೆಂಗಳೂರು ಬಿಸಿನೆಸ್ ಕಾರಿಡಾರ್: ರೈತರೊಂದಿಗಿನ ಸಭೆ ವಿಫಲ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 18:59 IST
Last Updated 30 ಜುಲೈ 2025, 18:59 IST
ರೈತರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು
ರೈತರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು   

ಹೆಸರಘಟ್ಟ: ಬೆಂಗಳೂರು ಬಿಸಿನೆಸ್ ಕಾರಿಡಾರ್ (ಪಿಆರ್‌ಆರ್‌) ನಿರ್ಮಾಣ ಸಂಬಂಧ ಭೂಸ್ವಾಧೀನಕ್ಕೊಳಪಡುವ ಜಮೀನಿನ ರೈತರೊಂದಿಗೆ ಮಾತುಕತೆ ನಡೆಸಲು ಬುಧವಾರ ಬಿಡಿಎ ಅಧಿಕಾರಿಗಳು ಕರೆದಿದ್ದ ಸಭೆ ವಿಫಲವಾಯಿತು.

ಬೆಂಗಳೂರು ಉತ್ತರ ತಾಲ್ಲೂಕು ದಾಸನಪುರ ಹೋಬಳಿಯ ಆಲೂರು ಗ್ರಾಮ ಪಂಚಾಯತಿಯಲ್ಲಿ ಕಂದಾಯ ಇಲಾಖೆ ಹಾಗೂ ಬಿಡಿಎ ಅಧಿಕಾರಿಗಳು ಈ ಸಭೆ ಕರೆದಿದ್ದರು. ಅಧಿಕಾರಿಗಳಿಗೂ ರೈತರಿಗೂ ಮಧ್ಯೆ ಸಮನ್ವಯ ಬಾರದ ಕಾರಣ ಅಧಿಕಾರಿಗಳ ತಂಡ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಹೊರನಡೆದರು.

‘ಪಿಆರ್‌ಆರ್‌ ನಿರ್ಮಾಣದಿಂದ ಭೂಮಿ ಕಳೆದುಕೊಳ್ಳುವ ರೈತರಿಗೆ ನೋಟಿಸ್‌ ನೀಡದೇ ಅಥವಾ ದಿನ ಪತ್ರಿಕೆಗಳಲ್ಲಿ ಸಭೆ‌ ಕುರಿತು ಜಾಹೀರಾತು ನೀಡದೇ, ಕೆಲವು ಮಧ್ಯವರ್ತಿಗಳ ಮೂಲಕ ಏಕಾಏಕಿ ಸಭೆಗೆ ಆಹ್ವಾನಿಸಿ ಅಭಿಪ್ರಾಯಗಳನ್ನು ಲಿಖಿತ ರೂಪದಲ್ಲಿ ಕೊಡಿ ಎಂದರೆ ಹೇಗೆ? ಎಂದು ಸಭೆಯಲ್ಲಿದ್ದ ರೈತರು, ಅಧಿಕಾರಿಗಳನ್ನು ಪ್ರಶ್ನಿಸಿದರು.

ADVERTISEMENT

‘ಕಾನೂನಾತ್ಮಕವಾಗಿ ಸಭೆಯನ್ನು ಕರೆಯದೆ, ರೈತರನ್ನು ಬೆದರಿಸಿ ಅಭಿಪ್ರಾಯ ಕೇಳುತ್ತೀರಾ’ ಎಂದು ಅಧಿಕಾರಿಗಳ ವಿರುದ್ದ ರೈತರು ಮುಗಿಬಿದ್ದರು. ‘ಸ್ವಾಧೀನಕ್ಕೊಳಪಡುವ ಭೂ ಮಾಲೀಕರಿಗೆ 2013ರ ಕಾಯ್ದೆ ಪ್ರಕಾರ ಪರಿಹಾರ ನೀಡದೇ ರೈತರನ್ನು ದಾರಿ ತಪ್ಪಿಸಲು ಇಂತಹ ಸಭೆಗಳನ್ನು ನಡೆಸುತ್ತಿದ್ದೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘2007ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿದ್ದ ಪಿಆರ್‌ಆರ್‌ಗೆ 20 ವರ್ಷ ಕಳೆದರೂ ಈವರೆಗೆ ಪರಿಹಾರ ನಿಗದಿ ಮಾಡಿಲ್ಲ. ಇದರಿಂದ ಜಮೀನಿನಲ್ಲಿ ವ್ಯವಸಾಯ ಮಾಡಲೂ ಆಗದೇ, ಅದನ್ನು ಮಾರಾಟ ಮಾಡಿ ನಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳಲು ಆಗದೇ ನಮ್ಮನ್ನು ತ್ರಿಶಂಕು ಸ್ಥಿತಿಯಲ್ಲಿ ಇಡಲಾಗಿದೆ’ ಎಂದು ತಮ್ಮೇನಹಳ್ಳಿ ಗ್ರಾಮದ ಶ್ರೀನಿವಾಸ ರೆಡ್ಡಿ ಕಿಡಿಕಾರಿದರು. ‘ಈ ರಸ್ತೆ ಯೋಜನೆಯೇ ರದ್ದಾಗಬೇಕು’ ಎಂದು ತೋಟದ ಗುಡ್ಡದಹಳ್ಳಿ ರೈತ ಗೋವಿಂದರಾಜು ಆಗ್ರಹಿಸಿದರು‌.

'ಪಿಆರ್‌ಆರ್‌ ವಿರೋಧಿಸಿ ನ್ಯಾಯಾಲಯಗಳಲ್ಲಿ ಮೊಕದ್ದಮೆಗಳು ನಡೆಯುತ್ತಿವೆ. ಅಂತಹದರಲ್ಲಿ ಬಿಡಿಎ ಅಧಿಕಾರಿಗಳು ಇಂತಹ ಸಭೆಗಳನ್ನು ನಡೆಸುವ ಮೂಲಕ ನ್ಯಾಯಾಂಗ ನಿಂದನೆ ಮಾಡುತ್ತಿದ್ದಾರೆ' ಎಂದು ಆರೋಪಿಸಿದರು. ತಹಶೀಲ್ದಾರ್ ಅನಿಲ್ ಕುಮಾರ್ ನೇತೃತ್ವದಲ್ಲಿ ಕಂದಾಯ ಇಲಾಖೆ ಮತ್ತು ಬಿಡಿಎ ಅಧಿಕಾರಿಗಳು ಸಭೆ ನಡೆಸಿದರು. 

ಆಲೂರು ಪಂಚಾಯಿತಿ ಅಧ್ಯಕ್ಷೆ ಪುಷ್ಪ ಮಂಜುನಾಥ್, ಉಪಾಧ್ಯಕ್ಷೆ ಪದ್ಮಾವತಿ ಮಂಜುನಾಥ್, ಸದಸ್ಯರಾದ ಲಕ್ಷ್ಮೀ ನರಸಿಂಹಯ್ಯ, ಜಯರಾಮ, ಶಿವಕುಮಾರ್ ಹಾಗೂ ಪಿಆರ್‌ಆರ್ ರಸ್ತೆಗೆ ಭೂಸ್ವಾಧೀನಕ್ಕೊಳಪಡುವ ಕುದುರೆಗೆರೆ, ತಮ್ಮೇನಹಳ್ಳಿ, ತಮ್ಮೇನಹಳ್ಳಿ ಪಾಳ್ಯ, ತೋಟದಗುಡ್ಡದಹಳ್ಳಿ, ಹೆಗ್ಗಡದೇವನಪುರ ಗ್ರಾಮಗಳ ಸಂತ್ರಸ್ತ ರೈತರು ಸಭೆಯಲ್ಲಿ ಭಾಗವಹಿಸಿ, ಬಿಡಿಎ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.